ಬೆಂಗಾಡಿನಲ್ಲೊಂದು ಸುಂದರ ಸಸ್ಯೋದ್ಯಾನ

7
ಚಿತ್ರಾವತಿ ಅಣೆಕಟ್ಟೆ ಬಳಿ ನಳನಳಿಸುತ್ತಿರುವ ಉದ್ಯಾನ; ಅಧಿಕಾರಿಗಳ ಶ್ರಮ

ಬೆಂಗಾಡಿನಲ್ಲೊಂದು ಸುಂದರ ಸಸ್ಯೋದ್ಯಾನ

Published:
Updated:
ಬೆಂಗಾಡಿನಲ್ಲೊಂದು ಸುಂದರ ಸಸ್ಯೋದ್ಯಾನ

ಬಾಗೇಪಲ್ಲಿ: ನೀಲಗಿರಿ ತೋಪಿನಂತಿದ್ದ ತಾಲ್ಲೂಕಿನ ಪರಗೋಡು ಬಳಿಯ ರಾಷ್ಟ್ರೀಯ ಹೆದ್ದಾರಿ-7ಕ್ಕೆ ಹೊಂದಿಕೊಂಡಂತೆ ಚಿತ್ರಾವತಿ ಅಣೆಕಟ್ಟೆ ಬಳಿಯ ಅರಣ್ಯಇದೀಗ ಹೊಸ ರೂಪದಲ್ಲಿ ಕಂಗೊಳಿಸುತ್ತಿದೆ. ಈ ಜಾಗದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಪರಿಶ್ರಮದಿಂದ ನಿರ್ಮಾಣಗೊಂಡಿರುವ ‘ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ’ ಇದೀಗ ಕೈತೋಟ, ಜಾರುಬಂಡೆ, ವಿಶ್ರಾಂತಿ ತಾಣಗಳು, ಔಷಧಿ ಸಸ್ಯಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ನೀಲ ತೋಪು ಇದ್ದಾಗ ಇತ್ತ ಕಣ್ಣು ಹಾಯಿಸದವರು ಈಗ ಹೆದ್ದಾರಿಯಲ್ಲಿ ನಿಂತು ಉದ್ಯಾನದತ್ತ ದೃಷ್ಟಿನೆಟ್ಟು ಮಂದಹಾಸ ಬೀರುವರು. ಅನೇಕರು ಉತ್ಸಾಹದಲ್ಲಿ ಉದ್ಯಾನದೊಳಗಿನ ಒಂದು ಸುತ್ತು ಹಾಕುವುದು ಸಾಮಾನ್ಯವಾಗಿದೆ.

ಬಾಗೇಪಲ್ಲಿ ವಲಯ ಅರಣ್ಯ ಇಲಾಖೆ ಅಧಿಕಾರಿ ಅಶ್ವತ್ಥಪ್ಪ ಹಾಗೂ ಸಿಬ್ಬಂದಿ ಕಾಳಜಿಯ ಫಲವಾಗಿ ಈ ಉದ್ಯಾನ ತಲೆ ಎತ್ತಿದೆ. ಅಚ್ಚುಕಟ್ಟಾದ ಉದ್ಯಾನದೊಳಗೆ ಎರಡು ಕಿ.ಮೀ ಉದ್ದ ವಾಯು ವಿಹಾರ ಪಥ ನಿರ್ಮಿಸಲಾಗಿದೆ. ಜತೆಗೆ ಸೈಕಲ್ ಪ್ರಿಯರಿಗಾಗಿ ಅರಣ್ಯ ಇಲಾಖೆ ನಾಲ್ಕು ಸೈಕಲ್‌ಗಳನ್ನು ಸಿದ್ಧಗೊಳಿಸಿಟ್ಟಿದೆ.

ಪ್ರವೇಶದ್ವಾರದ ಬಲಭಾಗದಲ್ಲಿ ಹಸಿರು ವಾತಾವರಣದಲ್ಲಿ ಉಪಹಾರ ಮಂದಿರ ತೆರೆಯಲಾಗಿದೆ. ಜತೆಗೆ ದೊಡ್ಡ ಛತ್ರಿಗಳನ್ನು ಅಳವಡಿಸಿದ್ದು ಆಕರ್ಷಕವಾಗಿದೆ. ಉದ್ಯಾನದೊಳಗೆ ಅಚ್ಚ ಹಸಿರಿನ ಕಂಗೊಳಿಸುವ ಹುಲ್ಲಿನ ಲಾನ್, ಆಲಂಕಾರಿಕ ಹೂವಿನ ಗಿಡಗಳು ಪ್ರಕೃತಿ ಪ್ರಿಯರನ್ನು ಪರವಶಗೊಳಿಸುತ್ತವೆ.

ಆಲ, ನೇರಳೆ, ಊವರ್ಜಿ, ಮಹಾಗನಿ ಸೇರಿದಂತೆ ವಿವಿಧ ಗಿಡಗಳು ಹಾಗೂ ಔಷಧಿ ಸಸಿಗಳು ನೆಟ್ಟು ಅವುಗಳ ಬಳಿ ಆ ಗಿಡದ ಸಂಪೂರ್ಣ ಮಾಹಿತಿಯ ಫಲಕಗಳನ್ನು ಅಳವಡಿಸಲಾಗಿದೆ. ಮಕ್ಕಳಿಗೆ ಆಟವಾಡಲು ಜಾರುಬಂಡೆ, ತಿರುಗುವ ಚಕ್ರ, ಉಯ್ಯಾಲೆಗಳು ಅಳವಡಿಸಲಾಗಿದೆ. ವಾಯು ವಿಹಾರಕ್ಕೆ ಬಂದವರು ಗಿಡಗಳ ನೆರಳಿನಲ್ಲಿ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಮರಗಳ ಕೆಳಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ.

‘ತಾಲ್ಲೂಕಿನಲ್ಲಿ ಉತ್ತಮಪ್ರವಾಸಿ ತಾಣಗಳಿಲ್ಲ. ಇರುವ ಗುಮ್ಮನಾಯಕಪಾಳ್ಯಕೋಟೆ, ನಿಡುಮಾಮಿಡಿಮಠ, ಜಡಲಭೈರವೇಶ್ವರ, ಪಂಚಲಿಂಗೇಶ್ವರದಂತಹ ಐತಿಹಾಸಿಕ ತಾಣಗಳನ್ನು ಸರಿಯಾಗಿ ಅಭಿವೃದ್ಧಿಪಡಿಸಿಲ್ಲ. ಅದಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಕಾರಣ. ಈ ಉದ್ಯಾನಕ್ಕಾದರೂ ಹೆಚ್ಚಿನ ಅನುದಾನ ನೀಡಿ ಮಾದರಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕಿದೆ’ ಎಂದು ಬಾಗೇಪಲ್ಲಿ ನಿವಾಸಿ ಜಿ.ಕೃಷ್ಣಪ್ಪ ಆಗ್ರಹಿಸುವರು.

‘2016-17ನೇ ಸಾಲಿನಲ್ಲಿ ಸುಮಾರು ₹ 57 ಲಕ್ಷ ವೆಚ್ಚದಲ್ಲಿ ಈ ಉದ್ಯಾನ ನಿರ್ಮಿಸಿದ್ದೇವೆ. ಐದು ವರ್ಷಗಳಲ್ಲಿ ಹಂತ-ಹಂತವಾಗಿ ಅಭಿವೃದ್ದಿ

ಪಡಿಸುವ ಯೋಜನೆ ಇದೆ. ಶೀಘ್ರದಲ್ಲಿಯೇ ಸೌರ ವಿದ್ಯುತ್ ದೀಪಗಳು, ಮತ್ತಷ್ಟು ಆಟಿಕೆ ಸಾಮಗ್ರಿಗಳು, ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಪರಿಸರಸ್ನೇಹಿ ಶೌಚಾಲಯ ಅಳವಡಿಸಲಾಗುವುದು’ ಎಂದು ಅರಣ್ಯ ವಲಯ ಅಧಿಕಾರಿ ಅಶ್ವತ್ಥಪ್ಪ ತಿಳಿಸಿದರು.

‘ಶಾಲಾ ಮಕ್ಕಳಿಗೆ ಪರಿಸರದ ಅಧ್ಯಯನಕ್ಕೆ ಅನುಕೂಲವಾಗುವಂತೆ ವೃಕ್ಷೋದ್ಯಾನ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಸಾರ್ವಜನಿಕರಿಗೆ ಪರಿಸರದ ಬಗ್ಗೆ ಮತ್ತಷ್ಟು ಆಸಕ್ತಿ ಮೂಡಿಸುವುದು, ಗಿಡಗಳನ್ನು ಬೆಳೆಸಿ ಮರಗಳನ್ನು ಪರಿಸರ ಉಳಿಸುವ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ’ ಎಂದರು.

ಬಾಗೇಪಲ್ಲಿಯಂತಹ ಬೆಂಗಾಡು ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಉತ್ತಮವಾದ ಸಸ್ಯೋದ್ಯಾನ ನಿರ್ಮಿಸಿರುವುದು ನಿಜಕ್ಕೂ ಅಭಿನಂದನೀಯ

ಅವಿನಾಶ್, ಬಾಗೇಪಲ್ಲಿ ನಿವಾಸಿ 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry