ಕ್ರೀಡಾ ಕೋಟಾದಡಿ ವೃತ್ತಿಶಿಕ್ಷಣ ಕೋರ್ಸ್‌ಗಳಿಗೆ ಸೀಟು: ಭರವಸೆ

7

ಕ್ರೀಡಾ ಕೋಟಾದಡಿ ವೃತ್ತಿಶಿಕ್ಷಣ ಕೋರ್ಸ್‌ಗಳಿಗೆ ಸೀಟು: ಭರವಸೆ

Published:
Updated:
ಕ್ರೀಡಾ ಕೋಟಾದಡಿ ವೃತ್ತಿಶಿಕ್ಷಣ ಕೋರ್ಸ್‌ಗಳಿಗೆ ಸೀಟು: ಭರವಸೆ

ಬೆಂಗಳೂರು: ಕ್ರೀಡಾ ಕೋಟಾದಡಿ ವೃತ್ತಿ ಶಿಕ್ಷಣ ಕೋರ್ಸ್‌ಗೆ ಸೀಟು ಬಯಸಿದ ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭರವಸೆ ನೀಡಿದೆ. ಇದರಿಂದ ಸೀಟು ಸಿಗುವ ಬಗ್ಗೆ ಆತಂಕದಲ್ಲಿದ್ದ ವಿದ್ಯಾರ್ಥಿಗಳು ನಿರಾಳವಾಗಿದ್ದಾರೆ.

ಸಿಇಟಿ ತೇರ್ಗಡೆಯಾದ ಹಲವಾರು ವಿದ್ಯಾರ್ಥಿಗಳು ಕೌನ್ಸೆಲಿಂಗ್‌ ವೇಳೆ ಕ್ರೀಡಾ ಕೋಟಾದ ಅಡಿ ತಮ್ಮನ್ನು ಪರಿಗಣಿಸಿ ಸೀಟು ಕೊಡಬೇಕು ಎಂದು ಕೋರಿದ್ದರು. ಆದರೆ, ಒಲಿಂಪಿಕ್‌ ಕೂಟದ ಸಾಧಕರಿಗೆ ಮಾತ್ರ ಸೀಟು ನೀಡುವುದಾಗಿ ಪ್ರಾಧಿಕಾರ ಹೇಳಿತ್ತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಒಲಿಂಪಿಕ್‌ ಸಾಧಕರನ್ನು ಮಾತ್ರ ಕ್ರೀಡಾ ಕೋಟಾದ ಅಡಿ ಪರಿಗಣಿಸಬೇಕು ಎಂದು ಪತ್ರ ಬರೆದಿತ್ತು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಸೋಮವಾರ ಮತ್ತು ಮಂಗಳವಾರ ಮಲ್ಲೇಶ್ವರಂನ ಕೆಇಎ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದರು.

ಈ ಎಲ್ಲ ಗೊಂದಲಕ್ಕೆ ತೆರೆ ಎಳೆದ ಪ್ರಾಧಿಕಾರ ಕೊನೆಗೂ ತನ್ನ ಕೈಪಿಡಿಯಲ್ಲಿ ನಮೂದಿಸಲಾದ ಕ್ರೀಡೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪರಿಗಣಿಸುವುದಾಗಿ ಹೇಳಿದೆ.

‘ನಾವು ಕೈಪಿಡಿಯಲ್ಲಿ ಸೂಚಿಸಿದ ಕ್ರೀಡಾಕೂಟಗಳ ಪಟ್ಟಿ ಪ್ರಕಾರವೇ ಸೀಟು ಹಂಚಿಕೆ ಪ್ರಕ್ರಿಯೆ ಮುಂದುವರಿಸುತ್ತೇವೆ. ಇತ್ತೀಚೆಗಷ್ಟೇ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಈ ಎಲ್ಲ ಕ್ರೀಡೆಗಳನ್ನು ಪರಿಗಣಿಸಬಾರದು ಎಂಬ ಪತ್ರ ಬಂದಿದೆ. ಆದರೆ, ಕೊನೇ ಕ್ಷಣದಲ್ಲಿ ಈ ಪತ್ರ ಪರಿಗಣಿಸಲಾಗದು. ನಿಯಮಾವಳಿಗಳಲ್ಲಿ ತಿದ್ದುಪಡಿ ಮಾಡದೆ ಅಂಥ ಬದಲಾವಣೆ ಸಾಧ್ಯವಿಲ್ಲ’ ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಎಸ್‌.ಎನ್‌.ಗಂಗಾಧರಯ್ಯ ಹೇಳಿದರು.

‘ಪ್ರಾಧಿಕಾರದ ಈ ನಿರ್ಧಾರ ನಿರಾಳ ಮೂಡಿಸಿದೆ. ನಾವು ಪ್ರತಿದಿನ ಕೆಲವು ಗಂಟೆಗಳನ್ನು ಕ್ರೀಡಾ ಚಟುವಟಿಕೆಗೆ ಮೀಸಲಿಡುತ್ತೇವೆ. ನಮ್ಮಲ್ಲಿ ಹಲವರು ಅಂತರರಾಷ್ಟ್ರೀಯಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡವರಿದ್ದಾರೆ. ಅಂಥವರನ್ನು ಪರಿಗಣಿಸದಿರುವುದು ಸರಿಯಲ್ಲ’ ಎಂದು ನೆಟ್‌ಬಾಲ್‌ ಆಟಗಾರ್ತಿ, ಎಂಜಿನಿಯರಿಂಗ್‌ ಸೀಟು ಆಕಾಂಕ್ಷಿ ನವ್ಯಾ ಹೇಳಿದರು.

ದ್ವಿತೀಯ ಪಿಯು ಅಥವಾ 12ನೇ ತರಗತಿಯಲ್ಲಿರುವಾಗ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದವರನ್ನು ಈ ಕೋಟಾದ ಅಡಿ ಪರಿಗಣಿಸಬಹುದು ಎಂದು ಕ್ರೀಡಾ ಇಲಾಖೆ ಪ್ರಾಧಿಕಾರಕ್ಕೆ ಪತ್ರ ಬರೆದಿತ್ತು. ಆದರೆ, ಪ್ರಾಧಿಕಾರದ ಈಗಿನ ನಿಯಮಾವಳಿ ಪ್ರಕಾರ 8ರಿಂದ 12ನೇ ತರಗತಿ (ಅಥವಾ ದ್ವಿತೀಯ ಪಿಯು)ವರೆಗೆ ತನ್ನ ಪಟ್ಟಿಯಲ್ಲಿ ನಮೂದಿಸಿರುವ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವವರನ್ನು ಪರಿಗಣಿಸಲಾಗುವುದು ಎಂದಿದೆ. ಇದೇ ಕೈಪಿಡಿಯಲ್ಲಿ ‘ಕ್ರೀಡಾ ಕೋಟಾದ ಅಡಿ ಅರ್ಜಿ ಸಲ್ಲಿಸಿದವರನ್ನು ಅಂತಿಮವಾಗಿ ಆಯ್ಕೆ ಮಾಡುವವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರು. ಪ್ರಾಧಿಕಾರ ಇದಕ್ಕೆ ಹೊಣೆಯಲ್ಲ’ ಎಂದು ಸ್ಪಷ್ಟಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry