ಫೋನ್ ನೋಡುವುದೇ ಕೆಲಸವಾಗಿದೆ...

7

ಫೋನ್ ನೋಡುವುದೇ ಕೆಲಸವಾಗಿದೆ...

Published:
Updated:
ಫೋನ್ ನೋಡುವುದೇ ಕೆಲಸವಾಗಿದೆ...

1. ನಾನು ದ್ವಿತೀಯ ವರ್ಷದ ಡಿಗ್ರಿ ಓದುತ್ತಿದ್ದೇನೆ. ನನಗೆ ಓದಲು ಆಸಕ್ತಿಯೇ ಇಲ್ಲ, ಯಾವಾಗಲೂ ಫೋನ್ ಹಿಡಿದುಕೊಂಡೇ ಇರುತ್ತೇನೆ. ಓದಬೇಕು ಎಂದುಕೊಂಡು ಕುಳಿತ ಮೇಲೂ ಫೋನ್ ನೋಡಬೇಕು ಎನ್ನಿಸುತ್ತದೆ. ನನಗೆ ಓದಬೇಕು ಎಂಬ ಆಸೆ. ಆದರೆ ಪೋನ್ ದೂರ ಮಾಡಲು ಸಾಧ್ಯವಾಗುತ್ತಿಲ್ಲ. ಏನು ಮಾಡಲಿ?

–ರೇಖಾ, ಹಾವೇರಿ

ನಿಜವಾಗಿಯೂ ನೀವು ಅತಿಯಾದ ಫೋನ್ ಬಳಕೆಯನ್ನು ಎಂದುಕೊಂಡರೇ ನೀವೇ ನಿಮ್ಮೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಳ್ಳಬೇಕು. ‘ನಾನು ಈ ದಿನದಲ್ಲಿ ಅನಿವಾರ್ಯ ಕಾರಣಗಳಿಗೆ ಮಾತ್ರ ಫೋನ್ ಬಳಸುತ್ತೇನೆ’ ಎಂದು ದೃಢವಾಗಿ ಹೇಳಿಕೊಳ್ಳಿ. ಅದು ಆಟವಾಡಲು, ಸಂದೇಶ ಕಳುಹಿಸಲು ಅಥವಾ ಸಾಮಾಜಿಕ ಜಾಲಾತಾಣಗಳನ್ನು ಬಳಸಲು – ಈ ರೀತಿ ಕಾರಣ ಯಾವುದಾದರೂ ಆಗಿರಬಹುದು.

ಅದಕ್ಕೆಂದೇ ಸಮಯವನ್ನು ನಿಗದಿಪಡಿಸಿಕೊಳ್ಳಿ ಮತ್ತು ಆ ಸಮಯಕ್ಕೆ ಬದ್ಧರಾಗಿರಿ. ನಿಮಗೆ ನಂಬಿಕೆ ಇರುವ ಸ್ನೇಹಿತರು ಅಥವಾ ಪೋಷಕರ ಬಳಿ ನಿಮ್ಮ ಫೋನ್ ಇರಿಸಿಕೊಳ್ಳುವಂತೆ ಕೇಳಿ. ನೀವು ಮೊಬೈಲ್ ಬಳಸಲು ನಿಗದಿ ಪಡಿಸಿಕೊಂಡ ಸಮಯ ಬಿಟ್ಟು ಉಳಿದ ಸಮಯದಲ್ಲಿ ಫೋನ್‌ ಅನ್ನು ಅವರ ಬಳಿ ನೀಡಿ. ಓದುವ ಸಮಯದಲ್ಲಿ ಮೊಬೈಲ್‌ನಿಂದ ದೂರ ಇರಲು ಇದು ಸುಲಭದ ದಾರಿ.

ಮುಖ್ಯವಾಗಿ ನಾವು ಪದೇ ಪದೇ ಮೊಬೈಲ್ ಪರದೆಯನ್ನು ನೋಡಲು ಮತ್ತು ಮೊಬೈಲ್ ನಮಗೆ ನೋಡುವಂತೆ ಪ್ರಚೋದಿಸುವಂತೆ ಮಾಡಲು ಕಾರಣ ಹೊಸ ಸಂದೇಶಗಳು ಮತ್ತು ಕೆಲವು ಅಫ್ಲಿಕೇಶನ್‌ಗಳಿಂದ ಬರುವ ನೋಟಿಫಿಕೇಶನ್‌ಗಳು. ಹಾಗಾಗಿ ಓದುವ ಸಮಯದಲ್ಲಿ ಈ ನೋಟಿಫಿಕೇಶನ್‌ಗಳನ್ನು ಬಂದ್ ಮಾಡಿಡಿ.

ಸ್ಮಾರ್ಟ್‌ಫೋನ್‌ ಬಳಸದೇ ಇರುವುದರಿಂದ ಅನೇಕ ಉಪಯೋಗಗಳಿವೆ. ಅದರಲ್ಲಿ ವ್ಯಾಕುಲತೆಯಿಂದ ದೂರವಿರುವುದು ಒಂದು. ಆದರೆ ಅನೇಕ ಕಾರಣಗಳಿಗೆ ನಮಗೆ ಮೊಬೈಲ್‌ನ ಅವಶ್ಯಕತೆ ಇದೆ. ಅದಕ್ಕಾಗಿ ನೀವು ಈಗ ಬಳಸುತ್ತಿರುವ ಮೊಬೈಲ್ ಬದಲು ಸಾಧಾರಣ ಫೋನ್ ಬಳಸಿ. ಅದು ಕೇವಲ ಕರೆ ಮಾಡಲು ಹಾಗೂ ಸ್ವೀಕರಿಸಲಿ ಮಾತ್ರ ಎಂಬತಿರಲಿ.

ಸಾಧ್ಯವಾದರೆ ನೀವು ಯಾವಾಗಲೂ ಬಳಸುವ ಆಟ, ಮೆಸೇಜಿಂಗ್ ಜೊತೆಗೆ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ ಮುಂತಾದ ಅಫ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ. ಯಾವುದೇ ಕೆಲಸವನ್ನು ಮಾಡುವಾಗಾಗಲೀ ನಿಮ್ಮ ಕೆಲಸದ ಜಾಗದಿಂದ ನಿಮ್ಮ ಮೊಬೈಲ್‌ ಅನ್ನು ದೂರ ಇರಿಸಿಕೊಳ್ಳಿ. ಇನ್ಸ್ಟಾಗ್ರಾಂನಂತಹ ಆ್ಯಪ್‌ಗಳು ತುಂಬಾ ತೊಂದರೆ ಮಾಡುತ್ತವೆ.

ಅವುಗಳನ್ನು ಡಿಲೀಟ್ ಮಾಡುವುದರಿಂದ ಸ್ಮಾರ್ಟ್‌ಫೋನಿಗೆ ಅಂಟಿಕೊಳ್ಳುವುದರಿಂದ ದೂರ ಇರಬಹುದು.

ಮೊಬೈಲ್ ನೋಡಲೇಬೇಕು ಎಂಬ ಪ್ರಚೋದನೆ ನಿಮಗಿದ್ದರೆ ಮಾನಸಿಕವಾಗಿ ಬಿಡುವು ಪಡೆದುಕೊಳ್ಳಿ. 10ರಿಂದ 15 ನಿಮಿಷ ಕಣ್ಣು ಮುಚ್ಚಿಕೊಂಡು ದೀರ್ಘವಾಗಿ ಉಸಿರು ತೆಗೆದುಕೊಳ್ಳಿ. ಯಾವುದೇ ಚಟದಿಂದ ಹೊರಬರಲು ಇರುವ ಉತ್ತಮ ಮಾರ್ಗವೆಂದರೆ ವ್ಯಾಯಾಮ.

ಇಷ್ಟೆಲ್ಲಾ ಆದ ಮೇಲೂ ನಿಮಗೆ ಮೊಬೈಲ್‌ನಿಂದ ದೂರವಿರಲು ಸಾಧ್ಯವಾಗಿಲ್ಲ ಎಂದರೆ ಈ ಬಗ್ಗೆ ನಿಮ್ಮ ಸ್ನೇಹಿತರು ಅಥವಾ ಕುಟಂಬಸ್ಥರ ಜೊತೆ ಮಾತನಾಡುವುದು ಒಳಿತು. ಅವರಿಂದಲೂ ನಿಮಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೆ ವೈದ್ಯರ ಸಲಹೆಯನ್ನು ಪಡೆಯಿರಿ.

2. ನನಗೆ 21 ವರ್ಷ; ಸರಿಯಾಗಿ ಮಾತನಾಡಲು ಬರುವುದಿಲ್ಲ. ಅಂದರೆ ಕನ್ನಡ ವ್ಯಂಜನಾಕ್ಷರದಗಳಾದ ‘ಲ’ ಮತ್ತು ‘ಳ’ ಉಚ್ಚಾರ ಮಾಡಲು ಬರುವುದಿಲ್ಲ. ಅಂದರೆ ಎರಡನ್ನೂ ಒಂದೇ ರೀತಿ ಹೇಳುತ್ತೇನೆ. ಇದರಿಂದ ಬೇರೆಯವರ ಜೊತೆ ಮಾತನಾಡುವಾಗ ಹಿಂಸೆ ಎನ್ನಿಸುತ್ತದೆ. ಆ ಕಾರಣಕ್ಕಾಗಿ ತುಂಬಾ ನೊಂದಿದ್ದೇನೆ. ಪರಿಹಾರ ತಿಳಿಸಿ.

ಆಕಾಶ್, ಊರು ಬೇಡ

ಕೆಲವು ಜನರಿಗೆ ಈ ರೀತಿಯ ಸಮಸ್ಯೆ ಇರುತ್ತದೆ. ಅದನ್ನು ಮನೆಯ ಹಿರಿಯರು ಚಿಕ್ಕ ವಯಸ್ಸಿನಲ್ಲೇ ಸರಿಪಡಿಸಲು ನೋಡಬೇಕು. ಆದರೂ ಇರಲಿ, ಉಚ್ಚಾರದ ಸಮಸ್ಯೆ ಇದೆ ಎಂಬುದು ನಿಮಗೆ ತಿಳಿದಿದೆ. ಅದರ ಬಗ್ಗೆ ಚಿಂತಿಸಬೇಡಿ ಮತ್ತು ಈಗಾಗಲೇ ನಿಮ್ಮ ಸುತ್ತಲಿನವರಿಗೆ ನೀವು ಮಾತನಾಡುವ ರೀತಿಯ ಬಗ್ಗೆ ಗೊತ್ತಿದೆ.

ಹೊಸಜನರಿಗೆ ಅದನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕು. ನಿಮಗೆ ನೀವು ಯಾವ ರೀತಿಯಾಗಿ ಶಬ್ದಗಳನ್ನು ಉಚ್ಚಾರ ಮಾಡುತ್ತಿರಿ ಎಂಬುದರ ಅರಿವಿದೆ. ಈ ಕ್ಷಣದಲ್ಲಿಯೇ ಅದನ್ನು ಸರಿಪಡಿಸಿಕೊಳ್ಳಲು ಪ್ರಯ್ನತಿಸಿ. ಅದನ್ನು ಪ್ರತಿದಿನ ಅಭ್ಯಾಸ ಮಾಡಿದರೆ ಮಾತಿನ ನಡುವೆ ನಿಮಗೆ ತೊಂದರೆ ಇರುವ ಅಕ್ಷರಗಳನ್ನು ಸರಿಯಾಗಿ ಉಚ್ಚಾರ ಮಾಡಲು ಸಹಾಯವಾಗುತ್ತದೆ.

ನಿಮ್ಮೆಲ್ಲಾ ಪ್ರಯತ್ನದ ನಂತರವೂ ನಿಮ್ಮ ಮಾತಿನಲ್ಲಿ ಬದಲಾವಣೆ ಕಾಣಿಸಿಕೊಂಡಿಲ್ಲ ಎಂದರೆ ನೀವು ‘ಸ್ಪೀಚ್ ಥೆರಪಿಸ್ಟ್‌’ರನ್ನು ನೋಡುವುದು ಉತ್ತಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry