ಸ್ಥಾನಕ್ಕೆ ಪಟ್ಟು: ವರಿಷ್ಠರಿಗೆ ಇಕ್ಕಟ್ಟು

7

ಸ್ಥಾನಕ್ಕೆ ಪಟ್ಟು: ವರಿಷ್ಠರಿಗೆ ಇಕ್ಕಟ್ಟು

Published:
Updated:
ಸ್ಥಾನಕ್ಕೆ ಪಟ್ಟು: ವರಿಷ್ಠರಿಗೆ ಇಕ್ಕಟ್ಟು

ಬೆಂಗಳೂರು/ನವದೆಹಲಿ: ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಎರಡು ವಾರಗಳ ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಗೆ ಬುಧವಾರ (ಜೂನ್‌ 6) ಮುಹೂರ್ತ ನಿಗದಿಯಾಗಿದ್ದರೂ, ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ವಿಷಯದಲ್ಲಿ ಮಂಗಳವಾರ ತಡರಾತ್ರಿಯವರೆಗೂ ಉಭಯ ಪಕ್ಷಗಳ ನಾಯಕರು ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ.

ದೆಹಲಿಯಲ್ಲಿ ಬೀಡು ಬಿಟ್ಟಿರುವ ಕಾಂಗ್ರೆಸ್‌ ನಾಯಕರು ಹಾಗೂ ಶಾಸಕರು ಬೆಳಿಗ್ಗೆ 9 ಗಂಟೆಯಿಂದ ಇಡೀ ದಿನ ಹಲವು ಸುತ್ತಿನ ಸಭೆ ನಡೆಸಿದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಅವಿರತ ಸಮಾಲೋಚನೆಗಳು ನಡೆದವು. ಆದರೆ, ಸಂಪುಟದಲ್ಲಿ ಯಾರು ಇರುತ್ತಾರೆ ಎಂಬ ಪಟ್ಟಿ ರಾತ್ರಿ 9.45ರವರೆಗೂ ಸಿದ್ಧವಾಗಲಿಲ್ಲ. ಕ್ಷಣಕ್ಷಣಕ್ಕೂ ಗೊಂದಲ, ಅಸಮಾಧಾನಗಳು ಹೆಚ್ಚಾಗ ತೊಡಗಿತು. ಕೆಲವು ಶಾಸಕರು ರಾಜೀನಾಮೆ ಬೆದರಿಕೆ ಹಾಕಿದ್ದು ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿತು.

ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರ ಮನೆಗೆ ಎಡತಾಕಿದ ಪಕ್ಷದ ಶಾಸಕರು ಮಂತ್ರಿ ಮಂಡಲಕ್ಕೆ ಸೇರಲೇಬೇಕು ಎಂದು ಹರಸಾಹಸ ನಡೆಸಿದರು. ಎಚ್.ವಿಶ್ವನಾಥ್, ಬಸವರಾಜ ಹೊರಟ್ಟಿ ಸೇರಿದಂತೆ ಅನೇಕರು ನಿರಾಶೆಯಿಂದ ಹೊರಬಂದಿದ್ದು ನಡೆಯಿತು. ಇರುವ 11 ಸ್ಥಾನಗಳನ್ನು ಯಾರಿಗೆ ಹಂಚಬೇಕು ಎಂಬ ವಿಷಯದಲ್ಲಿ ಅಂತಿಮ ನಿರ್ಣಯಕ್ಕೆ ಬರಲು ಸಾಧ್ಯವಾಗದೇ ಜೆಡಿಎಸ್‌ನ ನಾಯಕರು ತಿಣುಕಾಡಿದರು.

‘ಕೈ’ 15 ಸ್ಥಾನ ಭರ್ತಿ?: ಕಾಂಗ್ರೆಸ್‌ಗೆ ಉಪಮುಖ್ಯಮಂತ್ರಿ ಸೇರಿ 22 ಸಚಿವ ಸ್ಥಾನಗಳು ಹಂಚಿಕೆಯಾಗಿವೆ. ಅತೃಪ್ತಿ ಅಥವಾ ಬಂಡಾಯ ಭುಗಿಲೇಳದಂತೆ ಶಾಸಕರನ್ನು ಹಿಡಿದಿಡಲು 6 ಅಥವಾ 7 ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲು ಪಕ್ಷದ ನಾಯಕರು ಚಿಂತನೆ ನಡೆಸಿದ್ದಾರೆ.

ಬೆಳಿಗ್ಗೆಯೇ ದೆಹಲಿಯ ಕರ್ನಾಟಕ ಭವನದಲ್ಲಿ ನಾಯಕರು ಸಭೆ ಸೇರಿ ಚರ್ಚಿಸಿದರು. ಅದಾದ ಬಳಿಕ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮನೆಗೆ ತೆರಳಿದ ಸಂಸದರಾದ ಧ್ರುವನಾರಾಯಣ, ಚಂದ್ರಪ್ಪ, ಪ್ರಕಾಶ ಹುಕ್ಕೇರಿ, ಬಿ.ವಿ. ನಾಯಕ, ಬಿ.ಕೆ. ಹರಿಪ್ರಸಾದ್‌ ಅವರು 2019ರ ಲೋಕಸಭೆ ಚುನಾವಣೆ ದೃಷ್ಟಿಯಿಂದ  ಜಾತಿಯ ಪ್ರಾತಿನಿಧ್ಯದಡಿ ತಮ್ಮ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದರು.

ಸಂಸದರಾದ ಕೆ.ಎಚ್. ಮುನಿಯಪ್ಪ ಮತ್ತು ಚಂದ್ರಪ್ಪ ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಪರಿಶಿಷ್ಟ ಜಾತಿಯ ಎಡಗೈ ಮತ್ತು ವಾಲ್ಮೀಕಿ ಸಮುದಾಯಕ್ಕೆ ಆದ್ಯತೆ ಮೇರೆಗೆ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು. ಹಿರಿಯ ಶಾಸಕರಾದ ಆರ್.ವಿ. ದೇಶಪಾಂಡೆ ಹಾಗೂ ದಿನೇಶ್ ಗುಂಡೂರಾವ್ ಕೂಡ ರಾಹುಲ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾದರು.

ಹಲವು ಸುತ್ತಿನ ಸಭೆಗಳ ನಂತರ ಖರ್ಗೆ, ಸಿದ್ದರಾಮಯ್ಯ, ಪರಮೇಶ್ವರ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ಜತೆ ರಾಹುಲ್ ಐದು ಗಂಟೆಗೂ ಹೆಚ್ಚು ಹೊತ್ತು ಸಮಾಲೋಚನೆ ನಡೆಸಿದರು. ಆದರೆ, ಸಭೆ ಫಲ ನೀಡಲಿಲ್ಲ.

ರಾಜೀನಾಮೆ ಬೆದರಿಕೆ: ಸಚಿವ ಸ್ಥಾನ ನೀಡಲೇಬೇಕು ಎಂದು ಪಟ್ಟು ಹಿಡಿದಿರುವ ಹುಮ್ನಾಬಾದ್ ಶಾಸಕ ರಾಜಶೇಖರ ಪಾಟೀಲ, ಅವಕಾಶ ಸಿಗದೇ ಇದ್ದರೆ, ಸಭಾಧ್ಯಕ್ಷರನ್ನು ಭೇಟಿಯಾಗಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದರು. ಇದೇ ರೀತಿ ಅನೇಕ ಶಾಸಕರು ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದರಿಂದಾಗಿ, ನಾಯಕರು ದಿಕ್ಕೆಟ್ಟು ಕುಳಿತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್‌ ತಾತ್ಕಾಲಿಕ ಪಟ್ಟಿ: ಪಕ್ಷದ ಶಾಸಕರ ಪ್ರಬಲ ಒತ್ತಡ, ಪೈಪೋಟಿ ಮತ್ತು ಅಸಮಾಧಾನಗಳ ಮಧ್ಯೆಯೂ ರಾಜ್ಯ ಸಚಿವ ಸಂಪುಟ ಸೇರುವ ಒಂಬತ್ತು ಶಾಸಕರ ಪಟ್ಟಿಯನ್ನು ದೇವೇಗೌಡ ಅವರು ಬಹುತೇಕ ಆಖೈರುಗೊಳಿಸಿದ್ದಾರೆ.

ಎಚ್‌.ಡಿ.ರೇವಣ್ಣ,  ಜಿ.ಟಿ.ದೇವೇಗೌಡ,  ಡಿ.ಸಿ.ತಮ್ಮಣ್ಣ ಅಥವಾ ಸಿ.ಎಸ್‌. ಪುಟ್ಟರಾಜು, ಎ.ಟಿ.ರಾಮಸ್ವಾಮಿ, ಸತ್ಯನಾರಾಯಣ (ಎಲ್ಲರೂ ಒಕ್ಕಲಿಗರು), ಬಂಡೆಪ್ಪ ಕಾಶೆಂಪೂರ, ವೆಂಕಟರಾವ್‌ ನಾಡಗೌಡ ಮತ್ತು ಎಚ್‌.ಕೆ.ಕುಮಾರಸ್ವಾಮಿ ಹೆಸರು ಪಟ್ಟಿಯಲ್ಲಿದೆ.

ಕೊನೆಗಳಿಗೆಯಲ್ಲಿ ಒಂದೆರಡು ಹೆಸರು ಬದಲಾಗಬಹುದು ಎಂದು ಮೂಲಗಳು ತಿಳಿಸಿವೆ.

ಜಾತಿ, ಹಿರಿತನ ಮತ್ತು ಪ್ರಾದೇಶಿಕ ಸಮತೋಲನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಆಯ್ಕೆಗಳನ್ನು ಮಾಡಲಾಗಿದೆ. ಅಸಮಾಧಾನಗೊಂಡ ಶಾಸಕರನ್ನು ಖುದ್ದು ದೇವೇಗೌಡರೇ ಕರೆಸಿಕೊಂಡು ಅತೃಪ್ತಿ ಶಮನಗೊಳಿಸುವ ಕಸರತ್ತು ನಡೆಸಿದರು.

‘ಬಿಎಸ್‌ಪಿ ಶಾಸಕ ಮಹೇಶ್‌ ಅವರಿಗೆ ಮೊದಲ ಹಂತದಲ್ಲಿ ಸ್ಥಾನ ಕಲ್ಪಿಸಲು ಸಾಧ್ಯವಾಗುತ್ತಿಲ್ಲ, ಮುಂದೆ ಅವಕಾಶ ನೀಡುವುದಾಗಿ ಎಂದು ದೇವೇಗೌಡ ಅವರು ಆ ಪಕ್ಷದ ಮುಖ್ಯಸ್ಥೆ ಮಾಯವತಿ ಅವರಿಗೆ ಭರವಸೆ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪರಿಷತ್‌ ಸದಸ್ಯರ ಅಸಮಾಧಾನ: ಇತ್ತೀಚೆಗೆ ನಡೆದ ಶಾಸಕಾಂಗ ಪಕ್ಷದ ಎರಡು ಸಭೆಗಳಿಗೆ ತಮಗೆ ಆಹ್ವಾನ ನೀಡದಿರುವ ಬಗ್ಗೆ ಜೆಡಿಎಸ್‌ನ ವಿಧಾನಪರಿಷತ್‌ ಸದಸ್ಯರು ಅಸಮಾಧಾನಗೊಂಡಿದ್ದಾರೆ.

ಈ ಮಧ್ಯೆ ಮಂಡ್ಯದಲ್ಲಿ ಮಾತನಾಡಿರುವ ಬಸವರಾಜ ಹೊರಟ್ಟಿ, ‘ಈ ಬಾರಿ ನಾನು ಸಚಿವನಾಗುವುದಿಲ್ಲ. ವಿಧಾನಸಭೆಗೆ ಆಯ್ಕೆಯಾದವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗುತ್ತಿದೆ. ಸಚಿವನಾಗಬೇಕು ಎಂಬ ಆಸೆ ಇದ್ದದ್ದು ನಿಜ. ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಪಕ್ಷ ಹೇಳಿದ ಕೆಲಸವನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ’ ಎಂದು ಹೇಳಿದ್ದಾರೆ.

ಸಂಪುಟ : ‘ಕನ್ಯಾ ಲಗ್ನ’ದ ಮುಹೂರ್ತ!

‘ರಾಹು ಕಾಲ’ ಮುಗಿದ ಬಳಿಕ, ವಿಶ್ವಾಸ‌ಮತ ಯಾಚನೆ ಮಾಡಿದ್ದ ಜೆಡಿಎಸ್‌– ಕಾಂಗ್ರೆಸ್‌ ‘ದೋಸ್ತಿ’ ಸರ್ಕಾರ, ಇದೀಗ ಬುಧವಾರ ಮಧ್ಯಾಹ್ನ 2.12ಕ್ಕೆ ‘ಕನ್ಯಾ ಲಗ್ನ’ದ ‘ಶುಭ’ ಮುಹೂರ್ತದಲ್ಲಿ ಸಂಪುಟ ವಿಸ್ತರಣೆಗೆ ಮುಂದಾಗಿದೆ!

ರಾಜಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸಮಾರಂಭ ನಡೆಯಲಿದೆ.

ಕಾಂಗ್ರೆಸ್‌ಗೆ ‘ಇಂಧನ’

ಇಂಧನ ಖಾತೆಯನ್ನು ಮರಳಿ ಕಾಂಗ್ರೆಸ್‌ಗೆ ನೀಡಲು ಜೆಡಿಎಸ್‌ ತೀರ್ಮಾನಿಸಿದೆ. ಅದರ ಬದಲಿಗೆ ಬೆಂಗಳೂರು ಅಭಿವೃದ್ಧಿ ಖಾತೆ ಜೆಡಿಎಸ್‌ಗೆ ಸಿಗುವ ಸಾಧ್ಯತೆ ಇದೆ.

ಪರಿಷತ್‌ ಸದಸ್ಯರಿಗೆ ‘ಭಾಗ್ಯ’ ಇಲ್ಲ?

ಮೊದಲ ಬಾರಿಗೆ ಶಾಸಕರಾದವರಿಗೆ ಹಾಗೂ ವಿಧಾನಪರಿಷತ್ತಿನ ಸದಸ್ಯರಿಗೆ ಸಚಿವ ಸ್ಥಾನ ನೀಡದೇ ಇರಲು ಎರಡೂ ಪಕ್ಷಗಳು ನಿರ್ಧರಿಸಿವೆ.

ಆದರೆ, ಸಂಸದ ಕೆ.ಎಚ್. ಮುನಿಯಪ್ಪ ಪುತ್ರಿ, ವಿಧಾನಸಭೆಗೆ ಮೊದಲ ಬಾರಿ ಆಯ್ಕೆಯಾಗಿರುವ ರೂಪಾ ಶಶಿಧರ್‌ ವಿಷಯದಲ್ಲಿ ಈ ನಿಯಮ ಸಡಿಲಿಸಲು ಕಾಂಗ್ರೆಸ್‌ ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ.

ಕಾಂಗ್ರೆಸ್‌ನಲ್ಲಿ ಸಿ.ಎಂ. ಇಬ್ರಾಹಿಂ, ಎಸ್.ಆರ್. ಪಾಟೀಲ, ಆರ್.ಬಿ. ತಿಮ್ಮಾಪೂರ, ಎಚ್.ಎಂ. ರೇವಣ್ಣ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದರೆ, ಜೆಡಿಎಸ್‌ನಲ್ಲಿ ಬಸವರಾಜ ಹೊರಟ್ಟಿ ಕೆ.ಟಿ. ಶ್ರೀಕಂಠೇಗೌಡ, ಬಿ.ಎಂ. ಫಾರೂಕ್, ಸಿ.ಆರ್. ಮನೋಹರ ಆಕಾಂಕ್ಷಿಗಳಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry