ಖಾಕಿಧಾರಿಗಳ ಹಸಿರು ಪ್ರೀತಿಯ ‘ಹರ್ಷವನ’

7

ಖಾಕಿಧಾರಿಗಳ ಹಸಿರು ಪ್ರೀತಿಯ ‘ಹರ್ಷವನ’

Published:
Updated:

ಪೊಲೀಸರ ಹೆಸರು ಕೇಳಿದೊಡನೆ ನಮಗೆ ಖಾಕಿ ಸಮವಸ್ತ್ರ, ಖದರು ನಡೆ–ನುಡಿ, ಎಫ್‌ಐಆರ್‌, ಚಾರ್ಜ್‌ಶೀಟ್, ಕಸ್ಟಡಿ, ವಾರೆಂಟ್‌ ಎಂಬಿತ್ಯಾದಿ ಸಂಗತಿ ನೆನೆಪಿಗೆ ಬಂದು ಬಿಡುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಅಕ್ಕಿಆಲೂರ ಪೊಲೀಸ್‌ ಹೊರ ಠಾಣೆ ಇದೆ. ಖಾಲಿ ನಿವೇಶನದಲ್ಲಿ ಸಸ್ಯಕಾಶಿ ಸೃಷ್ಟಿಸುವ ಮೂಲಕ ತಮ್ಮೊಳಗಿನ ಪರಿಸರ ಕಾಳಜಿ ಮೆರೆದಿದ್ದಾರೆ.

ಬಿಡುವಿಲ್ಲದ ಕಾರ್ಯ ಚಟುವಟಿಕೆಗಳ ಮಧ್ಯೆಯೂ ಪೊಲೀಸರ ಪರಿಸರ ಕಾಳಜಿ ಅನುಕರಣೀಯ. ಇಲ್ಲಿ ಒಂದು ಸುತ್ತು ತಿರುಗಾಡಿದರೆ, ಚಿಂತೆಗಳೆಲ್ಲವೂ ಮಾರುದ್ದ ದೂರ ಸರಿಯುತ್ತವೆ. ಹಗಲು–ರಾತ್ರಿ ಎನ್ನದೇ ಸಾರ್ವಜನಿಕರ ಸೇವೆಯಲ್ಲಿ ತೊಡಗುವ ಪೊಲೀಸರಿಗೆ ಕರ್ತವ್ಯದ ಮಧ್ಯೆ ಖುಷಿ ನೀಡುತ್ತಿದೆ.

ಬಿಡುವು ಸಿಕ್ಕಾಗಲೆಲ್ಲಾ ಪೊಲೀಸ್ ಸಿಬ್ಬಂದಿ ಗುದ್ದಲಿ, ಸಲಿಕೆ ಹಿಡಿದು ಕೆಲಸ ಮಾಡಿ, ಉದ್ಯಾನ ನಿರ್ಮಿಸಿದ್ದಾರೆ. ಲಕ್ಷಾಂತರ ರೂಪಾಯಿ ಬೆಲೆ

ಬಾಳುವ ಈ ಮರಗಳು ಇಲಾಖೆಗೆ ಆದಾಯವೂ ಆಗಿದೆ.

ಹಿಂದಿನ ಎಸ್ಪಿ ಎಚ್‌.ಎನ್‌.ಸಿದ್ದಣ್ಣ ಇದರ ಪ್ರೇರಕ ಶಕ್ತಿ. ಅವರು ತಾವು ಕಾರ್ಯ ನಿರ್ವಹಿಸಿದ ಅವಧಿಯಲ್ಲಿ ಜಿಲ್ಲೆಯ ಪೊಲೀಸ್‌ ಠಾಣೆಗಳು, ಹೊರಠಾಣೆಗಳು, ಪೊಲೀಸ್‌ ವಸತಿ ಗೃಹಗಳ ಸುತ್ತಲಿನ ಖಾಲಿ ನಿವೇಶನದಲ್ಲಿ ಸಸಿಗಳನ್ನು ನಾಟಿ ಮಾಡಿಸುತ್ತಿದ್ದರು. ಕೆಲವೆಡೆ ಇದು ನಾಶವಾಗಿದ್ದರೆ, ಇಲ್ಲಿನ ಪೊಲೀಸರ ಮುತುವರ್ಜಿಯಿಂದ ಇನ್ನಷ್ಟು ಹಸನಾಗಿದೆ.

ಇಲ್ಲಿ ಸಾವಿರಕ್ಕೂ ಅಧಿಕ ಸಾಗವಾನಿ ಮರಗಳಿವೆ. ಬೇವು, ತೆಂಗು, ಅಶೋಕ ಸೇರಿದಂತೆ ಹಲವು ಪ್ರಭೇದಗಳಿವೆ. ಈ ಸಸ್ಯಕಾಶಿಗೆ ‘ಹರ್ಷವನ’ ಎಂದು ನಾಮಕರಣ ಮಾಡಲಾಗಿದ್ದು, ವನದ ಮಧ್ಯದಲ್ಲಿ ಪುಟ್ಟದೊಂದು ವಿಶ್ರಾಂತಿ ಧಾಮ ನಿರ್ಮಿಸಲಾಗಿದೆ.

ಈ ‘ಹರ್ಷವನ’ದಲ್ಲಿ ಈಗ ದೇಶ– ವಿದೇಶದ ಹಕ್ಕಿಗಳ ಕಲರವ ಕೇಳಿ ಬರಲಾರಂಭಿಸಿದೆ. ಲವ್‌ಬರ್ಡ್ಸ್, ಪಾರಿವಾಳ, ಬಾತುಕೋಳಿ, ಆಫ್ರಿಕನ್‌ ಪ್ಯಾರೆಟ್‌, ಸಿಂಗಿಂಗ್‌ ಪ್ಯಾರೆಟ್‌ ಮತ್ತಿತರ ಪಕ್ಷಿಗಳು ಬಂದು ಬಿಡಾರ ಹೂಡುತ್ತವೆ. ಹಕ್ಕಿಗಳು ಮಾತ್ರವಲ್ಲ, ಒತ್ತಡದ ಬದುಕಿನಲ್ಲಿರುವ ಯಾರೇ ಬಂದರು, ‘ಹರ್ಷವನ’ ನೆಮ್ಮದಿ ನೀಡುತ್ತದೆ.

ಸುರೇಖಾ ಪೂಜಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry