3,799 ಸಿಬ್ಬಂದಿಗೆ ಹಿಂಬಡ್ತಿ

7
ಬಡ್ತಿ ಮೀಸಲು: ಒಟ್ಟು 8,801 ಸಿಬ್ಬಂದಿ ಮೇಲೆ ‘ಸುಪ್ರೀಂ’ ಪರಿಣಾಮ

3,799 ಸಿಬ್ಬಂದಿಗೆ ಹಿಂಬಡ್ತಿ

Published:
Updated:
3,799 ಸಿಬ್ಬಂದಿಗೆ ಹಿಂಬಡ್ತಿ

ಬೆಂಗಳೂರು: ರಾಜ್ಯ ಸರ್ಕಾರದ ‘ಬಡ್ತಿ ಮೀಸಲು ಕಾಯ್ದೆ–2002’ ಅನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್‌ 2017ರ ಫೆ. 9ರಂದು ನೀಡಿದ್ದ ಆದೇಶ ಅನುಷ್ಠಾನದ ಪರಿಣಾಮ, 45 ಇಲಾಖೆಗಳಲ್ಲಿ ಒಟ್ಟು 3,799 ಸಿಬ್ಬಂದಿ ಹಿಂಬಡ್ತಿ, 5,002 ಸಿಬ್ಬಂದಿ ಮುಂಬಡ್ತಿ ಪಡೆದಿದ್ದಾರೆ.

ಕೋರ್ಟ್‌ ತೀರ್ಪಿನಂತೆ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಆಧರಿಸಿ, ಎಲ್ಲ ಇಲಾಖೆಗಳು ವಿವಿಧ ವೃಂದಗಳಲ್ಲಿ ಬಡ್ತಿ– ಹಿಂಬಡ್ತಿ  ಪಡೆದ ಸಿಬ್ಬಂದಿಯ ಪಟ್ಟಿ ತಯಾರಿಸಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ (ಡಿಪಿಎಆರ್‌) ಸಲ್ಲಿಸಿವೆ.

ಈ ಮಧ್ಯೆ, ಕೆಲವು ಇಲಾಖೆಗಳಲ್ಲಿ ಮುಂಬಡ್ತಿ– ಹಿಂಬಡ್ತಿ ಸಿಬ್ಬಂದಿಯ ಪಟ್ಟಿ ಸಿದ್ಧಪಡಿಸಿದ್ದರೂ, ಆದೇಶ ಅನುಷ್ಠಾನ ಆಗಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿರುವ ನ್ಯಾಯಾಂಗ ನಿಂದನಾ ಅರ್ಜಿ ಜುಲೈ 4ರಂದು ವಿಚಾರಣೆಗೆ ಬರಲಿದೆ. ಅದಕ್ಕೂ ಮೊದಲು, ತೀರ್ಪನ್ನು ಸಂಪೂರ್ಣ ಅನುಷ್ಠಾನಗೊಳಿಸಿರುವ ಬಗ್ಗೆ ಕೋರ್ಟಿಗೆ ರಾಜ್ಯ ಸರ್ಕಾರ ಪ್ರಮಾಣಪತ್ರ ಸಲ್ಲಿಸಬೇಕಾಗಿದೆ.

ನ್ಯಾಯಾಂಗ ನಿಂದನೆ ಎದುರಿಸಬೇಕಾದ ಸಂದರ್ಭದಿಂದ ಪಾರಾಗಲು ರಾಜ್ಯ ಸರ್ಕಾರ ಮುಂದಾಗಿದ್ದು, ಚೆಕ್‌ ಲಿಸ್ಟ್‌ (ಕೋರ್ಟ್‌ ಆದೇಶ ಪಾಲನೆಗೆ ಸಂಬಂಧಿಸಿದ ವಿವಿಧ ಅಂಶಗಳ ಮಾಹಿತಿ) ಮತ್ತು ದೃಢೀಕರಣ ಪತ್ರವನ್ನು ಇದೇ 25ರ ಒಳಗೆ ಕಡ್ಡಾಯವಾಗಿ ಸಲ್ಲಿಸುವಂತೆ ಎಲ್ಲ ಇಲಾಖೆಗಳಿಗೆ ಡಿಪಿಎಆರ್‌ ಸುತ್ತೋಲೆ ಹೊರಡಿಸಿದೆ. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ತುರ್ತಾಗಿ ಪರಿಶೀಲಿಸಿ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಪ್ರತ್ಯೇಕ ಕೋಶವನ್ನೂ ಆರಂಭಿಸಿದೆ.

‘ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಮತ್ತು ಅದನ್ನು ಆಧರಿಸಿ ನೀಡಿದ ಮುಂಬಡ್ತಿ– ಹಿಂಬಡ್ತಿ ಆದೇಶಗಳಿಗೆ ಆಕ್ಷೇಪ ವ್ಯಕ್ತಪಡಿಸಿ  ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿ ಹಿರಿಯ ಅಧಿಕಾರಿಗಳಿಗೆ ವಿವಿಧ ಇಲಾಖೆಗಳ ನೌಕರರು ದೂರು ಸಲ್ಲಿಸಿದ್ದಾರೆ. ಈ ಅರ್ಜಿಗಳನ್ನು ಆಯಾ ಇಲಾಖೆಗಳಿಗೆ ಕಳುಹಿಸಲಾಗಿದ್ದು ನಿಯಮಾನುಸಾರ ಪರಿಶೀಲಿಸಿ ಇದೇ 20ರೊಳಗೆ ಇತ್ಯರ್ಥಪಡಿಸುವಂತೆ ಆಯಾ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ’ ಎಂದು ಡಿಪಿಎಆರ್‌ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸುಪ್ರೀಂ ಕೋರ್ಟ್‌ ಆದೇಶ ಮತ್ತು ಡಿಪಿಎಆರ್‌ ನೀಡಿರುವ ಸೂಚನೆಗಳು ವಿಧಾನಸಭೆ, ವಿಧಾನಪರಿಷತ್‌ ಸಚಿವಾಲಯಗಳು, ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸಾರ್ವಜನಿಕ ಉದ್ದಿಮೆಗಳು, ಆಯೋಗಗಳು, ನಿಗಮಗಳು, ಮಂಡಳಿಗಳು ಮತ್ತು ಸರ್ಕಾರದಿಂದ ಅನುದಾನ ಪಡೆಯುವ ಎಲ್ಲ ಸಂಸ್ಥೆಗಳಿಗೂ ಅನ್ವಯ ಆಗಲಿದೆ ಎಂದೂ ಅವರು ಸ್ಪಷ್ಟಪಡಿಸಿದರು.

ವೇತನ, ಪಿಂಚಣಿ ಪರಿಷ್ಕರಣೆಗೆ ಮಾರ್ಗಸೂಚಿ: 1978ರ ಏ. 27ರಿಂದ ಅನ್ವಯವಾಗುವಂತೆ ಸರ್ಕಾರಿ ನೌಕರರ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಿ ಬಡ್ತಿ– ಹಿಂಬಡ್ತಿ ನೀಡುವ ಜೊತೆಗೆ ವೇತನ ಮತ್ತು ಪಿಂಚಣಿ ಪರಿಷ್ಕರಣೆಗೆ ಕ್ರಮ ತೆಗೆದುಕೊಳ್ಳಲು ಡಿ‍ಪಿಎಆರ್‌ ಮಾರ್ಗಸೂಚಿ ಹೊರಡಿಸಿದೆ.

ಅದರ ಪ್ರಕಾರ ಮುಂಬಡ್ತಿಗೆ ಅರ್ಹರಾದ ದಿನಕ್ಕೆ ಅನುಗುಣವಾಗಿ ವೇತನ ಮತ್ತು ನಿವೃತ್ತಿ ವೇತನ ನಿಗದಿಪಡಿಸಲಾಗುತ್ತದೆ. ಆದರೆ, ಅದು ಮುಂಬಡ್ತಿ ಆದೇಶ ನೀಡಿದ ದಿನದಿಂದ ಅನ್ವಯ ಆಗಲಿದೆ. ಹಿಂಬಾಕಿ ಮೊತ್ತ ನೀಡಲಾಗುವುದಿಲ್ಲ.

ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ 2017ರ ಫೆ. 9 ಅಥವಾ ಅದಕ್ಕೂ ಮೊದಲು ನಿವೃತ್ತಿ ಪಡೆದ ನೌಕರರಿಗೆ ಬಡ್ತಿ ಪಡೆಯಲು ಅರ್ಹರಾಗಿದ್ದ ದಿನದಿಂದ ವೇತನ ಲೆಕ್ಕ ಮಾಡಿ ಪಿಂಚಣಿ ನೀಡಲಾಗುತ್ತದೆ. ಅವರಿಗೂ ಹಿಂಬಾಕಿ ಪಾವತಿ ಇಲ್ಲ. ಹಿಂಬಡ್ತಿಗೊಳಗಾದ, ಆದರೆ ಈಗಾಗಲೇ ನಿವೃತ್ತಿಯಾದ ನೌಕರರ ಪಿಂಚಣಿಯನ್ನೂ ಅದೇ ರೀತಿ ಲೆಕ್ಕ ಹಾಕಲಾಗುವುದು. ಅಲ್ಲದೆ, ಅವರಿಂದ ಹಣ ವಾಪಸು ಪಡೆಯುವುದಿಲ್ಲ ಎಂದೂ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

‘ಸುಪ್ರೀಂ’ ಆದೇಶದಿಂದ ಮುಂಬಡ್ತಿ– ಹಿಂಬಡ್ತಿ

ಇಲಾಖೆ; ಮುಂಬಡ್ತಿ; ಹಿಂಬಡ್ತಿ; ಒಟ್ಟು

ಗೃಹ; 1,103;1,119;2,222

ಶಿಕ್ಷಣ (ಪ್ರಾಥಮಿಕ ಮತ್ತು ಸೆಕೆಂಡರಿ);982;264;1,246

ಪಿಡಬ್ಲ್ಯೂಡಿ;485;441;926

ಕಂದಾಯ; 307;377;684

ಕಾನೂನು; 304;142;446

ಶಿಕ್ಷಣ (ಉನ್ನತ ಶಿಕ್ಷಣ);246;184;430

ಇಂಧನ;152;190;342

ಆರೋಗ್ಯ;169;169;338

ಸಾರಿಗೆ;128;176;304

ಆರ್ಥಿಕ;122;149;271

ಡಿಪಿಎಆರ್‌;196;72;268

ಆಹಾರ; 245;9;254

ಅರಣ್ಯ;130;91;221

ಕೃಷಿ;82;65;147

ನಗರಾಭಿವೃದ್ಧಿ;78;46;124

ಜುಲೈ 4ರಂದು ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ

25ರ ಒಳಗೆ ದೃಢೀಕರಣ ಪತ್ರ ನೀಡಲು ಡಿಪಿಎಆರ್‌ ಸೂಚನೆ

ವೇತನ, ಪಿಂಚಣಿ ಪರಿಷ್ಕರಣೆಗೆ ಮಾರ್ಗಸೂಚಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry