ಹೊರಳು ಹಾದಿಯಲ್ಲಿ ‘ಸತ್ಯಂ ಶಿವಂ ಸುಂದರಂ’

7

ಹೊರಳು ಹಾದಿಯಲ್ಲಿ ‘ಸತ್ಯಂ ಶಿವಂ ಸುಂದರಂ’

Published:
Updated:

ಮೆಗಾ ಸಿರಿಯಲ್ ಎಂದರೆ ಚ್ಯೂಯಿಂಗ್ ಗಮ್ ತರಹ ಎಳೆಯಬಾರದು. ಅಬ್ಬಬ್ಬಾ ಎಂದರೆ 600 ಎಪಿಸೋಡ್‌ಗಳಿಗೆ ಸಮಾಪ್ತಿ ಮಾಡಿದರೆ ಚೆಂದ. ಅದು; ನೋಡುಗರಿಗೂ ಇಷ್ಟವಾಗುತ್ತದೆ. ಕಥೆಯಲ್ಲೂ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಹೀಗೆ ಧಾರಾವಾಹಿಗಳೆಂಬ ಸಮ್ಮೋಹಿನಿಯ ಬಗ್ಗೆ ವೈಯಕ್ತಿಕ ಅಭಿಪ್ರಾಯ ಹರಿಯಬಿಟ್ಟರು ಕಿರುತೆರೆ ನಿರ್ದೇಶಕ ಸಿ.ಎಂ. ದಿಲೀಪ್ ಕುಮಾರ್.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅವರ ನಿರ್ದೇಶನದ ‌‌‌‌‌‘ಸತ್ಯಂ ಶಿವಂ ಸುಂದರಂ’ ಧಾರಾವಾಹಿ 250 ಸಂಚಿಕೆಗಳ ಮೈಲಿಗಲ್ಲು ದಾಟಿದೆ. ಈ ಸಂತಸ ಅವರ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು. ಕಥೆಯು ಬದುಕಿಗೆ ಹತ್ತಿರವಾದರೆ ಮಾತ್ರ ಧಾರಾವಾಹಿ ಹಿಟ್ ಆಗುತ್ತದೆ. ಭಾವನೆಗಳ ತೀವ್ರತೆ, ಕುತೂಹಲ, ಮನರಂಜನೆ ಪ್ರೇಕ್ಷಕರನ್ನು ಹಿಡದಿಡಬಲ್ಲ ಅಂಶಗಳು. ಅತ್ತೆ – ಸೊಸೆ ಜಗಳ, ಕಣ್ಣೀರಿಗೆ ಮರುಗುವ ಹೆಂಗಳೆಯರೇ ಟಿಆರ್‌ಪಿ ಹಿಂದಿನ ಸೂತ್ರಧಾರರು. ಇದು ಎಲ್ಲರಿಗೂ ಗೊತ್ತಿರುವ ಸತ್ಯ ಎಂದು ಮಾತುಕತೆಗೆ ಇಳಿದರು.

ಕಥೆಯ ತಿರುಳು ವಿಭಿನ್ನ ಆಯಾಮಗಳಲ್ಲಿ ಬೆಳೆಯುತ್ತಾ, ಪಾತ್ರಗಳಿಗೆ ಗಟ್ಟಿತನ ತಂದುಕೊಟ್ಟರೆ ಧಾರಾವಾಹಿಗೂ ಹೆಸರು ಬರುತ್ತದೆ. ನಟರು ಪ್ರಸಿದ್ಧರಾಗಿ ಜನಮಾನಸದಲ್ಲಿ ಉಳಿಯುತ್ತಾರೆ.‌‌‌‌‌ ‘ಸತ್ಯಂ ಶಿವಂ ಸುಂದರಂ’ನಲ್ಲಿ ಅಭಿನಯಿಸುತ್ತಿರುವ ಕಲಾವಿದರು ಕೂಡ ಇದಕ್ಕೆ ಹೊರತಾಗಿಲ್ಲ ಎನ್ನುವ ದಿಲೀಪ್, ಧಾರಾವಾಹಿ ಉಣಬಡಿಸುತ್ತಿರುವ ಮನರಂಜನೆಯ ಸಾರಾಂಶ ತೆರೆದಿಟ್ಟರು.

ಅರಸು ಮನೆತನದ ಯುವರಾಜ ಶಿವರಾಜ್ ಅರಸ್ (ನಿಜ ಹೆಸರು: ಚೇತನ್ ಚಂದ್ರ) ಮತ್ತು ಎಲ್ಲರ ಮನ ಗೆದ್ದಿರುವ ಮನೆ ಮಗಳು ಇಷ್ಟಾ (ನಿಜ ಹೆಸರು: ಅಪೂರ್ವ) ಕಥೆಯ ಮುಖ್ಯಭೂಮಿಕೆಯಲ್ಲಿದ್ದಾರೆ. ತನ್ನ ವಿರುದ್ಧ ಸೆಡ್ಡು ಹೊಡೆದು ನಿಲ್ಲುವ ಹುಡುಗಿಗೆ ತಕ್ಕ ಪಾಠ ಕಲಿಸುವ ನಿರ್ಧಾರ ಮಾಡಿದ್ದ ಶಿವನ ಲೆಕ್ಕಾಚಾರವೆಲ್ಲ ತಲೆಕೆಳಗಾಗುತ್ತದೆ. ತಾಪ್ಸಿಯನ್ನು ಮದುವೆಯಾಗುವ ಶಿವನ ತಪ್ಪು ನಿರ್ಧಾರವು ಕೈಗೂಡದಂತೆ ಮಾಡಲು ಮುಂದಾಗುವ ಇಷ್ಟಾ, ತನ್ನ ಪ್ರಯತ್ನದಲ್ಲಿ ಯಶಸ್ಸು ಕಾಣದೆ, ಅನಿವಾರ್ಯವಾಗಿ ಶಿವನಿಗೆ ಗೊತ್ತಿಲ್ಲದೆಯೇ ಅವನ ಪತ್ನಿ ಆಗುತ್ತಾಳೆ.

ತನ್ನ ಪತ್ನಿ ತಾಪ್ಸಿ ಅಲ್ಲ; ಇಷ್ಟಾ ಎನ್ನುವ ಸತ್ಯ ಶಿವನಿಗೆ ಈಗ ಅರಿವಾಗಿದೆ. ಕುಟುಂಬದವರಿಗೆ ತಿಳಿಯದ ಇವರಿಬ್ಬರ ಮದುವೆ ವಿಷಯ ಇನ್ಯಾವ ತಿರುವು ಪಡೆದುಕೊಳ್ಳುತ್ತೆ? ಏನೇ ಕಷ್ಟ ಬಂದರೂ ಇಷ್ಟಾ – ಶಿವ ಅದನ್ನು ಎದುರಿಸಿ ಜಯಶಾಲಿಯಾಗುತ್ತಾರೆಯೇ? ಈ ಆಯಾಮಗಳು ಧಾರಾವಾಹಿಯಲ್ಲಿ ಇನ್ನು ಮುಂದೆ ತೆರೆದುಕೊಳ್ಳಲಿವೆ.

ಮೂವರು ಸಹೋದರರ ಬಾಂಧವ್ಯ, ಶಿವ ಮತ್ತು ಇಷ್ಟಾ ಪಾತ್ರಗಳ ನಡುವಿನ ಪ್ರೇಮ – ಸಲ್ಲಾಪದ ಕಥೆ ಪ್ರೇಕ್ಷಕರ ಅಪೇಕ್ಷೆಗೆ ಅನುಗುಣವಾಗಿ ಸೂಕ್ತ ಬದಲಾವಣೆ ಕಂಡು ಈಗ ಮನರಂಜನೆಯ ಮಹಾಪೂರವನ್ನೇ ಹರಿಸುತ್ತಿದೆ. ಅಲ್ಲದೆ, ಧಾರಾವಾಹಿ ಉತ್ತಮ ಟಿಆರ್‌ಪಿ ಪಡೆದಿರುವುದು ದಿಲೀಪ್‌ ಅವರ ಸಂತಸಕ್ಕೆ ಕಾರಣವಾಗಿದೆ.

ಜೂನ್ 12ಕ್ಕೆ 250 ಸಂಚಿಕೆ ಪೂರೈಸಿರುವ ಧಾರಾವಾಹಿಯ ಮೊದಲ ಸಂಚಿಕೆ 2017ರ ಆಗಸ್ಟ್ 7ರಂದು ಪ್ರಸಾರವಾಗಿತ್ತು. ಚೇತನ್ ಚಂದ್ರ, ಅಪೂರ್ವ, ಅನಿರೀಶ್, ಸುಶ್ಮಿತ್, ಅಪೂರ್ವಶ್ರೀ, ಸಂಧ್ಯಾ, ನಯನ, ನಿರಂಜನ್ ಅವರಂತಹ ದೊಡ್ಡ ತಾರಾ ಬಳಗ ಈ ಧಾರಾವಾಹಿಯಲ್ಲಿ ಇದೆ.

‌ಸಿಕ್ಕಾಪಟ್ಟೆ ಹೆಸರು: ಶಿವರಾಜ್ ಅರಸ್‌ ಎಂಬ ದೊಡ್ಡ ಶ್ರೀಮಂತ ಯುವ ಉದ್ಯಮಿ ಪಾತ್ರ ಚೇತನ್ ಚಂದ್ರ ಅವರಿಗೆ ಸಿಕ್ಕಾಪಟ್ಟೆ ಹೆಸರು ತಂದು ಕೊಟ್ಟಿದೆಯಂತೆ. 10 ವರ್ಷಗಳ ಸಿನಿಮಾ ವೃತ್ತಿಯಲ್ಲಿ ಕಾಣದಷ್ಟು ಸಕ್ಸಸ್‌ ಧಾರಾವಾಹಿಯಲ್ಲಿ ಕಂಡಿದ್ದಾರಂತೆ ಅವರು. ಚೇತನ್ ಅವರು ನಾಯಕ ನಟನಾಗಿ ಅಭಿನಯಿಸಿರುವ ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ‘ಪ್ರಭುತ್ವ’ ಚಿತ್ರದ ಚಿತ್ರೀಕರಣ ಮೈಸೂರು ಜಿಲ್ಲೆ ಟಿ. ನರಸೀಪುರ ಸುತ್ತಮುತ್ತ ನಡೆಯುತ್ತಿದ್ದಾಗ ಶಿವರಾಜ್ ಅರಸ್ ಅಲಿಯಾಸ್ ಚೇತನ್ ಚಂದ್ರ ಅವರನ್ನು ಕಾಣಲು ಮಹಿಳೆಯರು ದುಂಬಾಲು ಬಿದ್ದಿದ್ದರಂತೆ. ತಮ್ಮನ್ನು ಊಟಕ್ಕೆ ಮನೆಗೆ ಆಹ್ವಾನಿಸಿದ ಅಭಿಮಾನ ಕಂಡು ಪುಳಕಿತರಾದರಂತೆ.

ಸಿನಿಮಾಗಿಂತ ಧಾರಾವಾಹಿಯು ಕುಗ್ರಾಮಗಳನ್ನೂ ತಲುಪುತ್ತದೆ. ಕಲ್ಪನೆಯ ಪಾತ್ರಗಳನ್ನು ಜನರು ನಿಜ ಜೀವನಕ್ಕೆ ಕನೆಕ್ಟ್‌ ಮಾಡಿಕೊಂಡು ಆರಾಧಿಸುತ್ತಾರೆ. ಅಚಾನಕ್ಕಾಗಿ ಭೇಟಿಯಾದಾಗ ಪಾತ್ರದ ಹೆಸರಿನಿಂದಲೇ ಕುಶಲೋಪರಿ ವಿಚಾರಿಸುತ್ತಾರೆ ಎಂದು ಧಾರಾವಾಹಿಗೆ ಇರುವ ಸಮ್ಮೋಹನ ಶಕ್ತಿಯನ್ನು ಚೇತನ್ ಕೊಂಡಾಡಿದರು.

ಇದರ ನಡುವೆ ‘ಶಾರ್ದೂಲ’ ಎನ್ನುವ ಚಿತ್ರದಲ್ಲೂ ಇವರು ನಟಿಸಿದ್ದಾರೆ. ಅವರ ಮೊದಲ ತಮಿಳು ಚಿತ್ರ ‘ಇನೈಡ್ರು ಕೋಲವನ್’ ತೆರೆ ಕಾಣಲು ಸಿದ್ಧವಾಗಿದೆ. ಸಿನಿಮಾ ಹಾಗೂ ಧಾರಾವಾಹಿಗೆ ಶಿಫ್ಟ್‌ ಲೆಕ್ಕದಲ್ಲಿ ಕೆಲಸ ಮಾಡಿದರೂ, ಮೊದಲ ಪ್ರಾಶಸ್ತ್ಯ ಧಾರಾವಾಹಿ ಎಂದು ಮನದ ಇಂಗಿತ ವ್ಯಕ್ತಪಡಿಸಿದರು.

ಇಷ್ಟಾ ಪಾತ್ರದ ಮೂಲಕ ಮನೆಮಾತಾಗಿರುವ ಅಪೂರ್ವ ಕೂಡ ಕಿರುತೆರೆ ಅಂಗಳದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಮಣಿಪಾಲದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಬಿಗ್‌ಬಾಸ್‌ ಸೀಸನ್‌ 1ರ ಪ್ರೊಡಕ್ಷನ್‌ನಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ಈ ನಡುವೆ ಕೆಲ ವಾಹಿನಿಗಳಲ್ಲಿ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.

ಧಾರಾವಾಹಿಯಲ್ಲಿ ಇಷ್ಟಾ ಎನ್ನುವ ಗಯ್ಯಾಳಿ ಯುವತಿ ಪಾತ್ರಕ್ಕೊಂದು ಈಗ ಹೊಸ ತಿರುವು ಸಿಕ್ಕಿದ್ದು, ಲವ್ ಗರ್ಲ್‌ ಇಮೇಜ್ ಕೂಡ ಜನರಿಗೆ ಇಷ್ಟವಾಗಿದೆ ಅಪೂರ್ವ ಖುಷಿಯಿಂದ ಬೀಗಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry