ಎಸ್‌ಸಿ/ಎಸ್‌ಟಿ ನೌಕರರ ಬಡ್ತಿ ಮೀಸಲಿಗೆ ಅಡ್ಡಿ ಇಲ್ಲ: ‘ಸುಪ್ರೀಂ’

7

ಎಸ್‌ಸಿ/ಎಸ್‌ಟಿ ನೌಕರರ ಬಡ್ತಿ ಮೀಸಲಿಗೆ ಅಡ್ಡಿ ಇಲ್ಲ: ‘ಸುಪ್ರೀಂ’

Published:
Updated:
ಎಸ್‌ಸಿ/ಎಸ್‌ಟಿ ನೌಕರರ ಬಡ್ತಿ ಮೀಸಲಿಗೆ ಅಡ್ಡಿ ಇಲ್ಲ: ‘ಸುಪ್ರೀಂ’

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ಎಸ್‌ಸಿ/ಎಸ್‌ಟಿ) ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವುದಕ್ಕೆ ಯಾವುದೇ ನಿಷೇಧ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್‌ ಈ ಹಿಂದೆ ನೀಡಿದ ಆದೇಶಗಳಿಂದಾಗಿ ಎಸ್‌ಸಿ/ಎಸ್‌ಟಿ ನೌಕರರ ಬಡ್ತಿ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿತು. ಅದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿಗಳಾದ ಆದರ್ಶ ಕುಮಾರ್ ಗೋಯಲ್‌ ಮತ್ತು ಅಶೋಕ್‌ ಭೂಷಣ್‌ ಅವರಿದ್ದ ರಜಾ ಕಾಲದ ಪೀಠವು, ‘ಕಾನೂನಿಗೆ ಅನುಗುಣವಾಗಿ ಬಡ್ತಿ ನೀಡಲು ಯಾವುದೇ ಅಡ್ಡಿ ಇಲ್ಲ’ ಎಂದು ತಿಳಿಸಿತು.

ಮೇ 17ರಂದು ಸುಪ್ರೀಂ ಕೋರ್ಟ್‌ ನೀಡಿದ ಆದೇಶದಿಂದಾಗಿ ಎಸ್‌ಸಿ/ಎಸ್‌ಟಿ ಸಮುದಾಯದ ನೌಕರರಿಗೆ ಬಡ್ತಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಮನೀಂದರ್‌ ಸಿಂಗ್‌ ವಾದಿಸಿದರು.

‘ಎಂ. ನಾಗರಾಜ್‌ ಪ್ರಕರಣದ ತೀರ್ಪನ್ನು ಅನುಸರಿಸದೆ ಬಡ್ತಿ ನೀಡುವುದಕ್ಕೆ ಹೇಗೆ ಸಾಧ್ಯ’ ಎಂದು ಪೀಠ ಪ್ರಶ್ನಿಸಿತು. ಬಡ್ತಿಯಲ್ಲಿ ಮೀಸಲಾತಿ ನೀಡಬೇಕಿದ್ದರೆ ಆ ಸಮುದಾಯಕ್ಕೆ ಸಾಕಷ್ಟು ಪ್ರಾತಿನಿಧ್ಯ ಇಲ್ಲ ಎಂಬುದನ್ನು ಅಂಕಿ ಅಂಶಗಳು ದೃಢಪಡಿಸಬೇಕು ಎಂದು ನಾಗರಾಜ್‌ ಪ್ರಕರಣದ ತೀರ್ಪಿನಲ್ಲಿ ಹೇಳಲಾಗಿತ್ತು.

ಎಸ್‌ಸಿ/ಎಸ್‌ಟಿ ನೌಕರರಿಗೆ ಸರ್ಕಾರದ ಎಲ್ಲ ಇಲಾಖೆಗಳು ಬಡ್ತಿಯಲ್ಲಿ ಮೀಸಲಾತಿ ನೀಡುವುದಕ್ಕೆ ಅವಕಾಶ ಒದಗಿಸುವ ಅಧಿಸೂಚನೆಯನ್ನು1997ರ ಆಗಸ್ಟ್‌ 13ರಂದು ಹೊರಡಿಸಲಾಗಿತ್ತು. ಅದನ್ನು ದೆಹಲಿ ಹೈಕೋರ್ಟ್‌ 2017ರ ಆಗಸ್ಟ್‌ 23ರಂದು ರದ್ದು ಮಾಡಿದೆ. ದೆಹಲಿ ಹೈಕೋರ್ಟ್‌ನ ನಿರ್ಧಾರದ ವಿರುದ್ಧ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.

ಯಾವುದೇ ವಿಚಾರದ ಬಗ್ಗೆ ಹೆಚ್ಚಿನ ಸ್ಪಷ್ಟನೆ ನೀಡುವುದು ಈಗ ಸಾಧ್ಯವಿಲ್ಲ. ಈಗ ನೀಡುವ ಬಡ್ತಿಯು ಮುಂದಿನ ಆದೇಶಕ್ಕೆ ಬದ್ಧವಾಗಿರುತ್ತದೆ. ಸರ್ಕಾರವು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದು ಎಂದಷ್ಟೇ ಪೀಠ ಹೇಳಿದೆ.

ಎಸ್‌ಸಿ/ಎಸ್‌ಟಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ವಿಚಾರವನ್ನು ಸುಪ‍್ರೀಂ ಕೋರ್ಟ್‌ನ 9 ಸದಸ್ಯರ ಸಂವಿಧಾನ ಪೀಠ 1992ರಲ್ಲಿ ವಿಚಾರಣೆಗೆ ಒಳಪಡಿಸಿತ್ತು. ಐದು ವರ್ಷ ಬಡ್ತಿಯಲ್ಲಿ ಮೀಸಲಾತಿ ನೀಡಬಹುದು ಎಂದು 1992ರ ನವೆಂಬರ್‌ 16ರಂದು ತೀರ್ಪು ನೀಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry