ಈ ಶಾಲೆಗಿಲ್ಲ ನೂರರ ಸಂಭ್ರಮ!

7
ಶಿಥಿಲಗೊಂಡಿರುವ ಕಟ್ಟಡ, ಅವ್ಯವಸ್ಥೆಯ ಆಗರವಾಗಿರುವ ಮುನ್ಸಿಪಲ್‌ ಶಾಲೆ

ಈ ಶಾಲೆಗಿಲ್ಲ ನೂರರ ಸಂಭ್ರಮ!

Published:
Updated:
ಈ ಶಾಲೆಗಿಲ್ಲ ನೂರರ ಸಂಭ್ರಮ!

ಬಳ್ಳಾರಿ: ನಗರದ ಮುನ್ಸಿಪಲ್‌ ಸರ್ಕಾರಿ ಪ್ರೌಢಶಾಲೆಗೆ ಈಗ ನೂರರ ಸಂಭ್ರಮ. ಆದರೆ, ಅವ್ಯವಸ್ಥೆಯ ಗೂಡಾಗಿರುವ ಇಲ್ಲಿ ಆ ಸಂಭ್ರಮ ಮರೆಯಾಗಿದೆ.

ಇಡೀ ಕಟ್ಟಡ ಶಿಥಿಲಗೊಂಡಿದೆ. ಗೋಡೆಯ ಹಲವೆಡೆ ಬಿರುಕು ಉಂಟಾಗಿದೆ. ತಾರಸಿ ಸಿಮೆಂಟ್‌ ಕಿತ್ತು ಹೋಗಿದೆ. ಕಿಟಕಿ ಗಾಜುಗಳು ಒಡೆದು ಅನೇಕ ವರ್ಷಗಳೇ ಸಂದಿವೆ. ಆದರೆ, ಅವುಗಳ ದುರಸ್ತಿಯ ಗೋಜಿಗೆ ಹೋಗಿಲ್ಲ. ಇದರಿಂದ ಶಾಲೆಯು ಒಟ್ಟಾರೆ ಅವ್ಯವಸ್ಥೆಯ ಆಗರವಾಗಿದೆ.

ಮಕ್ಕಳು ಶಾಲೆಯ ಕೊಠಡಿಗಳಲ್ಲಿ ಕುಳಿತುಕೊಂಡು ಪಾಠ ಕೇಳುವಂಥಹ ವಾತಾವರಣವೇ ಇಲ್ಲ. ಇದರಿಂದಾಗಿ ಇದು ಹೆಸರಿಗೆ ಶಾಲೆ ಎಂಬಂತಾಗಿದೆ. ಶಾಲೆಯಲ್ಲಿ 200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ತಾಲ್ಲೂಕಿನ ಶಂಕರಬಂಡೆ, ಬಿಸನಳ್ಳಿ, ಗೋನಾಳು, ಕೋಳೂರು ಸೇರಿ ಇತರೆ ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಬಹುತೇಕರು ಬಡ ಕುಟುಂಬದವರಿಗೆ ಸೇರಿದವರು. ಪ್ರಭಾರ ಉಪಪ್ರಾಚಾರ್ಯರು ಸೇರಿದಂತೆ 20 ಜನ ಶಿಕ್ಷಕರಿದ್ದಾರೆ. ಆದರೆ, ಮೂಲಸೌಕರ್ಯ ಮರೀಚಿಕೆಆಗಿದೆ.

‘ಶಾಲೆಯ ಕಟ್ಟಡದಲ್ಲಿ ಬಿರುಕು ಉಂಟಾದರೆ, ನೆಲಹಾಸು ಕಿತ್ತು ಹೋಗಿದೆ. ಶಾಲೆಯ ಸುತ್ತ ಪೊದೆ ಬೆಳೆದಿದೆ. ಇದರಿಂದ ಹಾವು, ಚೇಳು ಓಡಾಡುತ್ತವೆ. ತರಗತಿಯಲ್ಲಿ ಕುಳಿತು ಪಾಠ ಕೇಳಲು ಭಯವಾಗುತ್ತದೆ’ ಎನ್ನುತ್ತಾರೆ ಶಾಲೆಯ ವಿದ್ಯಾರ್ಥಿಗಳು.

‘ಕೊಠಡಿಯ ಛಾವಣಿ ಸಿಮೆಂಟ್‌ ಕಿತ್ತು ಹೋಗಿದ್ದು, ಯಾವಾಗ ಬೀಳುತ್ತದೋ ಎಂಬ ಭಯ ಕಾಡುತ್ತದೆ.ನೀರಿನ ಪೈಪ್‌ಲೈನ್‌ ದುರಸ್ತಿ ಕಂಡಿಲ್ಲ.

ಹೊಸದಾಗಿ ಶೌಚಾಲಯ ಕಟ್ಟಲಾಗುತ್ತಿದೆ. ಅದು ನಿರ್ಮಾಣಗೊಳ್ಳುವವರೆಗೆ ವಿದ್ಯಾರ್ಥಿಗಳಿಗೆ ಬಯಲೇ ಗತಿ ಎಂಬಂತಾಗಿದೆ’ ಎಂದರು.

‘ಶಾಲೆಗೆ ಸೂಕ್ತ ಭದ್ರತೆ ಇಲ್ಲ. ಇದರಿಂದ ಸಂಜೆಯಾದ ಬಳಿಕ ಕಿಡಿಗೇಡಿಗಳು ಬಂದು ಕೂರುತ್ತಾರೆ. ಅಕ್ರಮ ಚಟುವಟಿಕೆಗಳಲ್ಲಿ ತೊಡಗಿ ಸಿಗರೇಟು, ಮದ್ಯ ಸೇವಿಸಿ ಶಾಲೆಯ ಆವರಣದಲ್ಲೇ ಬಾಟಲಿ ಎಸೆದು ಹೋಗುತ್ತಾರೆ. ಇದಲ್ಲದೆ, ವಿದ್ಯುದ್ದೀಪ ಸೇರಿ ಶಾಲಾ ಆವರಣದಲ್ಲಿರುವ ಇತರ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ತಡೆಗೋಡೆ ನಿರ್ಮಿಸಿ, ಭದ್ರತೆಗೆ ಒಬ್ಬ ವ್ಯಕ್ತಿಯನ್ನುನಿಯೋಜಿಸುವ ಅಗತ್ಯಇದೆ’ ಎಂದು ಸಿಬ್ಬಂದಿ ಹೇಳಿದರು.

‘ಶಾಲೆಗೆ ಒಬ್ಬ ಕ್ಲರ್ಕ್‌ ಬೇಕು. ಆದರೆ, ಆ ಹುದ್ದೆ ತುಂಬದ ಕಾರಣ ಶಿಕ್ಷಕರೇ ಕೆಲಸ ನಿರ್ವಹಿಸುವಂತಾಗಿದೆ. ಬಹುತೇಕ ಬಡ ವಿದ್ಯಾರ್ಥಿಗಳೇ ಶಾಲೆಯಲ್ಲಿ ಓದುತ್ತಾರೆ. ಜತೆಗೆ ಶಾಲೆ ನೂರು ವರ್ಷ ಪೂರೈಸಿದೆ. ಇದಕ್ಕೆ ವಿಶೇಷ ಅನುದಾನ ನೀಡಿ ಮೇಲ್ದರ್ಜೆಗೇರಿಸಬೇಕು. ನಂತರ ವಿಶೇಷ ಕಾರ್ಯಕ್ರಮ ಆಯೋಜಿಸಿ ನೂರರ ಸಂಭ್ರಮ ಮಾಡಬೇಕು’ ಎಂದು ತಿಳಿಸಿದರು.

‘ಶಾಲೆಯ ಸಮಸ್ಯೆಗಳ ಕುರಿತು ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ ಗಮನಕ್ಕೆ ತಂದಿದ್ದೇನೆ. ಆದರೆ, ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ’ ಎಂದು ಪ್ರಭಾರ ಉಪಪ್ರಾಚಾರ್ಯ ನರಸಿಂಹಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಲೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಕಲೆ ಹಾಕಲಾಗುವುದು. ನಂತರ ಆ ವರದಿಯನ್ನು ಸರ್ಕಾರಕ್ಕೆ ಕಳುಹಿಸಿ ಕೊಡಲಾಗುವುದು

– ಶ್ರೀಧರನ್, ಡಿಡಿಪಿಐ 

ಪ್ರವೀಣ್‌ ದಲಭಂಜನ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry