ಉಪಯೋಗಕ್ಕೆ ಬಾರದ ವಧಾಗಾರ

7
ಪುರಸಭೆ ನಿರ್ಮಿಸಿದ ಕಟ್ಟಡ ಟೆಂಡರ್‌ ಆಗದೆ ಅನಾಥ

ಉಪಯೋಗಕ್ಕೆ ಬಾರದ ವಧಾಗಾರ

Published:
Updated:

ಪಿರಿಯಾಪಟ್ಟಣ: ಇಲ್ಲಿಯ ಸಂತೇಮಾಳದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಪುರಸಭೆ ನಿರ್ಮಿಸಿರುವ ವಧಾಗಾರ ನಿರ್ವಹಣೆಯನ್ನು ಯಾರಿಗೂ ನೀಡದ ಕಾರಣ ಸಾರ್ವಜನಿಕರ ಹಣ ಪೋಲಾಗುವುದರ ಜೊತೆಗೆ ಪಟ್ಟಣದಲ್ಲಿ ಅಶುಚಿತ್ವ ಹೆಚ್ಚಾಗುತ್ತಿದೆ.

ಪುರಸಭೆ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಕೋಳಿ, ಮಾಂಸ ಮತ್ತು ಮೀನು ಮಾರಾಟದ ಅಂಗಡಿಗಳಿವೆ. ಈ ಅಂಗಡಿಯವರು ಕೋಳಿ, ಆಡು ಕುರಿಗಳನ್ನು ವಾಧಾಗಾರದಲ್ಲಿ ತಂದು ಸಂಸ್ಕರಿಸಿಕೊಂಡು ಹೋಗಬೇಕಿದೆ. ಆದರೆ ಎರಡು ವರ್ಷಗಳ ಹಿಂದೆ ಪೂರ್ಣಗೊಂಡಿರುವ ವಧಾಗಾರವನ್ನು ಇದುವರೆಗೂ ಬಳಕೆಗೆ ಮುಕ್ತವಾಗಿಲ್ಲ ಎಂಬುದು ಸಾರ್ವಜನಿಕರು ದೂರಿದ್ದಾರೆ.

ಮಾಂಸ ಮಾರಾಟದ ಅಂಗಡಿಗಳಲ್ಲಿ ಅವೈಜ್ಞಾನಿಕವಾಗಿ ಮತ್ತು ಪರಿಸರ ಮಾಲಿನ್ಯವಾಗುವ ರೀತಿಯಲ್ಲಿ ಸಂಸ್ಕರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ದೂರಿರುವ ಪರಿಸರ ಪ್ರೇಮಿಗಳು, ಬಹುತೇಕ ಮಾಂಸದಂಗಡಿಗಳು ಬಿ.ಎಂ. ರಸ್ತೆ ಬದಿಯಲ್ಲಿಯೇ ಇದ್ದು ಅಲ್ಲಿಯೇ ಸಂಸ್ಕರಣೆ ಮಾಡುತ್ತಿದ್ದಾರೆ. ಇದರಿಂದ ವಾಹನಗಳ ಹೊಗೆ, ದೂಳು ಮಾಂಸದ ಮೇಲೆ ಬೀಳುತ್ತಿದೆ. ಇದು ಹಾಗೆ ಮಾರಾಟವಾಗುವುದರಿಂದ ಇದು ಮಾಂಸ ಸೇವಿಸುವವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.  ಸುರಕ್ಷಿತ ವಿಧಾನ ಬಳಸಿ ಮಾಂಸ ಮಾರಾಟ ಮಾಡುವಂತೆ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡುವ ಕೆಲಸವನ್ನು ಪುರಸಭೆ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

‘ಪುರಸಭಾ ವತಿಯಿಂದ ಹರಾಜು ಮಾಡುವ ಮಾಂಸದ ಅಂಗಡಿಗಳಿಂದ ವರ್ಷಕ್ಕೆ ₹ 50ರಿಂದ 60 ಲಕ್ಷ ಆದಾಯ ಬರಲಿದೆ. ಆದರೆ ವ್ಯವಸ್ಥಿತ ಮಾಂಸದ ಅಂಗಡಿ ಸಂಕೀರ್ಣವನ್ನು ನಿರ್ಮಿಸದೆ ಎಲ್ಲೆಂದರಲ್ಲಿ ಮಾಂಸ ಮಾರಾಟಕ್ಕೆ ಅವಕಾಶ ನೀಡಲಾಗುತ್ತಿದೆ. ಇದನ್ನು ಸರಿಪಡಿಸಿದರೆ ಆದಾಯವೂ ಹೆಚ್ಚುವುದು ಎನ್ನುವ ಸಾಮಾಜಿಕ ಕಾರ್ಯಕರ್ತ ಶ್ರೀಧರ್,  ಜನ ಸಂದಣಿಯಿಂದ ಕೂಡಿರುವ ಬಿ.ಎಂ. ರಸ್ತೆ ಪಕ್ಕದಲ್ಲಿಯೇ ಹಲವು ಮಾಂಸದ ಅಂಗಡಿಗಳಿದ್ದು, ಎಸೆದ ತ್ಯಾಜ್ಯ ತಿನ್ನಲು ಬೀದಿ ನಾಯಿಗಳು ಹಿಂಡು ಹಿಂಡಾಗಿ ರಸ್ತೆ ದಾಟುವಾಗ ಹಲವಾರು ಅಪಘಾತಗಳು ಸಂಭವಿಸಿವೆ. ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಅಧಿಕಾರಿಗಳು ಕೂಡಲೆ ಎಚ್ಚೆತ್ತು ವಧಾಗಾರವನ್ನು ಉಪಯೋಗಕ್ಕೆ ಮುಕ್ತಗೊಳಿಸಿ ಆರೋಗ್ಯಕರ ಪರಿಸ್ಥಿತಿಯಲ್ಲಿ ಮಾಂಸ ಮಾರಾಟ ಮಾಡಲು ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕೂಡಲೇ ಪುರಸಭೆ ಆಡಳಿತ ಮಂಡಳಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಮತ್ತು ಶುಚಿತ್ವದಿಂದ ಕೂಡಿದ ಮಾಂಸ ಮಾರಾಟ ಮಾಡಲು ಕ್ರಮಕೈಗೊಳ್ಳಬೇಕು ಎಂದು ಗ್ರಾಹಕ ರಮೇಶ್‌ ಒತ್ತಾಯಿಸಿದ್ದಾರೆ.

ಶುಚಿತ್ವಕ್ಕೆ ಕ್ರಮ: ಭರವಸೆ

ವಧಾಗಾರ ಹರಾಜಿಗೆ ಹಲವಾರು ಬಾರಿ ಟೆಂಡರ್ ಕರೆದರೂ ಯಾರೂ ಅರ್ಜಿ ಸಲ್ಲಿಸದ ಕಾರಣ ಟೆಂಡರ್ ಪ್ರಕ್ರಿಯೆ ಮುಂದೂಡಲಾಗಿದೆ. ಶಾಸಕ ಕೆ.ಮಹದೇವ್‌ ಅವರ ಸಲಹೆ ಪಡೆದು ಮುಂದಿನ ದಿನಗಳಲ್ಲಿ ನಿರ್ದಿಷ್ಟ ಸ್ಥಳದಲ್ಲಿ ಮತ್ತು ಶುಚಿತ್ವದಿಂದ ಮಾಂಸ ಮಾರಾಟ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಪಿರಿಯಾಪಟ್ಟಣ ಪುರಸಭೆ ಅಧ್ಯಕ್ಷ ವೇಣುಗೋಪಾಲ್ ಭರವಸೆ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry