ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನಮತ ಬದಿಗಿಡಿ ಆಡಳಿತ ಚುರುಕುಗೊಳಿಸಿ

Last Updated 7 ಜೂನ್ 2018, 19:30 IST
ಅಕ್ಷರ ಗಾತ್ರ

ಜೆಡಿಎಸ್–ಕಾಂಗ್ರೆಸ್ ಮೈತ್ರಿಕೂಟ ಸರ್ಕಾರದ ಗೊಂದಲಗಳು ಪರಿಹಾರವಾಗುವ ಹಾಗೆ ಕಾಣುತ್ತಿಲ್ಲ. ವಿಧಾನಸಭೆ ಚುನಾವಣಾ ಫಲಿತಾಂಶ ಬಂದ ದಿನವೇ ಯಾರು ಮುಖ್ಯಮಂತ್ರಿಯಾಗಬೇಕು ಎನ್ನುವುದು ಸ್ಪಷ್ಟವಾಗಿತ್ತು. ಅದರ ಆಧಾರದಲ್ಲಿಯೇ ಮೇ 23ರಂದು ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ, ಜಿ.ಪರಮೇಶ್ವರ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಪೂರ್ಣ ಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದ್ದು ಜೂನ್ 6ರಂದು. ಎರಡು ವಾರದ ನಂತರ ಸಚಿವ ಸಂಪುಟ ವಿಸ್ತರಣೆಯಾದರೂ ಇನ್ನೂ ಪೂರ್ಣವಾಗಿಲ್ಲ. ಬಂಡಾಯ ಏಳುವವರ ಮೂಗಿಗೆ ತುಪ್ಪ ಸವರುವುದಕ್ಕಾಗಿಯೇ ಇನ್ನೂ 7 ಸಚಿವ ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲಾಗಿದೆ. ಬುಧವಾರ 25 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದರೂ ಖಾತೆ ಹಂಚಿಕೆಯಲ್ಲೂ ವಿಳಂಬ. ಜೆಡಿಎಸ್‌ನಿಂದ ಯಾರು ಸಚಿವರಾಗಬೇಕು, ಕಾಂಗ್ರೆಸ್‌ನಿಂದ ಯಾರು ಸಚಿವರಾಗಬೇಕು ಎಂದು ನಿರ್ಧಾರ ಮಾಡುವುದಕ್ಕೇ ಇಷ್ಟು ದಿನ ಬೇಕಾಯಿತು. ವಿಧಾನಸಭೆ ಚುನಾವಣೆ ಪೂರ್ಣಗೊಂಡು ಒಂದು ತಿಂಗಳಾಗುತ್ತಾ ಬಂದರೂ ರಾಜ್ಯದಲ್ಲಿ ಆಡಳಿತ ಸುಗಮವಾಗುವ ಲಕ್ಷಣ ಕಾಣುತ್ತಿಲ್ಲ. ಒಂದಿಷ್ಟು ದಿನ ಶಾಸಕರು ರೆಸಾರ್ಟ್‌ನಲ್ಲಿ ಕಾಲ ಕಳೆದರು. ಫಲಿತಾಂಶ ಪ್ರಕಟಗೊಂಡ ದಿನದಿಂದಲೇ ಬಹುತೇಕ ಶಾಸಕರು ಕ್ಷೇತ್ರಗಳಿಗೇ ಹೋಗಿಲ್ಲ. ಈಗ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ ಎಂದು ಸಭೆ ನಡೆಸುವುದರಲ್ಲಿ ನಿರತರಾಗಿದ್ದಾರೆ. ಅರ್ಹತೆಯ ಆಧಾರದಲ್ಲಿ ಯಾರೂ ಸಂಪುಟದ ಸ್ಥಾನ ಕೇಳುತ್ತಿಲ್ಲ. ಸಂಪುಟ ಸೇರುವುದರಲ್ಲಿಯೂ ಜಾತಿಯೇ ಪ್ರಮುಖವಾಗಿದೆ. ‘ನಮ್ಮ ಜಾತಿಗೆ ಸಚಿವ ಸ್ಥಾನ ಸಿಕ್ಕಿಲ್ಲ’ ಎಂದು ಮಠಾಧೀಶರೂ, ಸಮುದಾಯದ ಮುಖಂಡರೂ ಹೋರಾಟದಲ್ಲಿ ತೊಡಗಿದ್ದಾರೆ. ಶಾಸಕರ ಅಭಿಮಾನಿಗಳೂ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವು ಕಡೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ ಘಟನೆಗಳೂ ನಡೆದಿವೆ. ಇವೆಲ್ಲ ಮತದಾರರಿಗೆ ಮಾಡುವ ದ್ರೋಹವೇ ವಿನಾ ಒಳ್ಳೆಯ ರಾಜಕಾರಣದ ಲಕ್ಷಣಗಳಲ್ಲ. ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯುವ ಕೆಲಸಗಳೂ ಅಲ್ಲ.

ರೆಸಾರ್ಟ್‌ನಲ್ಲಿ ಕಾಲ ಕಳೆಯಲಿ, ಭಿನ್ನಮತದ ಚಟುವಟಿಕೆ ನಡೆಸಲಿ ಎಂದು ಮತದಾರರು ಈ ಮುಖಂಡರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಲ್ಲ. ಕ್ಷೇತ್ರದಲ್ಲಿ ಕೆಲಸಗಳಾಗಲಿ, ಉತ್ತಮ ಶಾಸನಗಳು ಜಾರಿಗೆ ಬರಲಿ, ಒಳ್ಳೆಯ ಆಡಳಿತ ನೀಡಲಿ ಎನ್ನುವ ಭಾವನೆಯಿಂದ ಜನ ಮತ ಚಲಾಯಿಸಿದ್ದಾರೆ. ಎಲ್ಲ ಶಾಸಕರೂ ಇದನ್ನು ಅರ್ಥ ಮಾಡಿಕೊಂಡು ಜನರ ಸಂಕಷ್ಟವನ್ನು ಆಲಿಸುವ ಕಡೆಗೆ ಗಮನ ನೀಡಬೇಕಾಗಿದೆ. ರಾಜ್ಯದಲ್ಲಿ ಮುಂಗಾರು ಆರಂಭವಾಗಿದೆ. ಮುಂಗಾರುಪೂರ್ವ ಮಳೆ ಕೆಲವು ಕಡೆ ಹಾನಿ ಉಂಟುಮಾಡಿದೆ. ರೈತರು ಬಿತ್ತನೆ ಬೀಜ ಮತ್ತು ಗೊಬ್ಬರಕ್ಕಾಗಿ ಕಾದಿದ್ದಾರೆ. ಅದನ್ನು ಪೂರೈಸುವ ಕಡೆಗೆ ತಕ್ಷಣವೇ ಗಮನ ನೀಡಬೇಕಿದೆ. ಅಧಿಕಾರಕ್ಕೆ ಬಂದ 24 ಗಂಟೆಯ ಒಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ವಾಗ್ದಾನ ಮಾಡಿದ್ದ ಮುಖ್ಯಮಂತ್ರಿ ಆ ಕುರಿತಂತೆ ಒಂದಿಷ್ಟು ಕೆಲಸ ಮಾಡಿದ್ದಾರೆ. ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ. ಜೊತೆಗೆ ಆಡಳಿತದ ವೆಚ್ಚ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಇದಕ್ಕೆ ಅಗತ್ಯ ಮಾರ್ಗಸೂಚಿಯನ್ನೂ ನೀಡಿದ್ದಾರೆ. ಉಳಿದಂತೆ ಯಾವುದೇ ಕೆಲಸಗಳೂ ಆದಹಾಗೆ ಕಾಣುತ್ತಿಲ್ಲ. ಚುನಾವಣೆಗೆ ಪೂರ್ವದ ಒಂದು ತಿಂಗಳು ರಾಜ್ಯದಲ್ಲಿ ಆಡಳಿತಯಂತ್ರ ಬಹುತೇಕ ಸ್ಥಗಿತವಾಗಿತ್ತು. ಚುನಾವಣೆ ಮುಗಿದು ಒಂದು ತಿಂಗಳಾಗುತ್ತಾ ಬಂದರೂ ಆಡಳಿತ ಚುರುಕಾಗುವ ಲಕ್ಷಣ ಇಲ್ಲ. ಹೊಸ ಸರ್ಕಾರ ಈಗ ಬಜೆಟ್ ಮಂಡಿಸಬೇಕಿದೆ. ಅದಕ್ಕಾಗಿ ತಯಾರಿಯಾಗಬೇಕು. ಆದರೆ ಸರ್ಕಾರದಲ್ಲಿ ಇರುವ ರಾಜಕಾರಣಿಗಳೆಲ್ಲಾ ಖಾತೆ ಹಂಚಿಕೆ ಗೊಂದಲ, ಸಚಿವ ಸ್ಥಾನ ಸಿಗದ ಅಸಮಾಧಾನದಲ್ಲಿಯೇ ಮುಳುಗಿದ್ದಾರೆ. ಮತ ಚಲಾಯಿಸಿದ ಜನರು ಬಯಸಿದ್ದು ಇದಲ್ಲ. ಜನರ ನಿರೀಕ್ಷೆ ಬೆಟ್ಟದಷ್ಟಿದೆ. ಉಳಿದ ಎಲ್ಲ ರಾಜಕೀಯ ತಂತ್ರ, ಸಮಾಲೋಚನೆ, ಭಿನ್ನಮತ ಬದಿಗಿಟ್ಟು ಆಡಳಿತ ಯಂತ್ರವನ್ನು ಚುರುಕುಗೊಳಿಸಿ ಜನಸೇವೆಗೆ ತಕ್ಷಣವೇ ಇಳಿಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT