7

ಕಲಬುರ್ಗಿ ಹತ್ಯೆ ಪ್ರಕರಣ ಎಸ್ಐಟಿಗೆ?

Published:
Updated:
ಕಲಬುರ್ಗಿ ಹತ್ಯೆ ಪ್ರಕರಣ ಎಸ್ಐಟಿಗೆ?

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಜಾಡು ಭೇದಿಸುವಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಯಶಸ್ವಿಯಾಗುತ್ತಿರುವ ಬೆನ್ನಲೇ, ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನೂ ಆ ತಂಡಕ್ಕೆ ವಹಿಸಲು ಗೃಹ ಇಲಾಖೆ ಚಿಂತನೆ ನಡೆಸಿದೆ.

ಗೌರಿ ಹತ್ಯೆ ಪ್ರಕರಣದಲ್ಲಿ 6 ಆರೋಪಿಗಳನ್ನು ಬಂಧಿಸಿರುವ ಎಸ್‌ಐಟಿ, ಐವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದೆ. ಅದೇ ಕಾರಣಕ್ಕೆ ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್‌ ಅವರನ್ನು ಸಂಪರ್ಕಿಸಿರುವ ಇಲಾಖೆಯ ಕಾರ್ಯದರ್ಶಿ ಉಮೇಶ್‌ ಕುಮಾರ್‌, ‘ಗೌರಿ ಹತ್ಯೆ ತನಿಖೆಯನ್ನು ಚುರುಕುಗೊಳಿಸಿ. ಜತೆಗೆ, ಕಲಬುರ್ಗಿ ಹತ್ಯೆ ಸಂಬಂಧ ಏನಾದರೂ ಮಾಹಿತಿ ಸಿಕ್ಕರೆ ತಿಳಿಸಿ. ಆ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ನಿಮ್ಮ ತಂಡಕ್ಕೆ ವಹಿಸುವ ಬಗ್ಗೆ ಯೋಚಿಸುತ್ತಿದ್ದೇವೆ’ ಎಂದು ಹೇಳಿರುವುದಾಗಿ ಗೊತ್ತಾಗಿದೆ.

ಇನ್ನೆರಡು ದಿನಗಳಲ್ಲಿ ಸಿಂಗ್‌ ಅವರು ಉಮೇಶ್‌ ಕುಮಾರ್‌ ಅವರನ್ನು ಭೇಟಿಯಾಗಿ, ಮಾಹಿತಿ ಹಂಚಿಕೊಳ್ಳಲಿದ್ದಾರೆ. ನಂತರವೇ ಕಲಬುರ್ಗಿ ಪ್ರಕರಣವನ್ನು ಎಸ್‌ಐಟಿಗೆ ವಹಿಸುವ ಸಂಬಂಧ ಗೃಹ ಇಲಾಖೆ ಆದೇಶ ಹೊರಡಿಸುವ ಸಾಧ್ಯತೆ ಇದೆ. ಧಾರವಾಡದ ಕಲ್ಯಾಣ ನಗರದಲ್ಲಿರುವ ಕಲಬುರ್ಗಿ ಅವರ ಮನೆಗೆ 2015ರ ಆಗಸ್ಟ್ 30ರಂದು ಬೆಳಿಗ್ಗೆ ನುಗ್ಗಿದ್ದ ದುಷ್ಕರ್ಮಿಗಳು, ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದರು. ನಂತರ, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಇದುವರೆಗೂ ಆ ಪ್ರಕರಣದ ಆರೋಪಿಗಳ ಸುಳಿವು ಸಿಐಡಿಗೆ ಸಿಕ್ಕಿಲ್ಲ.

ಎಸ್‌ಐಟಿಯಲ್ಲಿ ಸಿಐಡಿ ಅಧಿಕಾರಿಗಳು: ಗೌರಿ ಹತ್ಯೆ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡದಲ್ಲಿ ಸಿಐಡಿ ಅಧಿಕಾರಿಗಳೂ ಇದ್ದಾರೆ. ಈ ಹಿಂದೆ ಅವರೇ ಕಲಬುರ್ಗಿ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದರು. ಹೀಗಾಗಿ, ಆರೋಪಿಗಳಿಂದ ಕಲಬುರ್ಗಿ ಹತ್ಯೆ ಬಗ್ಗೆ ಮಾಹಿತಿ ಕಲೆ ಹಾಕುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ.

‘ಗೌರಿ ಹತ್ಯೆ ತನಿಖೆ ವೇಳೆ ಕಲಬುರ್ಗಿ ಹತ್ಯೆ ಬಗ್ಗೆಯೂ ಸುಳಿವು ಸಿಗಬಹುದೆಂದು ಹುಡಕುತ್ತಿದ್ದೇವೆ. ಕೆಲ ಅಧಿಕಾರಿಗಳು, ಅದಕ್ಕೆಂದೇ ಕೆಲಸ ಮಾಡುತ್ತಿದ್ದಾರೆ. ಇನ್ನೆರಡು ದಿನಗಳ ನಂತರ ಕೆಲ ಸುಳಿವುಗಳು ಸಿಕ್ಕರೂ ಸಿಗಬಹುದು’ ಎಂದು ಎಸ್‌ಐಟಿಯ ಅಧಿಕಾರಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry