ತಗ್ಗುಗಳಿಂದ ಅಪಾಯಕಾರಿಯಾದ ರಾಜ್ಯ ಹೆದ್ದಾರಿ

7
ಪೈಪ್‍ಲೈನ್ ಹಾವಳಿ

ತಗ್ಗುಗಳಿಂದ ಅಪಾಯಕಾರಿಯಾದ ರಾಜ್ಯ ಹೆದ್ದಾರಿ

Published:
Updated:

ಸಂತೇಬೆನ್ನೂರು: ಇಲ್ಲಿ ಹಾದು ಹೋಗುವ ಕುಮಟಾ-ಕಡಮಡಗಿ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಪೈಪ್‍ಲೈನ್‍ಗಳನ್ನು ಅಳವಡಿಸಲು ಕಿತ್ತ ರಸ್ತೆಯ ಭಾಗಗಳಲ್ಲಿ ತಗ್ಗುಗಳು ಉಂಟಾಗಿ, ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿ ಪರಿಣಮಿಸಿವೆ.

ಸಂತೇಬೆನ್ನೂರಿನಿಂದ ಸೋಮಲಾಪುರದವರೆಗೆ ಸುಮಾರು 10 ಕಿ.ಮೀ. ಅಂತರದಲ್ಲಿ ಹತ್ತಾರು ಪೈಪ್‍ಲೈನ್‌ಗಳನ್ನು ಅಳವಡಿಸಲಾಗಿದೆ. ಪೈಪ್‍ಲೈನ್ ಹಾಕಲು ರಸ್ತೆಯನ್ನು ಜೆಸಿಬಿ ಯಂತ್ರದಿಂದ ಕಿತ್ತುಹಾಕಲಾಗಿದೆ. ಆನಂತರ ಮಣ್ಣಿನಿಂದ ಮುಚ್ಚಿ ರಸ್ತೆ ವಿಕಾರಗೊಳಿಸಲಾಗಿದೆ. ಅವೈಜ್ಞಾನಿಕವಾಗಿ ಡಾಂಬರೀಕರಣ ಮಾಡಿದ ಪರಿಣಾಮ ರಸ್ತೆಯುದ್ದಕ್ಕೂ ಗುಂಡಿಗಳು ಎದುರಾಗುತ್ತವೆ. ವಾಹನ ಚಾಲಕರು ಪದೇ ಪದೇ ಬ್ರೇಕ್ ಒತ್ತುವ ಮೂಲಕ ಪ್ರಯಾಣದ ಕಿರಿ ಕಿರಿ ಅನುಭವಿಸುತ್ತಾರೆ.

ಭದ್ರಾ ನಾಲೆಯಿಂದ ತೋಟಗಳಿಗೆ ನೀರು ಒಯ್ಯುವ ಭರದಲ್ಲಿ ರಾಜ್ಯ ಹೆದ್ದಾರಿ ವಿರೂಪಗೊಳಿಸಲಾಗಿದೆ. ಈಚೆಗೆ ಸುರಿದ ಮಳೆಯಿಂದ ಮಣ್ಣು ಕುಸಿದು ಮತ್ತಷ್ಟು ತಗ್ಗುಗಳು ಉಂಟಾಗಿವೆ. ವೇಗವಾಗಿ ಬರುವ ವಾಹನಗಳಿಗೆ ಧುತ್ತನೆ ಬಿದ್ದ ಅನುಭವ ಆಗುತ್ತಿದೆ. ಚಿಕ್ಕಬೆನ್ನೂರು ಬಳಿ ರಸ್ತೆಯಲ್ಲಿ ಭಾರಿ ಆಳದ ಪೈಪ್‍ಲೈನ್ ಗುಂಡಿ ಬಿದ್ದಿರುವುದು ಕೂಡ ಪ್ರಯಾಣಿಕರಿಗೆ ಆಘಾತ ಒಡ್ಡಿದೆ.

‘ಕೆಲ ರೈತರು ರಸ್ತೆಯಲ್ಲಿ ಗುಂಡಿ ತೋಡಲು ಪಿಡಬ್ಲ್ಯೂಡಿ ಇಲಾಖೆಯ ಅನುಮತಿ ಪಡೆದಿದ್ದಾರೆ. ಅದಕ್ಕೆ ನಿರ್ದಿಷ್ಟ ಶುಲ್ಕ ಭರಿಸಿದ್ದಾರೆ. ಆನಂತರ ಇಲಾಖೆ ವೈಜ್ಞಾನಿಕವಾಗಿ ಡಾಂಬರೀಕರಣ ಮಾಡಿಲ್ಲ. ಮಳೆಯಿಂದ ಕೊಚ್ಚಿಹೋದ ಡಾಂಬರು ತಗ್ಗುಗಳಿಗೆ ಕಾರಣವಾಗಿದೆ. ನಿತ್ಯ ಇದೇ ರಸ್ತೆಯಲ್ಲಿ ಓಡಾಡುವ ನಮಗೆ ಹೆಜ್ಜೆ ಹೆಜ್ಜೆಗೂ ತಗ್ಗುಗಳಿಂದ ವಾಹನ ಚಾಲನೆಗೆ ಅಡ್ಡಿಯುಂಟಾಗಿದೆ. ಪದೇ ಪದೇ ವೇಗದಲ್ಲಿ ಕಡಿತದಿಂದ ಇಂಧನ ಬಳಕೆ ಹೆಚ್ಚಾಗಿದೆ. ಸಮಯವೂ ವ್ಯರ್ಥವಾಗುತ್ತಿದೆ’ ಎನ್ನುತ್ತಾರೆ ಬಸ್‍ ಚಾಲಕರು.

ರಾಜ್ಯ ಹೆದ್ದಾರಿ ತಗ್ಗುಗಳನ್ನು ಪರಿಪೂರ್ಣ ಕಾಮಗಾರಿಯಿಂದ ಮುಚ್ಚಬೇಕು. ರಸ್ತೆಯಲ್ಲಿ ವಾಹನ ಚಾಲನೆಗೆ ತಡೆ ಆಗದಂತೆ ವೈಜ್ಞಾನಿಕವಾಗಿ ರಿಪೇರಿ ನಡೆಸಬೇಕು. ಸ್ವಂತ ಲಾಭಕ್ಕೆ ಸಾರ್ವಜನಿಕ ಆಸ್ತಿ ರಾಜ್ಯ ಹೆದ್ದಾರಿ ಧ್ವಂಸಗೊಳಿಸುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎನ್ನುತ್ತಾರೆ ದ್ವಿಚಕ್ರ ವಾಹನ ಚಾಲಕರು.

ಪೈಪ್‍ಲೈನ್ ಅಳವಡಿಸಲು ಷರತ್ತುಗಳೊಂದಿಗೆ ಅನುಮತಿ ನೀಡಲಾಗಿದೆ. ಎಂ-ಸ್ಯಾಂಡ್ ಬಳಸಿ ಗುಂಡಿ ಮುಚ್ಚಬೇಕು. ಆನಂತರ ಒಂದು ವಾರ ಪೈಪ್ ಲೈನ್ ತೆಗೆದವರೇ ನಿರ್ವಹಿಸಬೇಕು ಎಂಬ ನಿಬಂಧನೆಗಳಿವೆ. ಆದರೆ, ಜೆಸಿಬಿ ಬಳಸಿ ಅನುಕೂಲಕ್ಕೆ ತಕ್ಕಂತೆ ರಸ್ತೆಗೆ ಅಡ್ಡಲಾಗಿ ಗುಂಡಿ ತೆಗೆಯಲಾಗಿದೆ. ಸದ್ಯದಲ್ಲಿಯೆ ರಸ್ತೆ ಗುಂಡಿ ಮುಚ್ಚಿಸಲು ಪ್ರಯತ್ನಿಸಲಾಗುವುದು.

– ಶಿವಕುಮಾರ್. ಸಹಾಯಕ ಕಾರ್ಯನಿರ್ವಾಹಕ; ಎಂಜಿನಿಯರ್. ಲೋಕೋಪಯೋಗಿ ಇಲಾಖೆ.

ರಾಜ್ಯ ಹೆದ್ದಾರಿಯುದ್ದಕ್ಕೂ ಪೈಪ್‍ಲೈನ್‍ಗಾಗಿ ತೆಗೆದ ಗುಂಡಿಗಳು ವಾಹನ ಚಾಲನೆಗೆ ಅಡಚಣೆ ಉಂಟುಮಾಡುತ್ತಿವೆ. ನಿತ್ಯ ಬಸ್‍ಗಳ ಬ್ಲೇಡ್‍ಗಳು ತುಂಡಾಗುತ್ತಿವೆ. ರಾತ್ರಿ ವೇಳೆ ದ್ವಿ ಚಕ್ರ ವಾಹನ ಚಾಲಕರು ಅಪಘಾತಕ್ಕೀಡಾಗುತ್ತಿದ್ದಾರೆ. ಒಟ್ಟರೆ ಅಪಾಯಕಾರಿ ಆಗಿವೆ

ವೀರೇಶ್, ಬಸ್‍ ಏಜೆಂಟ್. ಸೋಮಲಾಪುರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry