‘ಕಟ್ಟುಕಥೆ’ಯ ಸತ್ಯ ಕಥಾನಕ

7

‘ಕಟ್ಟುಕಥೆ’ಯ ಸತ್ಯ ಕಥಾನಕ

Published:
Updated:

ಕಡಲ ತಡಿಯ ಹುಡುಗ ರಾಜ್‌ ಪ್ರವೀಣ್‌ ನಿರ್ದೇಶನದ ಮೊದಲ ಚಿತ್ರ ‘ಕಟ್ಟುಕಥೆ’ ಈ ವಾರ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ. ‘ಇದರಲ್ಲಿ ಇರುವುದು ಸಸ್ಪೆನ್ಸ್‌ ಕಥೆ’ ಎಂದು ಹೇಳಿಕೊಂಡಿರುವ ರಾಜ್‌, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನೂ, ಭರವಸೆಗಳನ್ನೂ ಇಟ್ಟುಕೊಂಡಿದ್ದಾರೆ.

ಚಿತ್ರದ ಬಿಡುಗಡೆಗೂ ಮುನ್ನ ಅವರು ‘ಚಂದನವನ’ದ ಜೊತೆ ಮಾತಿಗೆ ಸಿಕ್ಕಿದ್ದರು. ಅವರೊಂದಿಗಿನ ಮಾತುಕತೆಯ ಆಯ್ದ ಭಾಗ ಇದು. ಅಂದಹಾಗೆ, ಈ ಚಿತ್ರದ ಹೆಸರು ‘ಕಟ್ಟುಕಥೆ’ ಎಂದಿದ್ದರೂ ಇದು ಸತ್ಯಕಥೆಯನ್ನು ಆಧರಿಸಿದೆಯಂತೆ. ಈ ಮಾತನ್ನು ಅವರೇ ಹಿಂದೊಮ್ಮೆ ಹೇಳಿಕೊಂಡಿದ್ದರು.

‘ಈ ಸಿನಿಮಾ ಸಂಪೂರ್ಣ ಆಧುನಿಕ ರೀತಿಯ ಚಿತ್ರಕಥೆ ಹೊಂದಿದೆ. ಮುಂದೆ ಹೀಗಾಗುತ್ತದೆ ಎಂದು ವೀಕ್ಷಕರು ಆಲೋಚಿಸಿದ್ದೆಲ್ಲಾ ಉಲ್ಟಾ ಆಗಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಈ ಸಿನಿಮಾ ಸಿದ್ಧಪಡಿಸಿದ್ದೇವೆ. ಹಾಗೆಯೇ, ಒಂದೊಂದು ಪಾತ್ರವನ್ನು ಕಟ್ಟಿರುವ ಬಗೆ ಕೂಡ ವಿಭಿನ್ನವಾಗಿದೆ. ಇದರಲ್ಲಿ ಒಂದು ಪಾತ್ರ ತನ್ನ ನಿಜ ಸ್ವರೂಪವನ್ನು ಸಂಪೂರ್ಣವಾಗಿ ಮರೆತು, ಹೊಸದೊಂದು ರೂಪ ಪಡೆದುಕೊಳ್ಳುತ್ತದೆ. ಒಂದು ಪಾತ್ರ ಇನ್ನೊಂದರ ತರಹ ಇಲ್ಲ. ಒಂದು ಪಾತ್ರ ಅತಿಯಾಗಿ ಮಾತನಾಡುತ್ತದೆ. ಇನ್ನೊಂದು ಪಾತ್ರ ಕಿವುಡ ಆಗಿರುತ್ತದೆ. ಅಪರೂಪಕ್ಕೊಮ್ಮೆ ಮಾತನಾಡುವ ಪಾತ್ರವೊ ಇದರಲ್ಲಿ ಒಂದಿದೆ’ ಎಂದು ಮಾತಿನ ಆರಂಭದಲ್ಲಿಯೇ ಹೇಳಿದರು ರಾಜ್.

ರಾಜ್‌ ಅವರು ಉಡುಪಿ ಜಿಲ್ಲೆಯ ಸುಂದರ ಕಡಲೂರು ಮರವಂತೆ ಸಮೀಪದವರು. ‘ನಾವು ಈ ಸಿನಿಮಾದ ಕಥೆ ಹೇಳುವ ಪ್ರಕ್ರಿಯೆಯಲ್ಲಿ ಮೂರು ದೃಷ್ಟಿಕೋನಗಳನ್ನು ಅಳವಡಿಸಿದ್ದೇವೆ. ನಿರ್ದೇಶಕ, ವೀಕ್ಷಕ ಹಾಗೂ ಪಾತ್ರದ ದೃಷ್ಟಿಕೋನಗಳು ಅವು’ ಎಂದು ತಮ್ಮ ಸಿನಿಮಾದ ವೈಶಿಷ್ಟ್ಯವೊಂದರ ಬಗ್ಗೆ ಹೇಳಿಕೊಂಡರು.

ಈ ಚಿತ್ರದಲ್ಲಿ ಹೀರೊ ಹುಡುಗಿಯೊಬ್ಬಳನ್ನು ನೋಡಿ ತಾನು ಕಿವುಡ ಅಲ್ಲ ಎಂಬ ರೀತಿಯಲ್ಲಿ ಅವಳ ಎದುರು ಸೋಗು ಹಾಕುತ್ತಿರುತ್ತಾನಂತೆ. ‘ಕಥೆಯ ಈ ಆಯಾಮವು ಹಾಸ್ಯಮಯವಾಗಿ ಸಾಗುತ್ತದೆ. ಸಿನಿಮಾದಲ್ಲಿ, ಆರು ತಿಂಗಳ ಹಿಂದೆ ನಡೆದ ಘಟನೆಯೊಂದು ಸ್ಪಷ್ಟವಾಗಿದ್ದರೂ ಇಲಿಯೊಂದರ ಕಾರಣದಿಂದಾಗಿ ಆ ಘಟನೆ ಬೇರೆ ರೂಪ ಪಡೆದುಕೊಳ್ಳುತ್ತದೆ. ಸಿನಿಮಾದ ಬೇರೆ ಬೇರೆ ಟ್ರ್ಯಾಕ್‌ಗಳನ್ನು ಒಂದಕ್ಕೊಂದು ಪೋಣಿಸಿದ್ದೇವೆ. ಒಂದು ಕೊಲೆಯ ರಹಸ್ಯಕ್ಕೆ ಹಾಸ್ಯದ ಸ್ಪರ್ಶ ನೀಡಿ ಸಿನಿಮಾ ಮಾಡಿದ್ದೇವೆ. ಇದು ಹೆಚ್ಚಾಗಿ ಹಾಸ್ಯದ ನೆಲೆಯ ಮೇಲೆಯೇ ನಡೆಯುತ್ತದೆ’ ಎಂದು ತಮ್ಮ ಸಿನಿಮಾ ಬಗ್ಗೆ ವಿವರಣೆ ನೀಡಿದರು.

ಅಂದಹಾಗೆ, ರಾಜ್ ಅವರು ತಮ್ಮ ಸಿನಿಮಾವನ್ನು ಒಂದೇ ದಿನದಲ್ಲಿ ಮೂರು ಬಾರಿ ವೀಕ್ಷಿಸಿದರಂತೆ. ‘ಸಾಮಾನ್ಯವಾಗಿ ಒಂದು ಸಿನಿಮಾವನ್ನು ಒಂದೇ ದಿನ ಮೂರು ಬಾರಿ ನೋಡಿದರೆ ತಲೆನೋವು ಬರುತ್ತದೆ. ಆದರೆ ಕಟ್ಟುಕಥೆ ಸಿನಿಮಾ ವಿಚಾರದಲ್ಲಿ ಹಾಗಾಗಲಿಲ್ಲ’ ಎಂದರು ಅವರು.

ರಾಜ್ ಅವರು ಪದವಿ ವ್ಯಾಸಂಗದ ನಂತರ 3–ಡಿ ಆ್ಯನಿಮೇಷನ್‌ ಕೆಲಸದಲ್ಲಿ ತೊಡಗಿದ್ದರು. ಮೂರು ವರ್ಷ ಈ ಕೆಲಸ ಮಾಡಿ ಸಿನಿಮಾ ರಂಗಕ್ಕೆ ಬಂದಿದ್ದಾರೆ.

‘ನನಗೆ ಸಿನಿಮಾ ಜಗತ್ತಿನಲ್ಲಿ ಈ ಹೊತ್ತಿನಲ್ಲಿ ಗುರು ಇಲ್ಲ. ಇದು ನನ್ನ ಮೊದಲ ಸಿನಿಮಾ. ನೂರಾರು ಧಾರಾವಾಹಿಗಳಿಗಾಗಿ ಕೆಲಸ ಮಾಡಿದ್ದೇನೆ. ಆ್ಯನಿಮೇಷನ್‌ ಕೆಲಸಕ್ಕೆ ಹೋಲಿಸಿದರೆ ನನ್ನ ಪಾಲಿಗೆ ಸಿನಿಮಾ ಮಾಡುವುದು ಸುಲಭದ ಕೆಲಸ. ನಮ್ಮ ಸಿನಿಮಾಕ್ಕೆ ಸೆನ್ಸಾರ್ ಮಂಡಳಿಯವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ’ ಎಂದರು. ‘ಕಟ್ಟುಕಥೆ’ಯನ್ನು ಆರಂಭಿಕ ಹಂತದಲ್ಲಿ ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ, ನಂತರ ಪ್ರೇಕ್ಷಕರ ಪ್ರತಿಕ್ರಿಯೆ ಗಮನಿಸಿ ಇನ್ನಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಇರಾದೆ ಚಿತ್ರತಂಡದ್ದು.

ಈ ಚಿತ್ರವನ್ನು ಬಿಡುಗಡೆ ಮಾಡುವ ದಿನಾಂಕ ತೀರ್ಮಾನಿಸುವ ಮೊದಲು ಇವರು ಕನ್ನಡ ಚಲನಚಿತ್ರ ಮಾರುಕಟ್ಟೆಯ ಟ್ರೆಂಡ್‌ ಬಗ್ಗೆ ಅವಲೋಕನ ನಡೆಸಿರಲಿಲ್ಲ.

‘ಟ್ರೆಂಡ್‌ ಬಗ್ಗೆ ಅವಲೋಕನ ಅಂತೇನೂ ನಾವು ಮಾಡಲಿಲ್ಲ. ರಜನೀಕಾಂತ್ ಅಭಿನಯದ ‘ಕಾಲಾ’ ಸಿನಿಮಾ ತೆರೆಗೆ ಬಂದ ಸಮಯದಲ್ಲೇ ನಮ್ಮ ಸಿನಿಮಾವನ್ನೂ ಬಿಡುಗಡೆ ಮಾಡಲು ನಾನು ಸಿದ್ಧನಿದ್ದೆ’ ಎಂದು ವಿಶ್ವಾಸದಿಂದ ಹೇಳಿಕೊಂಡರು ರಾಜ್. ‘ಆದರೆ, ನನ್ನ ತೀರ್ಮಾನ ಕಾರ್ಯರೂಪಕ್ಕೆ ಬರಲು ನಿರ್ಮಾಪಕರ ಒಪ್ಪಿಗೆ ಬೇಕಿತ್ತು’ ಎಂದರು.

ಈ ಸಿನಿಮಾ ವೀಕ್ಷಿಸಿದ ನಿರ್ಮಾಪಕರೊಬ್ಬರು ಮುಂದಿನ ಸಿನಿಮಾಕ್ಕೆ ತಯಾರಾಗುವಂತೆ ರಾಜ್ ಅವರಿಗೆ ಸೂಚಿಸಿದ್ದಾರಂತೆ. ‘ಹೊಸ ಸಿನಿಮಾದ ಪರಿಕಲ್ಪನೆಯನ್ನು ಸಿದ್ಧಪಡಿಸುತ್ತಾ ಇದ್ದೇನೆ’ ಎಂದರು ರಾಜ್.

‘ನಾವು ಈ ಚಿತ್ರದ ಕಥೆಯನ್ನು ಚೆನ್ನಾಗಿ ವಿನ್ಯಾಸ ಮಾಡಿದ್ದೇವೆ. ಸಸ್ಪೆನ್ಸ್ ಕಥೆಯೊಂದನ್ನು ಇಟ್ಟುಕೊಂಡು, ಅದಕ್ಕೆ ಬೇಕಿರುವ ಪಾತ್ರಗಳನ್ನು ರೂಪಿಸಿದೆವು’ ಎಂದು ಹೇಳಿದ ರಾಜ್‌, ‘ಸಮಾಜದಲ್ಲಿ ಎಷ್ಟೋ ಪ್ರಕರಣಗಳು ಬಗೆಹರಿಯುವುದಿಲ್ಲ. ಶೇಕಡ 60ರಷ್ಟು ಪ್ರಕರಣಗಳು ವಿವಿಧ ಹಂತಗಳಲ್ಲಿ ಬಿದ್ದುಹೋಗುತ್ತವೆ. ಹೀಗೆ ಬಗೆಹರಿಯದ ಪ್ರಕರಣ ಗಳಿಂದ ಒಂದು ಎಳೆಯನ್ನು ಸಿನಿಮಾಕ್ಕಾಗಿ ಎತ್ತಿಕೊಂಡೆ. ಬಹುತೇಕ ಅಪರಾಧ ಪ್ರಕರಣ ಗಳಲ್ಲಿ ಕಂಡುಬರುವ ಸಾಮಾನ್ಯ ಅಂಶಗಳನ್ನು ಇನ್ನೊಂದು ಎಳೆಯನ್ನಾಗಿ ತೆಗೆದುಕೊಂಡು, ಎರಡನ್ನೂ ಬೆಸೆದು ಕಥೆ ಸಿದ್ಧಪಡಿಸಿದೆವು’ ಎಂದು ತಿಳಿಸಿದರು.

‘ಕಟ್ಟುಕಥೆ’ಯ ಚಿತ್ರೀಕರಣ ಬೆಂಗಳೂರು, ಮೈಸೂರು, ಮಡಿಕೇರಿ, ಚಿಕ್ಕಮಗಳೂರಿನಲ್ಲಿ ನಡೆದಿದೆ. ಸೂರ್ಯ, ಸ್ವಾತಿ ಕೊಂಡೆ, ರಾಜೇಶ್ ನಟರಂಗ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ವಿ. ಮಹದೇವ್ ಮತ್ತು ಎನ್. ಸವಿತಾ ಈ ಚಿತ್ರಕ್ಕೆ ಹಣ ಹೂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry