ಅಕನಾಪುರ ಚಿತ್ರಣ ಬದಲಿಸಿದ ಕೆರೆ

7
500 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ, ಗ್ರಾಮಸ್ಥರ ಸಂತಸ

ಅಕನಾಪುರ ಚಿತ್ರಣ ಬದಲಿಸಿದ ಕೆರೆ

Published:
Updated:
ಅಕನಾಪುರ ಚಿತ್ರಣ ಬದಲಿಸಿದ ಕೆರೆ

ಔರಾದ್: ದಶಕದ ಹಿಂದೆ ಕುಡಿಯುವ ನೀರಿಗಾಗಿ ಪರದಾಡಬೇಕಾಗಿದ್ದ ತಾಲ್ಲೂಕಿನ ಅಕನಾಪುರ ಗ್ರಾಮದ ಚಿತ್ರಣ ಈಗ ಸಂಪೂರ್ಣ ಬದಲಾಗಿದೆ. ಗ್ರಾಮಸ್ಥರೆಲ್ಲ ಸೇರಿ ಕೆರೆ ನಿರ್ಮಿಸಿದ್ದು, ಕೆರೆಯಲ್ಲಿ ನೀರು ಸಂಗ್ರಹವಾಗಿದೆ.

2008ಕ್ಕೂ ಮೊದಲು ಮೊದಲು ಈ ಗ್ರಾಮದಲ್ಲಿ ಒಂದು ಕೊಡ ಕುಡಿಯುವ ನೀರು ತರಲು 3 ಕಿ.ಮೀ. ದೂರ ಹೋಗಬೇಕಾಗಿತ್ತು. ಆದರೆ, ಈಗ ಪ್ರತಿ ಮನೆಯಲ್ಲಿ ದಿನದ 24 ಗಂಟೆ ನೀರು ಪೂರೈಕೆಯಾಗುತ್ತಿದೆ.

ಇದಕ್ಕೆಲ್ಲ ಕಾರಣ ಒಂದು ಕೆರೆ ನಿರ್ಮಾಣ. ಎರಡು ದಶಕದ ಹೋರಾಟದ ಫಲವಾಗಿ 2008ನೇ ಸಾಲಿನಲ್ಲಿ ₹1.5 ಕೋಟಿ ವೆಚ್ಚದಲ್ಲಿ ಕೆರೆ ನಿರ್ಮಾಣ ಮಾಡಲಾಗಿದೆ. 60 ಎಕರೆ ಪ್ರದೇಶದ ವ್ಯಾಪ್ತಿಯಲ್ಲಿರುವ ಈ ಕೆರೆ 11 ಮೀಟರ್ ಆಳ ಇದೆ. ವರ್ಷದ 12 ತಿಂಗಳು ಕೆರೆಯಲ್ಲಿ  ನೀರು ಸಿಗುತ್ತದೆ.

ಗ್ರಾಮದ 60 ಮನೆಗಳ ಪೈಕಿ 50 ಮನೆ ರೈತರು ಈ ಕೆರೆ ನೀರು ಉಪಯೋಗಿಸುತ್ತಿದ್ದಾರೆ. 500 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಸಿಕ್ಕಿದೆ. ಈ ಗ್ರಾಮದ ಜನ ಪ್ರತಿ ವರ್ಷ ಸುಮಾರು ₹ 1 ಕೋಟಿ ಮೌಲ್ಯದ ರೇಷ್ಮೆ ಬೆಳೆಯುತ್ತಾರೆ.

ಗ್ರಾಮದ ಗೋವಿಂದ ಪಾಟೀಲ ಅವರು ಪ್ರತಿ ವರ್ಷ ₹ 6ರಿಂದ 8 ಲಕ್ಷದ ರೇಷ್ಮೆ ಬೆಳೆಯುತ್ತಾರೆ. ಅವರು ತಮ್ಮ 20 ಎಕರೆ ಹೊಲದಲ್ಲಿ 10 ಸಾವಿರ ಶ್ರೀಗಂಧ, 10 ಸಾವಿರ ಹೆಬ್ಬೇವು ಗಿಡ ನಾಟಿ ಮಾಡಿದ್ದಾರೆ. ಗ್ರಾಮದ ಎಲ್ಲ 500 ಎಕರೆ ಪ್ರದೇಶದಲ್ಲಿ ಮಾವು, ಪಪ್ಪಾಯಿ, ಬಾಳೆ, ಸಿತಾಫಲ ಸೇರಿ ವಿವಿಧ ತೋಟಗಾರಿಕೆ ಬೆಳೆ ಬೆಳೆದಿದ್ದಾರೆ. ಇಡೀ ಗ್ರಾಮ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಬೇಸಿಗೆಯಲ್ಲೂ ತಂಪಾದ ಗಾಳಿ ಬೀಸುತ್ತದೆ.

ಬದಲಾದ ಬದುಕು: ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಔರಾದ್ ತಾಲ್ಲೂಕಿನ ಕೊನೆಯ ಗ್ರಾಮ ಅಕನಾಪುರ. 2008ಕ್ಕೂ ಮೊದಲು ನಮ್ಮ ಜೀವನ ನರಕ ಆಗಿತ್ತು. ಬೇಸಿಗೆ ಮೂರು ತಿಂಗಳು ಕುಡಿಯುವ ನೀರಿಗಾಗಿ ಅಹೋರಾತ್ರಿ ಪರದಾಡಬೇಕಿತ್ತು. ಊರಿಗೆ ರಸ್ತೆ ಇರಲಿಲ್ಲ. ತುರ್ತು ಸಂದರ್ಭದಲ್ಲಿ ರೋಗಿಯನ್ನು  ಆಸ್ಪತ್ರೆಗೆ ಕರೆದೊಯ್ಯಲು ಹರಸಾಹಸ ಪಡಬೇಕಾಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಗ್ರಾಮಸ್ಥರು.

ಗ್ರಾಮದ ಹಿರಿಯ ಮುಖಂಡ ಭಾನುದಾಸರಾವ್ ಪಾಟೀಲ ಅವರ ದೀರ್ಘ ಕಾಲದ ಹೊರಾಟದ ಫಲವಾಗಿ ಕೆರೆ ನಿರ್ಮಾಣ ಆದಾಗಿನಿಂದ ಗ್ರಾಮದಲ್ಲಿ ನೆಮ್ಮದಿ ಇದೆ. ಈಗ ಅಡುಗೆ ಮನೆವರೆಗೂ ನೀರು ಬರುತ್ತಿದೆ. ಎಲ್ಲರ ಮನೆಯಲ್ಲೂ ಶೌಚಾಲಯ ಇದೆ. ರೇಷ್ಮೆ ಬೆಳೆದು ಕೈತುಂಬ ಹಣ ಬರುತ್ತಿದೆ. ಊರಿಗೆ ರಸ್ತೆ ಮಾಡಿಕೊಂಡಿದ್ದೇವೆ. ಬಹುತೇಕ ಎಲ್ಲ ಮನೆಗಳಲ್ಲಿ ಬೈಕ್‌ಗಳಿವೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದೇವೆ. ಮೈಮುರಿದು ದುಡಿಯುವುದನ್ನು ಬಿಟ್ಟರೆ ನಮಗೆ ಬೇರೇನೂ ಇಲ್ಲ’ ಎಂದು ಅಕನಾಪುರ ರೈತ ಗೋವಿಂದ ಪಾಟೀಲ ಸಂತಷದಿಂದ ಹೇಳುತ್ತಾರೆ.

**

ಅಕನಾಪುರದ ಬಹುತೇಕ ರೈತರು ಶ್ರೀಗಂಧ, ಹೆಬ್ಬೇವು ಬೆಳೆಯಲು ಮುಂದೆ ಬಂದಿದ್ದಾರೆ. ಅವರೆಲ್ಲರಿಗೂ ಇಲಾಖೆಯಿಂದ ಅಗತ್ಯ ನೆರವು ನೀಡಲಾಗಿದೆ

ಹಾವಪ್ಪ ಶೆಂಬೆಳ್ಳೆ, ಉಪ ಅರಣ್ಯಾಧಿಕಾರಿ, ಔರಾದ್ 

ಮನ್ಮಥಪ್ಪ ಸ್ವಾಮಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry