ನಾಯಕನಹಟ್ಟಿ - ಚುರುಕುಗೊಂಡ ಕೃಷಿ ಚಟುವಟಿಕೆ

7

ನಾಯಕನಹಟ್ಟಿ - ಚುರುಕುಗೊಂಡ ಕೃಷಿ ಚಟುವಟಿಕೆ

Published:
Updated:

ನಾಯಕನಹಟ್ಟಿ: ನಾಯಕನಹಟ್ಟಿ ಹೋಬಳಿಯಾದ್ಯಂತ  ತಿಂಗಳಿನಿಂದ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ರಾಜ್ಯದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶವೆಂದು ನಾಯಕನಹಟ್ಟಿಯನ್ನು ಗುರುತಿಸಲಾಗಿದೆ. ಹೋಬಳಿಯು ಹನ್ನೆರಡು ವರ್ಷದಿಂದ ನಿರಂತರವಾಗಿ ಬರಕ್ಕೆ ತುತ್ತಾಗಿದೆ. ಇಲ್ಲಿನ ಕೆರೆಕುಂಟೆಗಳಲ್ಲಿ ನೀರಿಲ್ಲದೆ ಹನಿನೀರಿಗೂ ತತ್ವಾರ ಉಂಟಾಗಿತ್ತು. ಅಲ್ಪಪ್ರಮಾಣದ ಮಳೆಯಲ್ಲಿ ರೈತರು ಶೇಂಗಾ ಸೇರಿ ಮಳೆಯಾಶ್ರಿತ ಬೆಳೆಯನ್ನು ಬೆಳೆದು ನಷ್ಟ ಅನುಭವಿಸಿದ್ದಾರೆ.

ತಿಂಗಳಿನಿಂದ ಹೋಬಳಿಯಾದ್ಯಂತ ಉತ್ತಮ  ಹದಮಳೆಯಾಗುತ್ತಿದ್ದು, ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಭೂಮಿಯನ್ನು ಹದಗೊಳಿಸಿ ಬಿತ್ತನೆಗೆ ಬೇಕಾದ  ಸಿದ್ಧತಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಶೇಂಗಾ ಬಿತ್ತನೆಯ ವಿವರ: ನಾಯಕನಹಟ್ಟಿ 3,902, ಗೌಡಗೆರೆ 2,645, ನೇಲಗೇತನಹಟ್ಟಿ 7,010, ಎನ್.ಮಹದೇವಪುರ 2,730, ನೇರಲಗುಂಟೆ 7,553, ತಿಮ್ಮಪ್ಪಯ್ಯನಹಳ್ಳಿ 2,851, ಮಲ್ಲೂರಹಳ್ಳಿ 4,853, ಅಬ್ಬೇನಹಳ್ಳಿ 6,528, ಎನ್.ದೇವರಹಳ್ಳಿ 3,319, ಕೆರೆಯಾಗಳಹಳ್ಳಿ 752, ಬುಕ್ಲೊರಹಳ್ಳಿ 1,275 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆಸಲು ಗುರಿ  ಹೊಂದಲಾಗಿದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎನ್.ಗಿರೀಶ್ ಹೇಳುತ್ತಾರೆ.

ಬಿತ್ತನೆ ಪ್ರಮಾಣ: ನಾಯಕನಹಟ್ಟಿ ಹೋಬಳಿಯಲ್ಲಿ 43,838 ಹೆಕ್ಟೇರ್ ಭೌಗೋಳಿಕ ಪ್ರದೇಶವಿದ್ದು, ಮುಂಗಾರು ಸಾಗುವಳಿಯ ಭೂಮಿ ಪ್ರಮಾಣ 24,108 ಹೆಕ್ಟೇರ್ ಪ್ರದೇಶ. ಹೋಬಳಿಯ ಪ್ರಧಾನ ಬೆಳೆಯಾದ ಶೇಂಗಾವನ್ನು  18ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತದೆ. ಉಳಿದ 6ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ, ಸಿರಿಧಾನ್ಯ ಏಕದಳ, ದ್ವಿದಳ, ತೃಣಧಾನ್ಯಗಳಾದ ರಾಗಿ, ನವಣೆ, ಸಜ್ಜೆ, ಹುರುಳಿ, ತೊಗರಿ ಬೆಳೆಯುತ್ತಾರೆ. 

ಮಳೆ ಪ್ರಮಾಣ: ನಾಯಕನಹಟ್ಟಿ ಹೋಬಳಿಯಲ್ಲಿ ಮಳೆಯ ಪ್ರಮಾಣವು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷವು ಉತ್ತಮವಾಗಿದೆ. ಫೆಬ್ರುವರಿ ತಿಂಗಳಲ್ಲಿ 8.4 ಮಿ.ಮೀ, ಮಾರ್ಚ್‍ನಲ್ಲಿ 16 ಮಿ.ಮೀ, ಏಪ್ರಿಲ್‍ನಲ್ಲಿ 4.6ಮಿ.ಮೀ, ಮೇ ತಿಂಗಳಲ್ಲಿ 125.8 ಮಿ.ಮೀ, ಜೂನ್‌ನಲ್ಲಿ ಇಲ್ಲಿಯವರೆಗೂ 55 ಮಿ.ಮೀ ಮಳೆಯಾಗಿದೆ.

2016ರಲ್ಲಿ ವಾರ್ಷಿಕ 216 ಮಿ.ಮೀ, 2017ರಲ್ಲಿ 509.8 ಮಳೆ ದಾಖಲಾಗಿತ್ತು.  ಈಗಾಗಲೇ 200 ಮಿ.ಮೀ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಉತಮವಾಗಿ ಮಳೆ ಬೀಳುವ ಮನ್ಸೂಚನೆ  ಇದೆ ಎಂದು ಸಹಾಯಕ ಕೃಷಿ ಅಧಿಕಾರಿ ಶ್ರೀನಿವಾಸ್ ಹೇಳುತ್ತಾರೆ.

ವಿ.ಧನಂಜಯ ನಾಯಕನಹಟ್ಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry