7

ಸಾಲ ಮನ್ನಾ ಮಾಡಲು ಬದ್ಧ, ರೈತರಲ್ಲಿ ಗೊಂದಲ ಬೇಡ: ಸಿಎಂ

Published:
Updated:
ಸಾಲ ಮನ್ನಾ ಮಾಡಲು ಬದ್ಧ, ರೈತರಲ್ಲಿ ಗೊಂದಲ ಬೇಡ: ಸಿಎಂ ಎಚ್‌.ಡಿ. ಕುಮಾರಸ್ವಾಮಿ

ಬೆಂಗಳೂರು: ರೈತ ಬಾಂಧವರೇ, ಸಾಲ ಮನ್ನಾ ಬಗ್ಗೆ ಯಾವುದೇ ರೀತಿಯ ಗೊಂದಲ ಬೇಡ. ಸಾಲ ಮನ್ನಾ ಮಾಡಲು ನಾನು ಸಂಪೂರ್ಣ ಬದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪುನರುಚ್ಚರಿಸಿದ್ದಾರೆ.

ಸಾಲ ಮನ್ನಾ ಅತ್ಯಂತ ವೈಜ್ಞಾನಿಕವಾಗಿ ಗರಿಷ್ಠ ರೈತರಿಗೆ ಈ ಪ್ರಯೋಜನ ಸಿಗಬೇಕು ಎನ್ನುವ ಉದ್ದೇಶ ನನ್ನದು ಎಂದಿರುವ ಸಿಎಂ, ನಾನು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಅತಿ ಶೀಘ್ರದಲ್ಲಿ ಈ ಬಗ್ಗೆ ಘೋಷಣೆ ಮಾಡುತ್ತೇನೆ ಎಂದು ಶುಕ್ರವಾರ ಟ್ವೀಟ್‌ ಮಾಡಿದ್ದಾರೆ.

ಹದಿನೈದು ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡುವ ಬಗ್ಗೆ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರು, ಆ ತೀರ್ಮಾನವನ್ನು ಬಜೆಟ್‌ವರೆಗೆ ಮುಂದೂಡಿದ್ದರು. ಇಂದು ರೈತರಲ್ಲಿ ಗೊಂದಲ ಬೇಡ ಎಂದು ಟ್ವೀಟ್‌ ಮಾಡಿದ್ದಾರೆ.

ರೈತರ ₹ 53,000 ಕೋಟಿ ಸಾಲ ಮನ್ನಾ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಜೆಡಿಎಸ್‌ ಭರವಸೆ ನೀಡಿತ್ತು. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅಧಿಕಾರ ಚುಕ್ಕಾಣಿ ಹಿಡಿದ ಬೆನ್ನಲ್ಲೇ, ಪಕ್ಷಕ್ಕೆ ಪೂರ್ಣ ಬಹುಮತ ಸಿಕ್ಕಿಲ್ಲ ಎಂಬ ಕಾರಣ ಹೇಳಿ ಸಾಲ ಮನ್ನಾ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದರು.

ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದ ಬಿಜೆಪಿ ರಾಜ್ಯ ಬಂದ್‌ಗೆ ಬೆಂಬಲವನ್ನೂ ನೀಡಿತ್ತು. ಇದಾದ ಬಳಿಕ ಮೇ 30ರಂದು ರಾಜ್ಯದ ವಿವಿಧ ರೈತ ಸಂಘಟನೆಗಳ ಮುಖಂಡರ ಜೊತೆ ಸಿಎಂ ಸಭೆ ನಡೆಸಿದ್ದರು. 15 ದಿನಗಳೊಳಗೆ ಘೋಷಣೆ ಮಾಡುವುದಾಗಿ ತಿಳಿಸಿದ್ದರು.

* ಇದನ್ನೂ ಓದಿ...

* ಬಜೆಟ್‌ನಲ್ಲಿ ಸಾಲ ಮನ್ನಾ: ಕುಮಾರಸ್ವಾಮಿ ಭರವಸೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry