‘ಉತ್ಕೃಷ್ಟ’ ಯೋಜನೆಗೆ ರಾಜ್ಯದ ಏಳು ರೈಲು

7

‘ಉತ್ಕೃಷ್ಟ’ ಯೋಜನೆಗೆ ರಾಜ್ಯದ ಏಳು ರೈಲು

Published:
Updated:
‘ಉತ್ಕೃಷ್ಟ’ ಯೋಜನೆಗೆ ರಾಜ್ಯದ ಏಳು ರೈಲು

ಮೈಸೂರು: ರೈಲ್ವೆ ಇಲಾಖೆಯು ‘ಉತ್ಕೃಷ್ಟ’ ಯೋಜನೆ ಅಡಿ ದೇಶದಾದ್ಯಂತ 66 ರೈಲುಗಳನ್ನು ಮೇಲ್ದರ್ಜೆಗೆ ಏರಿಸುತ್ತಿದ್ದು, ಈ ಪೈಕಿ ರಾಜ್ಯದ 7 ರೈಲುಗಳು ಆಯ್ಕೆಯಾಗಿವೆ.‌‌‌‌

ಇದಕ್ಕಾಗಿ ಪ್ರತಿ ರೈಲಿಗೆ ₹ 60 ಲಕ್ಷದಿಂದ 1.20 ಕೋಟಿ ವ್ಯಯ ಮಾಡಲಾಗುತ್ತಿದೆ. ಒಳಾಂಗಣ ಹಾಗೂ ಹೊರಾಂಗಣ ಸೌಲಭ್ಯಗಳ ಮೇಲ್ದರ್ಜೆ ಸೇರಿದಂತೆ, ಶೌಚಾಲಯಗಳ ಸಕಾಲಿಕ ನಿರ್ವಹಣೆ ಮೂಲಕ ಸ್ವಚ್ಛತೆಗೆ ಆದ್ಯತೆ ಈ ಯೋಜನೆಯ ಉದ್ದೇಶವಾಗಿದೆ.

ರಾಜ್ಯದಲ್ಲಿ ಸಂಚರಿಸುತ್ತಿರುವ ಮೈಸೂರು– ತೂತುಕುಡಿ ಎಕ್ಸ್‌ಪ್ರೆಸ್, ರಾಣಿ ಚೆನ್ನಮ್ಮ ಎಕ್ಸ್‌‍ಪ್ರೆಸ್, ಹಂಪಿ ಎಕ್ಸ್‌ಪ್ರೆಸ್, ಗುವಾಹಟಿ– ಯಶವಂತಪುರ ಎಕ್ಸ್‌ಪ್ರೆಸ್, ಪರಶುರಾಮ ಎಕ್ಸ್‌ಪ್ರೆಸ್‌, ಬೆಂಗಳೂರು ಎಕ್ಸ್‌ಪ್ರೆಸ್‌, ವೀಕ್ಲಿ ಡುರಾನ್ರೊ ಎಕ್ಸ್‌ಪ್ರೆಸ್ ರೈಲುಗಳು ಈ ಯೋಜನೆಗೆ ಒಳಪಡುತ್ತವೆ.

ಶುಚಿತ್ವಕ್ಕೆ ಆದ್ಯತೆ: ರೈಲುಗಳ ಎಲ್ಲ ಬೋಗಿಗಳಲ್ಲಿ ಜೈವಿಕ ಶೌಚಾಲಯಗಳನ್ನು ಅಳವಡಿಸಲಾಗುತ್ತಿದೆ. ಕಡಿಮೆ ನೀರಿನ ಬಳಕೆಗೆ ಒತ್ತು ನೀಡಲಾಗುತ್ತದೆ. ಪ್ರತಿ 2 ಗಂಟೆಗೆ ಒಮ್ಮೆ ಶುಚಿಗೊಳಿಸಿದ ಮಾಹಿತಿಯುಳ್ಳ ಪಟ್ಟಿಯನ್ನು ಶೌಚಾಲಯದಲ್ಲಿ ಪ್ರಕಟಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ಶುಚಿತ್ವ ನಿರ್ವಹಣೆ ಸಿಬ್ಬಂದಿಗೆ ವಿಶೇಷ ತರಬೇತಿಯನ್ನೂ ನೀಡಲಾಗುತ್ತಿದೆ.

‘ನನ್ನ ಸ್ವಚ್ಛ ಬೋಗಿ’ ಹಾಗೂ ‘ಕೋಚ್ ಮಿತ್ರ’ ಬೋಗಿಗಳನ್ನು ಈ ರೈಲುಗಳಿಗೆ ಅಳವಡಿಸಲಾಗುತ್ತಿದೆ. ಪ್ರತಿ ಬೋಗಿಯಲ್ಲೂ ಕಸದ ಬುಟ್ಟಿಗಳನ್ನು ಇರಿಸಲಾಗುತ್ತಿದ್ದು, ರೈಲು ನಿಲ್ಲುವ ಪ್ರತಿ ನಿಲ್ದಾಣದಲ್ಲೂ ಕಸದ ಬುಟ್ಟಿಯನ್ನು ಶುಚಿಗೊಳಿಸಲಾಗುತ್ತದೆ ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಇ.ವಿಜಯಾ ‘ಪ್ರಜಾವಾಣಿ’ಗೆ ತಿಳಿಸಿದರು.

ಸೌಲಭ್ಯಗಳೂ ಉತ್ತಮ: ಬೋಗಿಗಳಲ್ಲಿ ಒಳಾಂಗಣ ಸೌಲಭ್ಯಕ್ಕೆ ಆದ್ಯತೆ ನೀಡಲಾಗಿದೆ. ಎಲ್ಲ ಬೋಗಿಗಳ ಕುರ್ಚಿಗಳಿಗೆ ಹೊಸ ಕುಷನ್, ಏಕವರ್ಣದ ಹೊದಿಕೆ ಅಳವಡಿಸಲಾಗುತ್ತದೆ. ನೆಲಕ್ಕೆ ಪಿವಿಸಿ ಹಾಸನ್ನು ಹಾಕುವುದು, ಮೊಬೈಲ್‌ ಚಾರ್ಜಿಂಗ್‌ ಸೇರಿದಂತೆ ಎಲೆಕ್ಟ್ರಿಕಲ್‌ ಸೌಲಭ್ಯ, ಎಸಿ ಕೋಚ್‌ಗಳಲ್ಲಿ ಶ್ರೇಷ್ಠ ಗುಣಮಟ್ಟದ ಕರ್ಟನ್‌ಗಳು, ಎಲ್‌ಇಡಿ ದೀಪಗಳ ಕಡ್ಡಾಯ ಅಳವಡಿಕೆ, ಎಲ್ಲ ನೀರಿನ ಬೋಸಿಗಳ ಬದಲಾವಣೆ ಹಾಗೂ ಏಕರೂಪ ನಲ್ಲಿಗಳ ಅಳವಡಿಕೆ ಸೇರಿದಂತೆ ಒಟ್ಟು 19 ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.

ಹೊರಾಂಗಣದಲ್ಲಿ ಯಾವ ವ್ಯತ್ಯಾಸವೂ ಇರುವುದಿಲ್ಲ. ಉತ್ತಮ ಗುಣಮಟ್ಟದ ಮಾಹಿತಿ ಫಲಕಗಳನ್ನು ಮಾತ್ರ ಅಳವಡಿಸಲಾಗುತ್ತದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry