ಧರೆಗುರುಳಿದ ಮರ, ಮನೆಗಳು : ₨4 ಲಕ್ಷ ಹಾನಿ

7
ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಮೃಗಶಿರ ಮಳೆ, ಜನಜೀವನ ಸ್ತಬ್ಧ

ಧರೆಗುರುಳಿದ ಮರ, ಮನೆಗಳು : ₨4 ಲಕ್ಷ ಹಾನಿ

Published:
Updated:

ಕಾರವಾರ: ನಗರದಲ್ಲಿ ಶನಿವಾರ ರಾತ್ರಿ ಸುರಿದ ಗಾಳಿ ಸಮೇತ ಬಿರುಸಿನ ಮಳೆಗೆ ₨ 4 ಲಕ್ಷ ಹಾನಿಯಾಗಿದೆ ಎಂದು ತಾಲ್ಲೂಕು ಆಡಳಿತ ಅಂದಾಜಿಸಿದೆ. ಎರಡು ಸರ್ಕಾರಿ ಆಸ್ತಿಗಳು ಸೇರಿದಂತೆ ಒಟ್ಟು 12 ಕಡೆ ಹಾನಿಯಾಗಿರುವ ಕುರಿತು ಅಧಿಕಾರಿಗಳು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಜಿಲ್ಲಾ ಆಸ್ಪತ್ರೆಯ ಮುಂಭಾಗದಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿವಾಸದ ಕಾಂಪೌಂಡ್ ಮೇಲೆ ಬೃಹತ್ ಮರವೊಂದು ಬಿದ್ದು ಹಾನಿಯಾಗಿದೆ. ಮರವು ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಕಂಬ ಕೂಡ ಧರೆಗುರುಳಿದೆ. ಇದರಿಂದಾಗಿ ನಗರ ಭಾಗಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಯಿತು.

ರಸ್ತೆಯ ಮೇಲೆಯೆ ವಿದ್ಯುತ್ ತಂತಿಗಳು ಹರಿದು ಬಿದ್ದು, ಸಂಚಾರಕ್ಕೂ ತೊಡಕು ಉಂಟಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ, ಸಂಚಾರ ಪೊಲೀಸರು ಹಾಗೂ ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕಾಗಮಿಸಿ ರಸ್ತೆಯ ಮೇಲೆ ಬಿದ್ದಿದ್ದ ಮರಗಳನ್ನು ತೆಗೆದು ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಜಿಲ್ಲಾಧಿಕಾರಿ ಕಚೇರಿಯ ಹಿಂದಿನ ಸರ್ಕಾರಿ ಕ್ವಾರ್ಟ್ರಸ್, ಘಾಡಸಾಯಿ ಭೈರೆಯ ಶಾರದಾ ನಾಯ್ಕ ಎಂಬುವವರ ಮನೆ, ಬಾಡ ಗಿಡ್ಡಾ ರಸ್ತೆಯಲ್ಲಿನ ಸುಬ್ಬರಾವ ನಾಯ್ಕ, ಕೋಡಿಬಾಗದ ಪುರುಷೋತ್ತಮ ಬಾಂದೇಕರ್, ಜಾನಾಬಾಗದಲ್ಲಿನ ಸುಮಿತ್ರಾ ದೇವಕಾರ ಹಾಗೂ ಶ್ರೀಪಾದ ಪೆಡ್ನೇಕರ, ಕೋಣೆಯ ಉದಯ ಕಲ್ಯಾಣಕರ್ ಹಾಗೂ ಛಾಯಾ ಹೆಗಡೆ ಅವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿವೆ.

ಸಾವಂತವಾಡದ ಶಾಂತಾ ಪಾಗಿ, ಸವಿತಾ ಪಾಗಿ ಹಾಗೂ ಭಾಸ್ಕರ್ ಪಾಗಿ ಎಂಬುವವರ ಮನೆಗಳ ಮೇಲೆ ಮಾವಿನ ಮರ ಹಾಗೂ ತೆಂಗಿನ ಮರ ಬಿದ್ದಿದೆ. ಭದ್ರಾ ಹೊಟೇಲ್ ಸಮೀಪದ ಮನೆಯ ಸುತ್ತಲೂ ನೀರು ನುಗ್ಗಿ ಹಾನಿಯಾಗಿವೆ. ವಿವಿಧೆಡೆ ವಿದ್ಯುತ್ ತಂತಿಗಳು ಹಾಗೂ ಕಂಬಗಳು ಕೂಡ ಮುರಿದಿವೆ.

ಬಿಸಿಲು– ಮೋಡದ ಕಣ್ಣಾಮುಚ್ಚಾಲೆ: ಭಾನುವಾರ ನಗರದಲ್ಲಿ ಬಿಸಿಲು– ಮೋಡಗಳ ಕಣ್ಣಾಮುಚ್ಚಾಲೆ ಇತ್ತು. ಬೆಳಿಗ್ಗೆ ಒಂದೆರಡು ಹನಿ ತುಂತುರು ಮಳೆಯಾಗಿದ್ದು ಬಿಟ್ಟರೆ, ಮಧ್ಯಾಹ್ನದವರೆಗೆ ಬಿಸಿಲು ಇತ್ತು. ಅದರ ನಂತರ ಆಗಾಗ ಮೋಡ ಕವಿಯುತ್ತಿತ್ತು. ಇದರಿಂದಾಗಿ ಸಂತೆ ವ್ಯಾಪಾರಿಗಳು ಈ ವಾರ ಸ್ವಲ್ಪ ನಿರಾಳಗೊಂಡು ವ್ಯಾಪಾರ ನಡೆಸಿದರು. ಕಳೆದ ವಾರ ಮಳೆ ವ್ಯಾಪಾರಿಗಳಿಗೆ ಅಡ್ಡಿ ಮಾಡಿತ್ತು.

ಅಲೆಗಳ ಅಬ್ಬರ: ಮಳೆಯಿಂದಾಗಿ ಅರಬ್ಬಿ ಸಮುದ್ರದಲ್ಲಿ ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಹೀಗಾಗಿ ಕಡಲತೀರಗಳಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲೂ ಗಣನೀಯ ಇಳಿಕೆಯಾಗಿದೆ.

ಹಳಿಯಾಳದಲ್ಲಿ ನಿರಂತರ ಮಳೆ

ಹಳಿಯಾಳ: ಪಟ್ಟಣದಲ್ಲಿ ದಿನವಿಡೀ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ಭಾನುವಾರದ ಸಂತೆಗೂ ಮಳೆ ಅಡ್ಡಿಯಾಯಿತು. ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಘಟಪ್ರಭಾದಿಂದ ವ್ಯಾಪಾರಸ್ಥರು ತರಕಾರಿ, ಸೊಪ್ಪು ತಂದಿದ್ದರು. ಆದರೆ, ಮಳೆಯಿಂದಾಗಿ ಸಂಜೆವರೆಗೆ ಗ್ರಾಹಕರೇ ಬರದ ಹಿನ್ನೆಲೆಯಲ್ಲಿ ನಿರಾಶೆಯಿಂದ ಅತಿ ಕಡಿಮೆ ಬೆಲೆಗೆ ತರಕಾರಿ, ಸೊಪ್ಪು ಮಾರಾಟ ಮಾಡಬೇಕಾಯಿತು. ಪಟ್ಟಣ ಹಾಗೂ ಗಾಮೀಣ ಭಾಗದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಪಟ್ಟಣದ ಬಹುತೇಕ ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ಸಕ್ಕರೆ ಕಾರ್ಖಾನೆ ಹತ್ತಿರವಿರುವ ಹುಲ್ಲಟ್ಟಿ ಕೆರೆ ಸಂಪೂರ್ಣ ತುಂಬಿ ಕೋಡಿ ಹರಿದಿದೆ.

ತಾಲ್ಲೂಕಿನಾದ್ಯಂತ 240.6 ಮಿ.ಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ, ಈಗಾಗಲೇ 324.5 ಮಿ.ಮೀ ಮಳೆಯಾಗಿದೆ. ಭಾನುವಾರ ಒಂದೇ ದಿನ 18.8 ಮಿ.ಮೀ ಮಳೆಯಾಗಿದೆ. ಒಂದು ವಾರದಿಂದ ತಾಲ್ಲೂಕಿನಲ್ಲಿ ಮಳೆ ಗಾಳಿ, ಸಿಡಿಲಿಗೆ 10 ಜಾನುವಾರುಗಳು ಮೃತಪಟ್ಟಿವೆ. 9 ಜಾನುವಾರು  ಮಾಲೀಕರಿಗೆ ₹3 ಲಕ್ಷ ಪರಿಹಾರವನ್ನು ಪ್ರಕೃತಿ ವಿಕೋಪ ನಿಧಿಯಡಿ ಕಂದಾಯ ಇಲಾಖೆ ವಿತರಿಸಿದೆ. ಒಟ್ಟು 22 ಮನೆಗಳು ಬಿದ್ದಿವೆ. 12 ಮನೆಗಳ ವಾರಸುದಾರರಿಗೆ ₹46 ಸಾವಿರ ಪರಿಹಾರ ವಿತರಿಸಲಾಗಿದೆ. 10 ಮನೆಗಳು ಶೇ 15 ಕ್ಕಿಂತ ಕಡಿಮೆ ಹಾನಿಗೊಳಗಾಗಿದ್ದ ಕಾರಣ ಅಂತಹ ಅರ್ಜಿ ತಿರಸ್ಕೃತಗೊಳಿಸಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದುವರಿದ ಮಳೆ

ಸಿದ್ದಾಪುರ : ತಾಲ್ಲೂಕಿನಲ್ಲಿ ಭಾನುವಾರವೂ ಉತ್ತಮ ಮಳೆ ಬಿದ್ದಿದೆ. ಆಗಾಗ ಬಿಡುವು ನೀಡಿದ ಮಳೆ, ಬಂದ ಸಂದರ್ಭದಲ್ಲಿ ಸಾಕಷ್ಟು ರಭಸವಾಗಿಯೇ ಸುರಿಯಿತು. ಭಾನುವಾರ ಬೆಳಿಗ್ಗೆ ಮುಕ್ತಾಯಗೊಂಡ 24 ತಾಸುಗಳ ಅವಧಿಯಲ್ಲಿ ಪಟ್ಟಣದಲ್ಲಿ 34.2 ಮಿ.ಮೀ ದಾಖ

ಲಾಗಿದೆ. ಇದುವರೆಗೆ ಒಟ್ಟು 458.2 ಮಿ.ಮೀ ಮಳೆ ಬಿದ್ದಂತಾಗಿದೆ .

ಭಾರಿ ಮಳೆಯ ಮುನ್ಸೂಚನೆ

ಸೋಮವಾರ (ಜೂ.11) ಕರ್ನಾಟಕದ ಕರಾವಳಿ ಭಾಗ, ದಕ್ಷಿಣ ಒಳನಾಡು, ಕೇರಳ ಹಾಗೂ ಗೋವಾದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಒರಿಸ್ಸಾ, ಪಶ್ಚಿಮ ಬಂಗಾಳದ ಕರಾವಳಿ, ಬಂಗಾಳ ಕೊಲ್ಲಿಯಲ್ಲಿ ಗಾಳಿಯು ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಬೀಸಲಿದೆ. ಹೀಗಾಗಿ, ಈ ಭಾಗಕ್ಕೆ ಮೀನುಗಾರರು ತೆರಳದಂತೆ ಅದು ಮುನ್ಸೂಚನೆ ರವಾನಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry