ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಳಂಬವಾಗಿ ಆರಂಭವಾದ ಮತ ಎಣಿಕೆ

ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ
Last Updated 13 ಜೂನ್ 2018, 9:37 IST
ಅಕ್ಷರ ಗಾತ್ರ

ಕಲಬುರ್ಗಿ: ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಯ ಮತ ಎಣಿಕೆಯು ಮಂಗಳವಾರ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ವಿಳಂಬವಾಗಿ ಆರಂಭವಾಯಿತು.

ಬೆಳಿಗ್ಗೆ 8ಗಂಟೆಗೆ ಅಂಚೆ ಮತಗಳ ಎಣಿಕೆ ಆರಂಭವಾಯಿತು. ಆ ಬಳಿಕ ಮತಪೆಟ್ಟಿಗೆಗಳಲ್ಲಿ ಮತಪತ್ರಗಳನ್ನು ಕ್ರೋಡೀಕರಿಸುವ ಕೆಲಸ ನಡೆಯಿತು. ಮತದಾನ ದಿನದಂದು ಮತಗಟ್ಟೆ ಅಧಿಕಾರಿಗಳು ನಮೂದಿಸಿದ ಮತಕ್ಕೂ, ಮತಪೆಟ್ಟಿಗೆಗಳಲ್ಲಿನ ಮತಕ್ಕೂ ವ್ಯತ್ಯಾಸವಾದ್ದರಿಂದ ಅಧಿಕಾರಿಗಳು ಮತ್ತು ಏಜೆಂಟರ ಮಧ್ಯೆ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು.

ಸ್ಥಳದಲ್ಲಿದ್ದ ಚುನಾವಣಾಧಿಕಾರಿ ಪಂಕಜಕುಮಾರ್ ಪಾಂಡೆ ಮತ್ತು ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶಕುಮಾರ್ ಅವರು ಸಮಸ್ಯೆಯನ್ನು ಬಗೆಹರಿಸಿದರು.

ಇದಾದ ಬಳಿಕ ಅಂದರೆ ಮಧ್ಯಾಹ್ನ 3ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಯಿತು. ಪ್ರಥಮ ಪ್ರಾಶಸ್ತ್ಯದ ಮೊದಲ ಸುತ್ತಿನ ಮತ ಎಣಿಕೆ ಸಂಜೆ 5 ಗಂಟೆಗೆ ಪೂರ್ಣಗೊಂಡಿತು. ಜೆಡಿಎಸ್ ಅಭ್ಯರ್ಥಿ ಎನ್.ಪ್ರತಾಪ್ ರೆಡ್ಡಿ 1,250 ಮತಗಳ ಮುನ್ನಡೆ ಸಾಧಿಸಿದ್ದರು.
ಎರಡನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಾಗ ಜೆಡಿಎಸ್‌ ಅಭ್ಯರ್ಥಿ 278 ಮತಗಳ ಅಲ್ಪ ಮುನ್ನಡೆ ಸಾಧಿಸಿದರು.
ಇವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕೆ.ಬಿ.ಶ್ರೀನಿವಾಸ್ ಅವರು ಎರಡನೇ ಸುತ್ತಿನ ಕೊನೆಗೆ 7,883 ಮತಗಳನ್ನು ಪಡೆದಿದ್ದರು. ಪ್ರತಾಪ್‌ ರೆಡ್ಡಿ 8,151 ಮತಗಳನ್ನು ಪಡೆದಿದ್ದರು.

3ನೇ ಸುತ್ತಿನಲ್ಲಿ ಬಿಜೆಪಿ ಮುನ್ನಡೆ: ವಿಧಾನ ಪರಿಷತ್‌ನ ಈಶಾನ್ಯ ಪದವೀಧರ ಕ್ಷೇತ್ರದ ಮೂರನೇ ಸುತ್ತಿನ ಮತ ಎಣಿಕೆ ಮುಗಿದಿದ್ದು,
ಬಿಜೆಪಿಯ ಕೆ.ಬಿ. ಶ್ರೀನಿವಾಸ್‌ ಅವರು 590 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಶ್ರೀನಿವಾಸ ಅವರಿಗೆ 11,668 ಮತಗಳು ಲಭಿಸಿದರೆ, ಜೆಡಿಎಸ್‌ನ ಪ್ರತಾಪ್‌ ರೆಡ್ಡಿ ಅವರಿಗೆ 11,078, ಕಾಂಗ್ರೆಸ್‌ನ ಡಾ.ಚಂದ್ರಶೇಖರ ಪಾಟೀಲ ಅವರಿಗೆ 9,480 ಮತಗಳು ಲಭಿಸಿವೆ.

ಇನ್ನೊಂದು ಸುತ್ತಿನ ಮತ ಎಣಿಕೆ ಬಾಕಿ ಇದೆ. ನಿಗದಿಯಂತೆ ಪ್ರಥಮ ಪ್ರಾಶಸ್ತ್ಯದ ಮತಗಳು ಯಾವುದೇ ಅಭ್ಯರ್ಥಿಗೆ ಬರುವ ಸಾಧ್ಯತೆ ಇಲ್ಲ.
ಹೀಗಾಗಿ ಪ್ರಾಶಸ್ತ್ಯದ ಮತ ಎಣಿಕೆ ನಡೆಯಲಿದ್ದು, ಮಧ್ಯರಾತ್ರಿಯ ನಂತರ ಫಲಿತಾಂಶ ಲಭ್ಯವಾಗುವ ಸಾಧ್ಯತೆ ಇದೆ.

ಅಂಚೆ ಮತ

ಒಟ್ಟು 119 ಅಂಚೆ ಮತಗಳ ಪೈಕಿ 91 ಮತಗಳು ಸ್ವೀಕೃತವಾಗಿದ್ದು, 28 ಮತಗಳು ತಿರಸ್ಕೃತಗೊಂಡಿವೆ.

ಈಶಾನ್ಯ ಪದವೀಧರ ಕ್ಷೇತ್ರದ ಮತ ಎಣಿಕೆ ಸಂದರ್ಭದಲ್ಲಿ ಮೂರು ಮತ ಪೆಟ್ಟಿಗೆಗಳಲ್ಲಿನ ಮತಪತ್ರಗಳಲ್ಲಿ ವ್ಯತ್ಯಾಸ ಬಂದ ಕಾರಣ ಅಧಿಕಾರಿಗಳು ಮತ್ತು ಪಕ್ಷದ ಏಜೆಂಟರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಟೇಬಲ್ 7ರಲ್ಲಿ 450 ಮತಗಳು ಎಂದು ಮೊದಲು ಹೇಳಲಾಗಿತ್ತು, ಆ ಬಳಿಕ 510 ಮತಗಳಿವೆ ಎಂದು ಮತ ಎಣಿಕೆ ಅಧಿಕಾರಿ ಹೇಳಿದರು. ಇದರಿಂದ ಆಕ್ರೋಶಗೊಂಡ ಏಜೆಂಟರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಇದರಿಂದಾಗಿ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಮತಗಟ್ಟೆ ಸಂಖ್ಯೆ 36ರಲ್ಲಿ 50 ಮತಗಳ ವ್ಯತ್ಯಾಸವಾಗಿತ್ತು. 502 ಮತಗಳು ಚಲಾವಣೆಯಾಗಿದ್ದರೆ, ಮತಗಟ್ಟೆಯಲ್ಲಿ 452 ಮತಪತ್ರಗಳು ಮಾತ್ರ ಇದ್ದವು. ಅದೇ ರೀತಿ ಮತಗಟ್ಟೆ ಸಂಖ್ಯೆ 20ರಲ್ಲಿ 10 ಮತಪತ್ರಗಳ ವ್ಯತ್ಯಾಸ ಕಂಡು ಬಂತು. ಇಲ್ಲಿ 510 ಮತಗಳು ಚಲಾವಣೆಯಾಗಿದ್ದವು. ಆದರೆ ಮತಪೆಟ್ಟಿಗೆಯಲ್ಲಿ ಸಿಕ್ಕಿದ್ದು 500 ಮತಪತ್ರಗಳು ಮಾತ್ರ. ಇದರಿಂದಾಗಿ ಮಧ್ಯಾಹ್ನದವರೆಗೂ ಗೊಂದಲ ಮುಂದುವರಿದಿತ್ತು.

ಅಧಿಕಾರಿಗಳು ನಮೂದಿಸಿರುವ ಮತದಾನದ ವಿವರಕ್ಕೂ, ಮತ ಪೆಟ್ಟಿಗೆಯಲ್ಲಿರುವ ಸಂಖ್ಯೆಗೂ ವ್ಯತ್ಯಾಸ ಕಂಡು ಬಂದಿದೆ. ಹೀಗಾಗಿ ಮತ ಪೆಟ್ಟಿಗೆಯಲ್ಲಿರುವ ಮತಗಳನ್ನು ಪರಿಗಣಿಸಲಾಗಿದೆ 
ಪಂಕಜಕುಮಾರ್ ಪಾಂಡೆ, ಚುನಾವಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT