ಕಾರು ನನ್ನ ಎರಡನೇ ಮನೆ!

7

ಕಾರು ನನ್ನ ಎರಡನೇ ಮನೆ!

Published:
Updated:
ಕಾರು ನನ್ನ ಎರಡನೇ ಮನೆ!

ಅಲ್ಲಿ ಪೂರಾ ಹಸಿರು ಇರಬೇಕು. ಹಾಗೆ ಸೋನೆ ಮಳೆ ಸುರಿತಾ ಇದ್ರೆ ತುಂಬಾ ಚೆನ್ನಾಗಿರುತ್ತೆ. ಜತೆಗೆ, ಈ ಮೂಡ್‍ಗೆ ತಕ್ಕ ಸಂಗೀತ ಕೇಳ್ತಾ ಕಾರಲ್ಲಿ ಲಾಂಗ್ ಡ್ರೈವ್ ಹೋಗ್ತಾ ಇರಬೇಕು. ಅದರ ಮಜಾನೇ ಬೇರೆ. ಈ ತರ ಲಾಂಗ್ ಡ್ರೈವ್ ಎಷ್ಟೋ ಸಲ ಹೋಗಿದೀನಿ. ಆದರೆ ಇನ್ನೂ ದೂರ ಹೋಗಬೇಕು ಎಂಬ ಬಯಕೆ ಇದ್ದೇ ಇದೆ.

ನಾನು ಕಾರು ಕಲ್ತಿದ್ದು ನನ್ನ ಡ್ರೈವರ್‌ನಿಂದಾನೇ. ಒಂದ್ಸಲ ಕಾರು ಕಲಿಲೇ ಬೇಕಾದ ಸಂದರ್ಭ ಬಂತು. ಅದು 2009 ‘ಉಗ್ರಂ’ ಶೂಟಿಂಗ್ ಸಮಯ. ಮೈಸೂರಲ್ಲಿ ಶೂಟಿಂಗ್ ನಡಿತಿತ್ತು. ನನ್ನ ಡ್ರೈವರ್‌ಗೆ ‘ಊರಲ್ಲಿ ಏನೋ ಕೆಲಸ ಇದೆ, ಹೋಗ್ಬೇಕು’ ಅಂದ್ರು. ಅಯ್ಯೋ, ಮುಂದೇನು ಕಥೆ. ಓಡಾಡೋದು ಹೇಗೆ ? – ಚಿಂತೆ ಶುರು ಆಯ್ತು. ಆಗ, ಡ್ರೈವರ್ ‘ನಾನು ಊರಿಗೆ ಹೋಗುವದೊರಳಗೆ ನಿಮಗೆ ಕಾರು ಕಲಿಸ್ತೀನಿ’ ಅಂತ ಹೇಳಿದ್ರು. ಹೀಗೆ ಕಾರು ಕಲಿಕೆ ಶುರು ಮಾಡಿದೆ. ದಿನಾ ಸಂಜೆ ಶೂಟಿಂಗ್ ಮುಗಿದ ಮೇಲೆ ಮೈಸೂರು ನಗರದ ರಸ್ತೆಗಳಲ್ಲಿ ಕಾರು ಓಡಿಸೋ ಕ್ಲಾಸು ನಂಗೆ. ಆಗ ನನ್ ಹತ್ರ ಸ್ವಿಫ್ಟ್ ಡಿಸೈರ್ ಇತ್ತು.

ನಾನು ಯಾವುದೇ ವಿಷಯ ಆದ್ರೂ ಬೇಗ ಗ್ರಹಿಸ್ತೀನಿ. ಹಾಗೆ ಗ್ರಹಿಸಿದಾಗ ಯಾವುದನ್ನಾದರೂ ಬೇಗ ಕಲಿಯಬಹುದು. ಇದು ನನ್ನ ಅಭಿಪ್ರಾಯ. ಹೀಗೆ ಡ್ರೈವಿಂಗ್ ಕೂಡ ಬೇಗ ಕಲಿತೆ. ಕಲಿಯೋ ಸಮಯದಲ್ಲಿ ‘ಅಲ್ಲಿ ಗುದ್ದಿದೆ, ಇಲ್ಲಿಗೆ ಪೆಟ್ಟಾಯಿತು’ ಎನ್ನವ ಯಾವ ಘಟನೆಗಳೂ ನಡೆಯಲಿಲ್ಲ. ಅದೇ ಖುಷಿ.

ಆದರೆ, ಮೊದಲ ಸಲ ಸ್ವತಂತ್ರವಾಗಿ, ಡ್ರೈವರ್ ಇಲ್ಲದೆ ಕಾರು ಓಡಿಸುವಾಗ ಸ್ವಲ್ಪ ಭಯ ಆಗಿತ್ತು. ನನಗೆ ಕಾರು ಓಡಿಸುವ ಭಯಕ್ಕಿಂತ ಪಾರ್ಕಿಂಗ್ ಮಾಡುವಾಗಲೇ ಹೆಚ್ಚು ಭಯ. ಸಣ್ಣ ಜಾಗದಲ್ಲಿ ಪಾರ್ಕ್ ಮಾಡೋಕೆ ಆಗ್ತಿರ್‍ಲಿಲ್ಲ. ಅದಕ್ಕೆ ದೂರ ಆದ್ರು ಪರವಾಗಿಲ್ಲ, ಎಲ್ಲಿ ಹೆಚ್ಚು ವಿಶಾಲವಾದ ಜಾಗ ಸಿಗುತ್ತೋ ಅಲ್ಲೇ ಪಾರ್ಕ್ ಮಾಡ್ತಿದ್ದೆ.

ಡ್ರೈವಿಂಗ್ ಕಲಿತು 9 ವರ್ಷ ಆಯ್ತು. ಅನೇಕ ಸಲ ನಾನೇ ಡ್ರೈವ್ ಮಾಡ್ತೀನಿ. ಇಲ್ಲ ಅಣ್ಣ ಮಾಡ್ತಾನೆ. ತುಂಬಾ ಅಗತ್ಯ ಅನ್ನಿಸಿದರೆ ಮಾತ್ರ ಡ್ರೈವರ್ ಸಹಾಯ ಪಡೆಯೋದು ಅಷ್ಟೆ. ಈಗ ಡ್ರೈವಿಂಗ್ ಭಯವೂ ಇಲ್ಲ, ಪಾರ್ಕಿಂಗ್ ಮಾಡುವುದಕ್ಕೂ ಹೆದರಿಕೆ ಇಲ್ಲ. ಎಷ್ಟು ಸಣ್ಣ ಜಾಗ ಇದ್ದರೂ ಆರಾಮಾಗಿ ಪಾರ್ಕ್ ಮಾಡ್ತೀನಿ.

ಎಲ್ಲ ಕಾರು ಪ್ರಿಯರಿಗೂ ‘ಜಾಗ್ವಾರ್’ ಕಾರು ತಗೋಬೇಕು. ಲಾಂಗ್ ಡ್ರೈವ್ ಹೋಗಬೇಕು ಎಂಬ ಕನಸಿರುತ್ತದೆ. ನನಗೂ ಆ ಕನಸಿತ್ತು. ಆರು ತಿಂಗಳ ಹಿಂದೆ ಆ ಕಾರು ತಗೊಂಡೆ. ಇದರ ಜತೆಗೆ ಮಹೀಂದ್ರ ಎಕ್ಸ್‌ಯುವಿ 500 ಕೂಡ ಇದೆ.

ನನಗೆ ಲಾಂಗ್ ಡ್ರೈವ್ ಹೋಗೋದು ಇಷ್ಟ ಅಂದೆ. ಮೊದಲೇ ಹೇಳ್ದಾಗೆ ಹಸಿರು ಸಿರಿಯ ನಡುವೆ ಕಾರು ಓಡಿಸುವುದಕ್ಕೆ ಸಿಕ್ಕಾಪಟ್ಟೆ ಖುಷಿಯಾಗುತ್ತದೆ. ಆಮೇಲೆ ಹೊಸ ಹೊಸ ಜಾಗಗಳನ್ನ ಹುಡುಕೋದಕ್ಕೆ ಬಹಳ ಇಷ್ಟ. ಸ್ನೇಹಿತರ ಜತೆ, ಕುಟುಂಬದವರ ಜತೆ ಡ್ರೈವ್ ಮಾಡ್ಕೊಂಡು ಹೋಗ್ತಾನೇ ಇರ್ತೀನಿ. ಕಾರು ಓಡಿಸುವಷ್ಟೇ ಬೈಕ್ ರೈಡಿಂಗ್ ಕೂಡ ಇಷ್ಟ. ನಾನು ಬುಲೆಟ್ ಕೂಡ ಓಡಿಸ್ತೀನಿ.

ಗಾಡಿಗಳ ಬಗ್ಗೆ ನಾನು ಸ್ವಲ್ಪ ಭಾವುಕ. ನನ್ನ ಹತ್ರ ಮುಂಚೆ 'ಡಿಯೂ' ಇತ್ತು. ಅದನ್ನು ಮಾರಾಟ ಮಾಡುವಾಗ ತುಂಬಾ ಅಳುಬಂದಿತ್ತು. ಖರೀದಿ ಮಾಡಿದವರು ಅದನ್ನ ರೈಡ್ ಮಾಡ್ಕೊಂಡು ರಸ್ತೆಯಲ್ಲಿ ಮರೆಯಾಗುವವರೆಗೂ ಮಹಡಿ ಮೇಲೆ ನಿಂತು ನೋಡ್ತಾ ಅಳುತ್ತಿದ್ದೆ.

ನಾನು ಮನೆ ಪ್ರೀತಿಸಿದಷ್ಟೇ ಕಾರನ್ನೂ ಪ್ರೀತಿಸುತ್ತೇನೆ. ಕಾರು ನನ್ನ ಎರಡನೇ ಮನೆ ಇದ್ದ ಹಾಗೆ. ಏಕೆಂದರೆ, ಮನೆಯಿಂದ ಹೊರಗೆ ಹೋದಾಗ ಕಾರು ಮನೆಯಷ್ಟೇ ಕಂಫರ್ಟ್ ಕೊಡುತ್ತೆ. ಕಾರಲ್ಲೇ ಕುಳಿತು ತಿನ್ನುತ್ತೇವೆ, ಕುಡಿಯುತ್ತೇವೆ. ರಿಲ್ಯಾಕ್ಸ್ ಮಾಡ್ಕೊಳ್ಳುತ್ತೇವೆ. ಹಾಗಾಗಿ ಮನೆಯಷ್ಟೇ ಕಾರನ್ನೂ ಕೂಡ ಸ್ವಚ್ಛವಾಗಿ, ಸುವ್ಯವಸ್ಥಿತವಾಗಿ ಇಟ್ಕೊಂಡಿರುತ್ತೇನೆ. ಕಾರಿನ ಒಳಗಿಡುವ ಟಿಶ್ಯೂ ಪೇಪರ್‌ನಿಂದ ಹಿಡಿದು ಎಲ್ಲ ಸೌಲಭ್ಯಗಳು, ವಸ್ತುಗಳ ಬಗ್ಗೆ ತುಂಬಾ ಕಾಳಜಿ ವಹಿಸುತ್ತೇನೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry