ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಸಿ ವ್ಯಾಲಿ ನೀರು: ಇತಿಹಾಸ ಸೃಷ್ಟಿ

ಲಕ್ಷ್ಮೀಸಾಗರ ಕೆರೆಗೆ ನೀರು ಬರುತ್ತಿರುವುದನ್ನು ಪರಿಶೀಲಿಸಿದ ಜಲವಾಹಿನಿ ನೀರಾವರಿ ಹೋರಾಟ ಸಮಿತಿ
Last Updated 6 ಜೂನ್ 2018, 12:52 IST
ಅಕ್ಷರ ಗಾತ್ರ

ಕೋಲಾರ: ‘ಬರಗಾಲದಿಂದ ತತ್ತರಿಸಿದ್ದ ಜಿಲ್ಲೆಗೆ ಕಾಂಗ್ರೆಸ್‌ ಸರ್ಕಾರ ಕೆ.ಸಿ ವ್ಯಾಲಿ ನೀರಾವರಿ ಯೋಜನೆ ಮೂಲಕ ಕಡಿಮೆ ಅವಧಿಯಲ್ಲಿ ನೀರು ಹರಿಸಿ ಇತಿಹಾಸ ಸೃಷ್ಟಿಸಿದ’ ಎಂದು ಜಲವಾಹಿನಿ ನೀರಾವರಿ ಹೋರಾಟ ಸಮಿತಿ ಸಂಚಾಲಕ ಶ್ರೀನಿವಾಸ್ ಬಣ್ಣಿಸಿದರು.

ತಾಲ್ಲೂಕಿನ ಲಕ್ಷ್ಮೀಸಾಗರ ಕೆರೆಗೆ ಕೆ.ಸಿ ವ್ಯಾಲಿ ನೀರು ಹರಿದು ಬರುತ್ತಿರುವುದನ್ನು ಮಂಗಳವಾರ ಪರಿಶೀಲಿಸಿ ಮಾತನಾಡಿ, ‘ಜಿಲ್ಲೆಗೆ ನೀರಾವರಿ ಯೋಜನೆಗಳ ಮೂಲಕ ನೀರಿನ ಸೌಲಭ್ಯ ಕಲ್ಪಿಸಬೇಕೆಂದು ಹಲವು ದಶಕಗಳಿಂದ ಹೋರಾಟ ನಡೆಯುತ್ತಿತ್ತು. ಹೋರಾಟಕ್ಕೆ ಸ್ಪಂದಿಸಿದ ಕಾಂಗ್ರೆಸ್‌ ಸರ್ಕಾರ ನೀರಿನ ಸೌಲಭ್ಯ ಕಲ್ಪಿಸಿರುವುದು ಹೋರಾಟಕ್ಕೆ ಸಿಕ್ಕ ಜಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ನದಿ ನಾಲೆಯಂತಹ ಯಾವುದೇ ಮೇಲ್ಮೈ ನೀರಿನ ಮೂಲಗಳಿಲ್ಲದ ಜಿಲ್ಲೆಯಲ್ಲಿ ರೈತರು ಕೃಷಿ ನಿರ್ವಹಣೆಗೆ ಸಂಕಷ್ಟ ಅನುಭವಿಸುವಂತಾಗಿತ್ತು. ಕುಡಿಯುವ ನೀರು ಇಲ್ಲದ ಕಾರಣ ಜಾನುವಾರುಗಳನ್ನು ಸಾಕುವುದು ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ನೀರಾವರಿ ಹೋರಾಟ ರೂಪಿಸಲಾಯಿತು. ಜನ ಹೋರಾಟಕ್ಕೆ ನಿರೀಕ್ಷೆಗೂ ಮೀರಿ ಕೈಜೋಡಿಸಿದ್ದನ್ನು ಮರೆಯುವುದಿಲ್ಲ’ ಎಂದು ಹೇಳಿದರು.

‘ನೀರಿನ ಸಮಸ್ಯೆಯ ಕಾರಣಕ್ಕೆ ರೈತರು ಕೃಷಿಯಿಂದ ವಿಮುಖರಾಗಿ ಪಟ್ಟಣ ಪ್ರದೇಶಕ್ಕೆ ಗುಳೆ ಹೋಗುತ್ತಿದ್ದರು. 1,500 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುವುದು ಕಷ್ಟವಾಗಿತ್ತು. ಹೀಗಾಗಿ ರೈತರು ಹಣ ಕೊಟ್ಟು ಟ್ಯಾಂಕರ್‌ ನೀರು ಖರೀದಿಸಿ ಕೃಷಿ ನಿರ್ವಹಣೆ ಮಾಡುತ್ತಿದ್ದರು. ಸರ್ಕಾರ ರೈತರ ಕಷ್ಟ ಅರಿತು ಜಿಲ್ಲೆಯ ಕೆರೆಗಳನ್ನು ತುಂಬಿಸಲು ಕೆ.ಸಿ ವ್ಯಾಲಿ ಯೋಜನೆ ಕೈಗೆತ್ತಿಕೊಂಡು ಅಲ್ಪಾವಧಿಯಲ್ಲಿ ಪೂರ್ಣಗೊಳಿಸಿದೆ’ ಎಂದರು.

ಸಮಿತಿ ಸದಸ್ಯರಾದ ಕೆ.ವಿ.ಸುರೇಶ್‌ಕುಮಾರ್, ಸಲಾವುದ್ದೀನ್ ಬಾಬು, ಮಂಜುನಾಥ್, ರಾಜಣ್ಣ ಶ್ರೀಧರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT