ಪರಿಸರ ದಿನಾಚರಣೆ ನಿತ್ಯೋತ್ಸವ ಆಗಲಿ

7
ಜಿಲ್ಲೆಯ ವಿವಿಧೆಡೆ ವಿಶ್ವ ಪರಿಸರ ದಿನಾಚರಣೆಯ ಸಡಗರ; ಗಿಡ ನೆಟ್ಟು ಕಾಳಜಿ ಪ್ರದರ್ಶಿಸಿದ ಸಂಘ ಸಂಸ್ಥೆಗಳು; ಪರಿಸರ ರಕ್ಷಣೆಗೆ ಎಲ್ಲರ ಪಣ

ಪರಿಸರ ದಿನಾಚರಣೆ ನಿತ್ಯೋತ್ಸವ ಆಗಲಿ

Published:
Updated:
ಪರಿಸರ ದಿನಾಚರಣೆ ನಿತ್ಯೋತ್ಸವ ಆಗಲಿ

ತುಮಕೂರು: ‘ಪರಿಸರ ದಿನಾಚರಣೆ ಎಂಬುದು ಸಾಂಕೇತಿಕ ಆಚರಣೆಯಾಗದೇ ಅದು ನಿತ್ಯೋತ್ಸವ ಆಗಬೇಕು’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ರಾಜೇಂದ್ರ ಬಾದಾಮಿಕರ್ ಆಶಯ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಅರಣ್ಯ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ತುಮಕೂರು ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ್ಧ ವಿಶ್ವ ಪರಿಸರ ದಿನಾಚರಣೆ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದೈನಂದಿನ ಜೀವನದಲ್ಲಿ ಬಳಸುತ್ತಿರುವ ವಿಷಯುಕ್ತ ರಾಸಾಯನಿಕಗಳಿಂದ ಪರಿಸರ ವಿನಾಶದ ಅಂಚಿಗೆ ತಲುಪುತ್ತಿದೆ. ಪೂರ್ವಜರು ಉಳಿಸಿದ ಪರಿಸರವನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ತಿಳಿಸಿದರು.

ಗಿಡ ನೆಟ್ಟರೆ ಸಾಲದು: ‘ಪರಿಸರ ಸಂರಕ್ಷಣೆ ಮಾಡುತ್ತೇವೆ ಎಂದು ಗಿಡಗಳನ್ನು ನೆಟ್ಟು ಸುಮ್ಮನಾಗಿ ಬಿಟ್ಟರೆ ಸಾಲದು. ಮರವಾಗಿ ಬೆಳೆಯುವವರೆಗೂ ಪೋಷಣೆ ಮಾಡಬೇಕು. ಈ ವಿಷಯದಲ್ಲಿ ಪ್ರತಿ ನಾಗರಿಕನೂ ತನ್ನ ಹೊಣೆಗಾರಿಕೆ ಮೆರೆಯಬೇಕು. ಇಲ್ಲದೇ ಇದ್ದಲ್ಲಿ ಮನುಕುಲಕ್ಕೆ ಅಸ್ತಿತ್ವವೇ ಇರುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎಲ್.ಜಿನರಾಳ್ಕರ್ ಮಾತನಾಡಿ,‘ ಜನಸಾಮಾನ್ಯರಲ್ಲಿ ಪರಿಸರ ಪ್ರಜ್ಞೆ ಮೂಡಿಸಲು 1973ರಿಂದ ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ನಾವು ಗಿಡಗಳನ್ನು ಕೀಳುವುದಿಲ್ಲ. ನೀರು ಪೋಲು ಮಾಡುವುದಿಲ್ಲ. ಮಿತ ವಾಹನ ಬಳಕೆ, ಮಿತ ವಾಹನ ಬಳಕೆ, ಮಿತ ರಾಸಾಯನಿಕ ಬಳಕೆ, ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡುತ್ತೇವೆ ಎಂದು ಎಲ್ಲರೂ ಪ್ರತಿಜ್ಞೆ ಮಾಡಬೇಕು. ಈ ರೀತಿ ಪ್ರತಿಜ್ಞೆ ಮಾಡುವುದರಿಂದ ಪರಿಸರ ಸಂರಕ್ಷಣೆ ಸಾಧ್ಯವಿದೆ ಎಂದು ಸಲಹೆ ನೀಡಿದರು.

ಎಲೈಟ್ ಈಜೀ ಎಜ್ಯುಕೇಶನ್ ಸಂಸ್ಥೆಯ ಟಿ.ಎನ್.ಚಂದ್ರಕಾಂತ್ ಮಾತನಾಡಿ, ‘ಪರಿಸಂರಕ್ಷಣೆ ಎಂಬುದು ತೋರಿಕೆಗೆ ಮಾಡುವ ಕಾರ್ಯವಾಗದೇ ಬದುಕಿನ ಅಂಗವಾಗಬೇಕು’ ಎಂದು ನುಡಿದರು.

ಪರಿಸರ ಶಿಕ್ಷಣ ಕೇಂದ್ರದ ಯೋಜನಾಧಿಕಾರಿ ಎನ್.ರವಿಶಂಕರ್ ಉಪನ್ಯಾಸ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಮಂಜುನಾಥ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಎಚ್.ಹರಿಕುಮಾರ್, ಪರಿಸರ ಅಧಿಕಾರಿ ಭೀಮಸಿಂಗ್ ಗೋಗಿ ಇದ್ದರು.

ಪರಿಸರ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅನೀಸ್ ಕಣ್ಮಣಿ ಜಾಯ್ ಚಾಲನೆ ನೀಡಿದರು. ಜಾಥಾದಲ್ಲಿ ಶಾಲಾ ಮಕ್ಕಳು ಪರಿಸರ ಸಂರಕ್ಷಣಾ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.

ಬಸ್ಸುಗಳ ಹೊಗೆಯಿಂದ ಮಾಲಿನ್ಯ

ತುಮಕೂರು: ವಾಹನಗಳು ಹೆಚ್ಚು ಹೊಗೆ ಬಿಡದ ರೀತಿಯಲ್ಲಿ ಸುಸಜ್ಜಿತವಾಗಿ ವಾಹನಗಳನ್ನು ನಿರ್ವಹಣೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್ ತಿಳಿಸಿದರು.

ನಗರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎರಡನೇ ಘಟಕದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು  ಮಾತನಾಡಿದರು.

ಬಸ್‌ಗಳ ಸಂಚಾರ ನಿರಂತರವಾಗಿದ್ದು, ಅವು ಬಿಡುವ ಹೊಗೆಯಿಂದ ಪರಿಸರ ಮಲಿನವಾಗಲು ಕಾರಣವಾಗುತ್ತಿದೆ. ಹಾಗಾಗಿ ಎಲ್ಲ ಘಟಕದಲ್ಲಿ ಹೆಚ್ಚೆಚ್ಚು ಮರ–ಗಿಡಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.

ಪ್ರಕೃತಿ ಎಂದರೆ ಕೇವಲ ಗಿಡ ಮರಗಳಲ್ಲ. ಗಾಳಿ, ಬೆಳಕು, ಮಣ್ಣು ಎಲ್ಲ ಒಳಗೊಂಡಿದೆ. ಪರಿಸರ ಮಾಲಿನ್ಯ ಈ ಎಲ್ಲವುಗಳ ಮೇಲೆ ಕೆಟ್ಟ ಪರಿಣಾಮ ಬೀರುವುದರಿಂದ ಮನುಷ್ಯ ಹೆಚ್ಚೆಚ್ಚು ಸಮಸ್ಯೆಗಳಿಗೆ ಒಳಗಾಗುತ್ತಿದ್ದಾನೆ ಎಂದು ಎಚ್ಚರಿಸಿದರು.

ಸಾಹಿತಿ ವಿ.ಡಿ.ಹನುಂತರಾಯಪ್ಪ ಮಾತನಾಡಿ, ಪ್ರಕೃತಿಯಲ್ಲಾಗುತ್ತಿರುವ ಅನೇಕ ಬದಲಾವಣೆಗೆ ಮನುಷ್ಯನೇ ನೇರ ಕಾರಣ ವಾಗಿದ್ದು, ಕಾಡುಗಳನ್ನು ನಾಶ ಮಾಡಿ ಪರಿಸರ ಅಸಮತೋಲನಕ್ಕೆ ಕಾರಣವಾಗಿದ್ದೇವೆ ಎಂದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎರಡನೇ ಘಟಕದ ವಿಭಾಗೀಯ ಸಂಚಲನಾಧಿಕಾರಿ ಫಕ್ರುದ್ಧೀನ್ ಮಾತನಾಡಿ, ಈ ವರ್ಷದ ಪರಿಸರ ದಿನಾಚರಣೆಯ ಘೋಷಣೆ ಪ್ಲಾಸ್ಟಿಕ್ ಮುಕ್ತ ವಿಶ್ವ. ಹಾಗಾಗಿ ಪ್ರತಿಯೊಬ್ಬರು ಪ್ಲಾಸ್ಟಿಕ್ ಉಪಯೋಗಿಸುವುದನ್ನು ನಿಲ್ಲಿಸಿ, ಮಣ್ಣಿನಲ್ಲಿ ಸರಾಗವಾಗಿ ಕರಗುವ ಬಟ್ಟೆ ಮತ್ತು ಕಾಗದದ ಬ್ಯಾಗ್‍ಗಳನ್ನು ಉಪಯೋಗಿಸಬೇಕು ಎಂದು ಸಲಹೆ ನೀಡದರು.

ಕಾರ್ಯಕ್ರಮದಲ್ಲಿ ವಿಭಾಗೀಯ ತಾಂತ್ರಿಕ ಶಿಲ್ಪಿ ಬಸವರಾಜು, ಕಾರ್ಮಿಕ ಕಲ್ಯಾಣಾಧಿಕಾರಿ ಹಂಸವೀಣಾ, ಘಟಕದ ವ್ಯವಸ್ಥಾಪಕ ಶಿವರಾಮ ನಾಯಕ್, ಸಿಬ್ಬಂದಿಗಳಾದ ಮಹೇಶ್, ಎಚ್.ಪಿ.ನಾಗರಾಜ್, ಬಸವರಾಜು, ಎಸ್.ನಾಗರಾಜಯ್ಯ, ರಾಜಶೇಖರ್ ಇದ್ದರು.

ಪ್ಲಾಸ್ಟಿಕ್ ಬಳಕೆ; ಪರಿಸರಕ್ಕೆ ಹಾನಿ

ಪಾವಗಡ: ಪ್ಲಾಸಿಕ್ ಬಳಕೆಯಿಂದ ಮಾರಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ವಿಜ್ಞಾನ ಶಿಕ್ಷಕ ಜಿ.ಎಚ್.ರೇಣುಕಾರಾಜ್ ತಿಳಿಸಿದರು.

ತಾಲ್ಲೂಕಿನ ಅರಸೀಕೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ಲಾಸ್ಟಿಕ್ ಉತ್ಪನ್ನಗಳಲ್ಲಿ ಸಂಗ್ರಹಿಸಿದ ಆಹಾರ, ಪಾನೀಯಗಳನ್ನು ಸೇವಿಸುವುದರಿಂದ ಪ್ಲಾಸ್ಟಿಕ್‌ನಲ್ಲಿರುವ ರಾಸಾಯನಿಕಗಳು ದೇಹ ಸೇರಿ, ಕ್ಯಾನ್ಸರ್‌ನಂತಹ ಮಾರಕ ರೋಗಗಳು ಬರಬಹುದು. ಹೀಗಾಗಿ, ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸಬಾರದು ಎಂದರು.

ಕೆರೆ, ನದಿಗಳಿಗೆ ಸೇರುವ ಪ್ಲಾಸ್ಟಿಕ್‌ನಿಂದ ಜಲಚರಗಳು ಸಾಯುತ್ತಿವೆ. ಪ್ಲಾಸ್ಟಿಕ್ ಕೊಳೆಯಲಾರದ ಉತ್ಪನ್ನ ಆಗಿರುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತಿದೆ. ನೀರು ಸೇವಿಸಲು ಬಳಸುವ ಪ್ಲಾಸ್ಟಿಕ್ ಬಾಟಲಿಯಲ್ಲಿ ಬಿ.ಪಿ.ಎ ರಾಸಾಯನಿಕಗಳಿವೆ. ಇವುಗಳಿಂದ ಹಾರ್ಮೋನ್‌ನಲ್ಲಿ ವ್ಯತ್ಯಾಸವಾಗಿ ನರ ಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇಷ್ಟೆಲ್ಲ ಹಾನಿ ಉಂಟು ಮಾಡುವ ಪ್ಲಾಸ್ಟಿಕ್ ವಸ್ತುಗಳ ಬಳಕೆ ಸಂಪೂರ್ಣ ನಿಷೇಧಿಸಬೇಕು ಎಂದರು.

ಮುಖ್ಯಶಿಕ್ಷಕ ತಿಮ್ಮಪ್ಪ ಮಾತನಾಡಿ, ಹೆಚ್ಚೆಚ್ಚು ಗಿಡಗಳನ್ನು ಬೆಳೆಸುವುದರ ಜೊತೆಗೆ ಪರಿಸರ ಮಾಲಿನ್ಯವಾಗದಂತೆ ತಡೆಯಬೇಕು. ಜಲಮಾಲಿನ್ಯ, ವಾಯುಮಾಲಿನ್ಯದಿಂದ ಪರಿಸರ ಅಸಮತೋಲವಾಗುತ್ತಿದೆ. ಸಮರ್ಪಕ ಕಸ ವಿಲೇವಾರಿ ಮೂಲಕ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.

ಶಾಲೆ ಆವರಣದಲ್ಲಿ ಮಕ್ಕಳಿಂದ ಸಸಿ ನೆಡೆಸಲಾಯಿತು. ಕಸ ವಿಲೇವಾರಿಗಾಗಿ ಮಕ್ಕಳಿಗೆ ಕಸದ ಬುಟ್ಟಿಗಳನ್ನು ವಿತರಿಸಲಾಯಿತು.

ಶಿಕ್ಷಕ ರವಿ, ಹನುಮೇಶ್, ರತ್ನಮ್ಮ, ಮೋಹನ್ ಕುಮಾರ್, ರಶ್ಮಿ ಉಪಸ್ಥಿತರಿದ್ದರು.

‘ಪರಿಸರ ಮಾಲಿನ್ಯದಿಂದಲೇ ಭೂಕಂಪ, ಸುನಾಮಿ, ಚಂಡ ಮಾರುತ, ಅತಿವೃಷ್ಟಿ ಮತ್ತು ಅನಾವೃಷ್ಟಿಯಂತಹ ಪ್ರಕೃತಿ ವಿಕೋಪಗಳು ಉಂಟಾಗುತ್ತಿವೆ. ಹಂದಿಜ್ವರ, ಹಕ್ಕಿಜ್ವರ, ನಿಫಾ ವೈರಾಣು ಹೀಗೆ ಕಂಡು ಕೇಳರಿಯದ ರೋಗಗಳನ್ನು ನಾವು ಕಾಣುತ್ತಿದ್ದೇವೆ’ ಎಂದು ಜಿನರಾಳ್ಕರ್ ಹೇಳಿದರು.

ಪ್ಲಾಸ್ಟಿಕ್ ಸೇವಿಸಿ ಚಿರತೆ ಸಾವು!

‘ಅರಣ್ಯದಲ್ಲಿ ಚಿರತೆಯೊಂದು ಪ್ಲಾಸ್ಟಿಕ್ ಸೇವನೆಯಿಂದ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ. ಮಾಂಸದ ತ್ಯಾಜ್ಯ ತಿನ್ನಲು ನಾಡಿನ ಕಡೆಗೆ ಬರುವ ಕಾಡಿನ ಪ್ರಾಣಿಗಳು ಪ್ಲಾಸ್ಟಿಕ್ ತಿಂದು ಸಾವನ್ನಪ್ಪುವ ಸಾಧ್ಯತೆ ಇದೆ. ಹೀಗಾಗಿ, ಪ್ಲಾಸ್ಟಿಕ್ ಬಳಕೆ ತ್ಯಜಿಸಬೇಕು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ರಾಮಲಿಂಗೇಗೌಡ ಹೇಳಿದರು.

‘ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡದೇ ಪ್ಲಾಸ್ಟಿಕ್ ಹಾಕುವುದರಿಂದ ಅವುಗಳನ್ನು ಜಾನುವಾರುಗಳು ತಿಂದು ಸಾವನ್ನಪ್ಪುತ್ತಿವೆ’ ಎಂದರು.

ತುಮಕೂರು: ಪ್ಲಾಸ್ಟಿಕ್ ಅನ್ನು ಸರ್ಕಾರ ನಿಷೇಧಿಸಿದರೂ ಸಹ ಅದರ ಬಳಕೆ ಕಡಿಮೆಯಾಗಿಲ್ಲ. ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಾಶಮಾಡಲು ಸಾಧ್ಯವಿಲ್ಲ. ಹಾಗಾಗಿ ಅದನ್ನು ಕಡಿಮೆಗೊಳಿಸುವ ಪ್ರಯತ್ನಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ತಿಳಿಸಿದರು.

ನಗರದ ತುಮಕೂರು ವಿವಿಯ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಏರ್ಪಡಿಸಿದ್ದ, ವಿಶ್ವ ಪರಿಸರ ದಿನ ಅಂಗವಾಗಿ 'ಪರಿಸರ ಮಾಲಿನ್ಯ ನಿಯಂತ್ರಣ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮಾಲಿನ್ಯ ಹೆಚ್ಚಾಗಿ, ಮುಂದಿನ ದಿನಗಳಲ್ಲಿ ಮಾನವ ಜೀವಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಉಂಟಾಗುತ್ತಿದೆ. ಹಾಗಾಗಿ ಪರಿಸರವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ಯಾವುದೇ ಒಂದು ವಿಷಯವನ್ನು ನಾವು ಅರಿತುಕೊಂಡಲ್ಲಿ ಇತರರಿಗೆ ತಿಳಿಸಲು ಸಾಧ್ಯ. ಹಾಗೇ ಪ್ಲಾಸ್ಟಿಕ್ ಮಾಲಿನ್ಯದಿಂದ ಆಗುವ ಹಾನಿಯಗಳ ಬಗ್ಗೆ ಹಾಗೂ ಅದನ್ನು ಸರಿಪಡಿಸುವ ಮಾರ್ಗಗಳನ್ನು ಸೃಷ್ಟಿಸಲು ವಿಶ್ವವಿದ್ಯಾನಿಲಯ ಹಾಗೂ ಸಂಶೋಧನಾ ಸಂಸ್ಥೆಗಳಲ್ಲಿ ಚಿಂತನೆ ನಡೆಯಬೇಕು ಎಂದರು.

ಮಾಲಿನ್ಯವನ್ನು ತಡೆಗಟ್ಟಲು ಪ್ರಮುಖವಾಗಿ ರಸ್ತೆ, ಚರಂಡಿ, ನೀರು ಸರಬರಾಜು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಕ್ಕಳಿಗೆ ಅದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿ ಹೇಳಿದರು.

ತುಮಕೂರು ವಿವಿಯ ಕುಲಪತಿ ಡಾ.ವೈ.ಎಸ್.ಸಿದ್ದೇಗೌಡ ಮಾತನಾಡಿ, ಇಂದು ಭೌತಿಕ ಪರಿಸರ ಮಾಲಿನ್ಯಕ್ಕಿಂತ ಮಾನಸಿಕ ಪರಿಸರ ಮಾಲಿನ್ಯವನ್ನು ಸರಿಪಡಿಸಿಕೊಂಡಲ್ಲಿ ಭೌತಿಕ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು. ಹಾಗಾಗಿ ತುಮಕೂರು ವಿವಿಯಲ್ಲಿ ಪರೀಕ್ಷಾಂಗ ವಿಭಾಗವು ಸೇರಿದಂತೆ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸಬಾರದು ಎನ್ನುವ ಪಣ ತೊಟ್ಟಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಡಾ.ಎಂ.ಕೊಟ್ರೇಶ್ ಪ್ಲಾಸ್ಟಿಕ್ ನಿಷೇಧದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಅಧ್ಯಾಪಕರಾದ ಪ್ರೊ.ರವೀಂದ್ರ ಕುಮಾರ್, ಪ್ರೊ.ವೆಂಕಟರೆಡ್ಡಿ ರಾಮರೆಡ್ಡಿ ಹಾಗೂ ಪ್ರೊ.ಜಯಶೀಲ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry