4
ಈ ಬಾರಿಯಾದರೂ ಭರ್ತಿಯಾಗುವುದೇ ಜಲಾಶಯ?

‘ನೀರಸಾಗರ’ಕ್ಕೆ ಹರಿದುಬರುತ್ತಿದೆ ನೀರು

Published:
Updated:
‘ನೀರಸಾಗರ’ಕ್ಕೆ ಹರಿದುಬರುತ್ತಿದೆ ನೀರು

ಹುಬ್ಬಳ್ಳಿ: ಸತತ ಮೂರು ವರ್ಷಗಳ ಬರದಿಂದ ಸಂಪೂರ್ಣ ಬತ್ತಿಹೋಗಿದ್ದ ಕಲಘಟಗಿ ತಾಲ್ಲೂಕಿನ ‘ನೀರಸಾಗರ’ ಜಲಾಶಯಕ್ಕೆ ಮುಂಗಾರು ಮಳೆಯಿಂದಾಗಿ ಒಂದು ಅಡಿಗೂ ಹೆಚ್ಚು ನೀರು ಹರಿದುಬಂದಿದೆ.

2010ರಲ್ಲಿ ಜಲಾಶಯ ಭರ್ತಿಯಾಗಿತ್ತು. ನಂತರ ಕಳೆದ ಎಂಟು ವರ್ಷಗಳಲ್ಲಿ ಭರ್ತಿಯಾಗಿಲ್ಲ. ಪ್ರಸ್ತುತ ನೀರಸಾಗರ ಜಲಾನಯನ ಪ್ರದೇಶವಾದ ಅಳ್ನಾವರ ಮತ್ತು ಕಲಘಟಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆ ಪ್ರಮಾಣ ಗಮನಿಸಿದರೆ ಈ ವರ್ಷ ಜಲಾಶಯ ಭರ್ತಿಯಾಗಬಹುದು ಎಂಬ ಆಸೆ ಜನರಲ್ಲಿ ಚಿಗುರೊಡೆದಿದೆ.

ಹಳೇ ಹುಬ್ಬಳ್ಳಿ, ಗೋಕುಲ ರೋಡ್‌ ವ್ಯಾಪ್ತಿಯ ಶೇ 30ರಷ್ಟು ನಗರ ಪ್ರದೇಶಕ್ಕೆ ನಿತ್ಯ 35–40 ಎಂಎಲ್‌ಡಿ ಕುಡಿಯುವ ನೀರು ಪೂರೈಸುವ ‘ನೀರಸಾಗರ’ ಜಲಾಶಯ ಬತ್ತಿಹೋಗಿದ್ದರಿಂದ ಮೂರು ವರ್ಷಗಳಿಂದ ನೀರು ಪೂರೈಕೆ ಸ್ಥಗಿತವಾಗಿತ್ತು. ಮುಂಗಾರು ಆರಂಭದಲ್ಲೇ ನೀರು ಹೆಚ್ಚಿನ ಪ್ರಮಾಣದಲ್ಲಿ ಜಲಾಶಯಕ್ಕೆ ಹರಿದು ಬರುತ್ತಿರುವುದರಿಂದ ಈ ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಈ ವರ್ಷವಾದರೂ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ಗರಿಗೆದರಿದೆ.

ಅಗತ್ಯ ಸಿದ್ಧತೆ: ಜಲಾಶಯದಲ್ಲಿ ಸದ್ಯ ಡೆಡ್‌ಸ್ಟೋರೇಜ್‌ ಸೇರಿದಂತೆ 7 ಅಡಿ ನೀರು ಇದೆ. ಕನಿಷ್ಠ 15 ಅಡಿ ನೀರು ಸಂಗ್ರಹವಾದ ಬಳಿಕ ನಗರಕ್ಕೆ ನೀರು ಪೂರೈಕೆ ಆರಂಭಿಸಲಾಗುವುದು. ಮೂರು ವರ್ಷಗಳಿಂದ ಪಂಪಿಂಗ್ ಕಾರ್ಯಾಚರಣೆ ಇಲ್ಲದ್ದರಿಂದ ಯಂತ್ರಗಳ ಸುಸ್ಥಿತಿಯಲ್ಲಿಲ್ಲ. ಅವುಗಳನ್ನು ದುರಸ್ತಿ ಮಾಡಲಾಗುವುದು ಹಾಗೂ ಪೈಪ್‌ಲೈನ್‌ ಸ್ವಚ್ಛಗೊಳಿಸಲಾಗುವುದು ’ ಎಂದು ಜಲಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್‌ ಎನ್‌.ಎಚ್‌.ರಾಜಗೋಪಾಲ ‘ಪ್ರಜಾವಾಣಿ’ಗೆ ತಿಳಿಸಿದರು.

ಹಳ್ಳಿಗಳಿಗೂ ಆಧಾರ: ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ನೀರಸಾಗರ ಜಲಾಶಯ ಕೇವಲ ಹುಬ್ಬಳ್ಳಿ ನಗರಕ್ಕೆ ಮಾತ್ರವಲ್ಲದೇ ಕಲಘಟಗಿ ತಾಲ್ಲೂಕಿನ ಹತ್ತಾರು ಹಳ್ಳಿಗಳ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಮೂಲವಾಗಿದೆ. ಜೊತೆಗೆ ಕೃಷಿ ಚಟುವಟಿಕೆಗೂ ಆಧಾರವಾಗಿದೆ.

1955ರಲ್ಲಿ ಜಲಾಶಯ ನಿರ್ಮಾಣ

ಹುಬ್ಬಳ್ಳಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಸಂಬಂಧ 1955ರಲ್ಲಿ ಮೊದಲ ಹಂತದಲ್ಲಿ ಬೇಡ್ತಿ ಹಳ್ಳಕ್ಕೆ ಕಲಘಟಗಿ ತಾಲ್ಲೂಕಿನ ನೀರಸಾಗರ ಗ್ರಾಮದ ಬಳಿ ಜಲಾಶಯ ನಿರ್ಮಾಣವಾಯಿತು. ಬಳಿಕ 1969ರಲ್ಲಿ ಎರಡನೇ ಹಂತದ ಯೋಜನೆ ಕೈಗೊಳ್ಳುವ ಮೂಲಕ ಜಲಾಶಯದ ಎತ್ತರ ಹೆಚ್ಚಿಸಲಾಯಿತು.

ಬೇಡ್ತಿ ಹಳ್ಳವು ನೀರಿನ ಪ್ರಮುಖ ಮೂಲವಾಗಿದ್ದು, 181 ಚದರ ಕಿ.ಮೀ. ಜಲಾನಯನ ಪ್ರದೇಶ ಹೊಂದಿದೆ. ನೀರಸಾಗರ ಸಮೀಪವೇ ಜಲಾಗಾರವಿದೆ. 2002ರಲ್ಲಿ ಜಲಾಶಯದಲ್ಲಿ ಹೂಳೆತ್ತುವ ಮೂಲಕ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಲಾಗಿತ್ತು. ಪ್ರಸ್ತುತ 1.02 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.

ಮರೀಚಿಕೆಯಾದ ಅಭಿವೃದ್ಧಿ

ನೀರಸಾಗರ ಜಲಾಶಯಕ್ಕೆ ಹೊಂದಿ ಕೊಂಡಂತೆ 110 ಎಕರೆ ಜಮೀನು ಇದ್ದು, ಇಲ್ಲಿ ಉದ್ಯಾನ ನಿರ್ಮಿಸುವ ಮೂಲಕ ಈ ಸ್ಥಳವನ್ನು ಪ್ರವಾಸಿ ತಾಣವನ್ನಾಗಿಸುವ ಪ್ರಸ್ತಾವ ಹತ್ತಾರು ವರ್ಷಗಳಿಂದಲೂ ಇದೆ.

ದರ್ಪಣ್‌ ಜೈನ್‌ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಯೋಜನೆಗೆ ಚಾಲನೆ ಸಿಕ್ಕಿತ್ತು. ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಿದ್ದರು. ಆದರೆ, ಹಣ ಬಿಡುಗಡೆಯಾಗಿಲ್ಲ. ಅಭಿವೃದ್ಧಿಯೂ ಆಗಲಿಲ್ಲ. ಸದ್ಯ ಕಾಂಪೌಂಡ್ ಬಿಟ್ಟರೆ ಉಳಿದ ಯಾವ ಸೌಲಭ್ಯವನ್ನು ಜಿಲ್ಲಾಡಳಿತ ಕಲ್ಪಿಸಿಲ್ಲ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry