ಜನರ ಸಂಕಷ್ಟಗಳ ನಿವಾರಣೆಗೆ ಸ್ಪಂದಿಸಿ

7
ನೂತನ ಶಾಸಕರಿಂದ ಪ್ರಥಮ ಸಭೆ; ಅಧಿಕಾರಿಗಳಿಗೆ ಸೂಚನೆ

ಜನರ ಸಂಕಷ್ಟಗಳ ನಿವಾರಣೆಗೆ ಸ್ಪಂದಿಸಿ

Published:
Updated:

ಅಥಣಿ: ‘ಅಧಿಕಾರಿಗಳು ಜನರ ಸಂಕಷ್ಟ ಗಳ ನಿವಾರಣೆಗೆ ಸಮರ್ಪಕವಾಗಿ ಸ್ಪಂದಿಸಬೇಕು. ಎಲ್ಲ ಇಲಾಖೆಗಳವರೂ ಸಮನ್ವಯದಿಂದ ಹಾಗೂ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು’ ಎಂದು ಶಾಸಕ ಮಹೇಶ ಕುಮಠಳ್ಳಿ ಸೂಚಿಸಿದರು.

ಶಾಸಕರಾದ ನಂತರ ಇದೇ ಮೊದಲ ಬಾರಿಗೆ ಶುಕ್ರವಾರ ತಾಲ್ಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ‘ಅಧಿಕಾರಿಗಳು ಚೆನ್ನಾಗಿ ಕೆಲಸ ಮಾಡಿದರೆ ಮಾತ್ರ ತಾಲ್ಲೂಕಿನ ಅಭಿವೃದ್ಧಿ ಸಾಧ್ಯ. ನಾವು ಜನರ ಸೇವಕರೆಂಂದು ತಿಳಿದು ಕೆಲಸ ಮಾಡಬೇಕು. ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕು’ ಎಂದರು.

ಕಾಗವಾಡ ಶಾಸಕ ಶ್ರೀಮಂತ ಪಾಟೀಲ, ‘ನಾನು ಎಂದೂ ಯಾವ ದೇವಾಲಯಕ್ಕೂ ಹೋಗಿಲ್ಲ. ಜನರೇ ನನ್ನ ದೇವರು. ಅವರ ಮಧ್ಯದಲ್ಲಿದ್ದುಕೊಂಡು ಕೆಲಸ ಮಾಡಿದ್ದೇನೆ. ಅವರ ಕಷ್ಟಗಳು ನನಗೆ ಗೊತ್ತು. ಅವರಿಗೆ ನಾವು ನ್ಯಾಯ ಒದಗಿಸಬೇಕು’ ಎಂದು ತಿಳಿಸಿದರು.

ಭ್ರಷ್ಟಾಚಾರಕ್ಕೆ ಅವಕಾಶ ಕೊಡಬೇಡಿ: ‘ಚುನಾವಣೆ ಪೂರ್ವದಲ್ಲಿ, ತಾಲ್ಲೂಕನ್ನು ಭ್ರಷ್ಟಾಚಾರ ಮುಕ್ತವಾಗಿಸುತ್ತೇನೆ ಎಂದು ಭರವಸೆ ನೀಡಿದ್ದೇನೆ. ಅದನ್ನು ಉಳಿಸಿಕೊಳ್ಳಲು ನಿಮ್ಮಿಂದ ಭ್ರಷ್ಟಾಚಾರರಹಿತ ಆಡಳಿತ ನಿರೀಕ್ಷೆ ಮಾಡುತ್ತೇನೆ. ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಬೇರೆ ಕ್ಷೇತ್ರದ ಜನರು ನಮ್ಮ ಕೆಲಸ ನೋಡಲು ಬರುವಂತೆ ಮಾದರಿಯಾದ ಕೆಲಸಗಳನ್ನು ಮಾಡಬೇಕು’ ಎಂದು ಸೂಚಿಸಿದರು.

ಜಿಲ್ಲಾ ‍ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ‘ಎರಡು ವರ್ಷಗಳಿಂದ ನಿರೀಕ್ಷಿಸಿದಷ್ಟು ಅನುದಾನ ಜಿಲ್ಲಾ ಪಂಚಾಯ್ತಿಗೆ ಬಂದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಹೆಚ್ಚು ಅನುದಾನ ಬಿಡುಗಡೆ ಮಾಡಲು ಪ್ರಯತ್ನ ಮಾಡಬೇಕು’ ಎಂದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶಕುಂತಲಾ ರುದ್ರಗೌಡರ ಕೂಡ ಅನುದಾನದ ಕೊರತೆ ಇದೆ ಎಂದರು.

‘ರಾಜಾಪುರ ಬ್ಯಾರೇಜ್‌ನಿಂದ ಹರಿದು ಬಂದ ನೀರು ಸಂಗ್ರಹಕ್ಕಾಗಿ ಹೋದ ವರ್ಷ ₹ 50 ಲಕ್ಷ ಅನುದಾನ ಬಂದಿದೆ’ ಎಂದು ಹೇಳಿದ ‌ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ ಸಿ.ಎಸ್. ಪಾಟೀಲ ಅವರನ್ನು ಆಶಾ ಐಹೊಳೆ ತರಾಟೆಗೆ ತೆಗೆದುಕೊಂಡರು. ‘ಸಭೆಗೆ ಸುಳ್ಳು ಮಾಹಿತಿ ನೀಡಬೇಡ’ ಎಂದು ಬಿಸಿ ಮುಟ್ಟಿಸಿದರು.

ಕನ್ನಡ ಶಾಲೆ ಮುಚ್ಚದಂತೆ ನೋಡಿಕೊಳ್ಳಿ: ‘ಅಥಣಿ ಕ್ಷೇತ್ರದಲ್ಲಿ ಹಲವು ಶಾಲೆಗಳ ಕೊಠಡಿಗಳು ಶಿಥಿಲಗೊಂಡಿವೆ. ಇವುಗಳ ದುರಸ್ತಿಗಾಗಿ, ಹೊಸ ಕೊಠಾಡಿಗಳ ನಿರ್ಮಾಣಕ್ಕಾಗಿ ₹ 164  ಕೋಟಿ ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ತಾಲ್ಲೂಕಿನಲ್ಲಿ 350ಕ್ಕೂ ಅಧಿಕ ಕನ್ನಡ ಶಾಲೆಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಕೊರತೆ ಇದೆ. 30 ಪ್ರೌಢಶಾಲಾ ಶಿಕ್ಷಕರಿಲ್ಲ’ ಎಂದು ಹೇಳಿದರು.

‘ಗಡಿ ಭಾಗದಲ್ಲಿ ಕನ್ನಡ ಶಾಲೆಗಳು ಮುಚ್ಚದಂತೆ ನೋಡಿಕೊಳ್ಳಬೇಕು. ಕನ್ನಡ ವಾತಾವರಣ ವೃದ್ಧಿಯಾಗುವಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಬೇಕು’ ಎಂದರು. ‘ಕೃಷಿ ಇಲಾಖೆಯಿಂದ 100 ಕೃಷಿ ಹೊಂಡಗಳು ಮಂಜೂರಾಗಿವೆ. ₹ 46 ಸಾವಿರ ಹಂಚಿಕೆಯಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಇಒ ಲಕ್ಷ್ಮಣ ಯಕ್ಕುಂಡಿ, ತಹಶೀಲ್ದಾರ್ ಪ್ರಶಾಂತ ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry