ಮಂಗಳವಾರ, ಜುಲೈ 5, 2022
23 °C

ಸಮೋಸಾ ವ್ಯಾಪಾರಿ ಮಗಳ ಹಾಡುಹುಚ್ಚು

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಸಮೋಸಾ ವ್ಯಾಪಾರಿ ಮಗಳ ಹಾಡುಹುಚ್ಚು

ದೊಡ್ಡ ಮಾತಾಡಬೇಡ. ಹೋಗು… ಸಮೋಸಾ ಮಾರು’- ಸಹಪಾಠಿ ಹೀಗೆ ಕಿಚಾಯಿಸಿದ ದಿನ ನೇಹಾ ಕಕ್ಕರ್ ಮನೆಗೆ ಹೋಗಿ ಗೊಳೋ ಎಂದು ಅತ್ತಿದ್ದಳು. ಆಗಿನ್ನೂ ಆರರ ಹುಡುಗಿ. ಅಪ್ಪ ಸಂಜೆಯಾಯಿತೆಂದರೆ ಒಲೆ ಮೇಲೆ ಬಾಣಲೆ ಇಟ್ಟು, ಬಿಸಿ ಬಿಸಿ ಸಮೋಸ ಮಾಡಿ, ಮಾರುತ್ತಿದ್ದರು.

ಎಣ್ಣೆಯಲ್ಲಿ ಸಮೋಸ ಬೇಯುವ ನಡುವೆಯೇ ನೇಹಾ ಅಲ್ಲೊಂದು ಹಾಡು ಹೇಳಿದಳೆಂದರೆ, ‘ವಾಹ್ ವಾಹ್’ ಎನ್ನುತ್ತಲೇ ಸಮೋಸ ಜತೆಗೆ ಅದನ್ನು ನೆಚ್ಚಿಕೊಳ್ಳುವ ಸಹೃದಯರೂ ಇದ್ದರು. ಆದರೆ, ಗಾಯಕಿಯಾಗುವ ಕನಸು ಹೊತ್ತ ಹುಡುಗಿಗೆ ಸ್ನೇಹಿತೆಯೇ ಚುಚ್ಚಿದರೆ ಸಂಕಟವಾಗುವುದು ಸಹಜವೇ.

ಶಾಸ್ತ್ರೀಯ ಸಂಗೀತ ಕಲಿಯಲು ಗುರುವಿನ ಸನ್ನಿಧಿಗೆ ಸೇರುವಷ್ಟು ಬೆಂಬಲ ಮನೆಯಲ್ಲಿ ನೇಹಾಗೆ ಇರಲಿಲ್ಲ. ಹಾಗಂತ ಯಾರೂ ಹಾಡಲು ಅಡ್ಡಿಪಡಿಸುತ್ತಿರಲಿಲ್ಲ.

ಅಕ್ಕ ಸೋನು ಕಕ್ಕರ್ ಕಂಠವೂ ಚೆನ್ನಾಗಿತ್ತು. ಅಕ್ಕ-ತಂಗಿಯರ ಹಾಡೆಂದರೆ ದೆಹಲಿ, ಗುರುಗ್ರಾಮದ ಗಲ್ಲಿಗಲ್ಲಿಗಳೆಲ್ಲ ಕಿವಿ ಅರಳಿಸಿಕೊಳ್ಳುತ್ತಿದ್ದವು. ಎಣ್ಣೆಯಲ್ಲಿ ಅಪ್ಪ ಸಮೋಸ ತೇಲಿಬಿಡುವ ಹೊತ್ತಿಗೆ ಅಕ್ಕ-ತಂಗಿಯರು ಯಾವುದೋ ಮೊಹಲ್ಲಾದ ‘ಮಾತಾ ಕಿ ಚೌಕಿ’ ಧಾರ್ಮಿಕ ಕಾರ್ಯಕ್ರಮದಲ್ಲಿ ಭಜನೆ ಮಾಡುತ್ತಿದ್ದರು. ಭಕ್ತಿಭಾವದಲ್ಲಿ ಇಬ್ಬರೂ ಭಜನೆಗಳನ್ನು ಹಾಡುತ್ತಿದ್ದರೆ ದೈವಾಂಶವನ್ನೇ ಅವರಿಬ್ಬರಲ್ಲಿ ಜನ ಕಾಣುತ್ತಿದ್ದರು. ಕೆಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾತ್ರಿಯಿಡೀ ಹಾಡಬೇಕಿತ್ತು.

ಗಂಟಲಲ್ಲಿ ಕಿಚ್ ಕಿಚ್ ಬಂದರೆ ಒಂದಿಷ್ಟು ಬಿಸಿ ಚಹಾವೇ ಔಷಧ. ಜಾಗರಣೆಯಿದ್ದು, ಗಂಟೆಗಟ್ಟಲೆ ಹಾಡಿದ ಮೇಲೆ ಭಕ್ತರು ಕೊಡುತ್ತಿದ್ದ ಹಣವನ್ನು ಪುಟ್ಟ ಕೈಚೀಲಕ್ಕೆ ಹಾಕಿಕೊಂಡು ಹೊರಡುತ್ತಿದ್ದ ಅಕ್ಕ-ತಂಗಿಯರ ಮಾತೆಲ್ಲವೂ ಸಂಗೀತದ ಭವಿಷ್ಯದ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಚಿಕ್ಕಾಸು ಕೂಡಿಡುತ್ತಲೇ ಭವಿತವ್ಯದ ಕುರಿತು ಕನಸು ಕಾಣುತ್ತಿದ್ದ ಇಬ್ಬರ ಇರಾದೆ ಮಾತ್ರ ಪಕ್ಕಾ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾಡುತ್ತಿದ್ದ ಭಜನೆಯೇ ರಿಯಾಜ್.

ನಾಲ್ಕನೇ ವಯಸ್ಸಿನಿಂದ ಹದಿನಾರರವರೆಗೆ ನೇಹಾ ಹಾಡುಗಾರಿಕೆಯನ್ನು ಸುಧಾರಿಸಿಕೊಂಡಿದ್ದೇ ಭಜನೆಗಳನ್ನು ಹಾಡುವ ಮೂಲಕ. ಅನುಕರಣೆಯ ಆ ಮಾದರಿಯಲ್ಲೂ ತನ್ನತನದ ಛಾಪನ್ನು ಮೂಡಿಸಲು ಅವಳು ಹೆಣಗಾಡುತ್ತಿದ್ದಳು. ಅದುವರೆಗಿನ ರಿಯಾಜ್‌ಗೆ ಅರ್ಥ ಸಿಕ್ಕಿದ್ದು ‘ಇಂಡಿಯನ್ ಐಡಲ್’ ರಿಯಾಲಿಟಿ ಷೋನ ಎರಡನೇ ಆವೃತ್ತಿಯ ಸ್ಪರ್ಧಿಯಾಗಿ ಆಯ್ಕೆಯಾದ ಮೇಲೆ. ಅಲ್ಲಿಂದ ಬದುಕು ಬದಲಾಯಿತು.

ನೇಹಾ ಎಂಬ ‘ಅವಳು’, ‘ಅವರು’ ಎಂದು ಕರೆಸಿಕೊಳ್ಳುವ ಮಟ್ಟಕ್ಕೆ ಬೆಳೆದ ಪುಟ್ಟ ಸತ್ಯಕಥೆ ಇದು.

‘ನೇಹಾ-ದಿ ರಾಕ್ ಸ್ಟಾರ್’ ಎಂಬ ಆಲ್ಬಂ ಮಾಡಿದಾಗ ಯುವಜನತೆ ಈ ಹುಡುಗಿಯ ಪ್ರತಿಭೆಯತ್ತ ಆಕರ್ಷಿತವಾಯಿತು. ಆ ಆಲ್ಬಂ ಸೂಪರ್ ಹಿಟ್ ಆಯಿತು. ‘ಇಂಡಿಯನ್ ಐಡಲ್’ ಸ್ಪರ್ಧೆಯಲ್ಲಿ ಅನುರಣಿಸಿದ ಕಂಠಕ್ಕೂ ಜನಮನ್ನಣೆ. ಬಾಲಿವುಡ್ ಅವಕಾಶದ ದಿಡ್ಡಿಬಾಗಿಲು ತೆರೆಯಿತು.

ಪಂಜಾಬಿ, ಸೂಫಿ ಶೈಲಿಯ ಹಾಡುಗಳಿಗೆ ಅಗತ್ಯವಿದ್ದ ಪಲುಕು ತುಂಬಿದ ನೇಹಾ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸದ್ದು ಮಾಡಿದ ಬಾಲಿವುಡ್ ಗಾಯಕ-ಗಾಯಕಿಯರ ಯಾದಿಯಲ್ಲಿ ಪ್ರಮುಖರು.

ಇದೇ ನೇಹಾ ರಿಯಾಲಿಟಿ ಷೋ ತೀರ್ಪುಗಾರ್ತಿಯ ಕುರ್ಚಿ ಮೇಲೆ ಕೂರುತ್ತಾರೆ. ಎದೆತುಂಬಿ ಹಾಡುವ ಮಕ್ಕಳ ಗೀತೆಗಳನ್ನು ಮನತುಂಬಿ ಕೇಳುತ್ತಾರೆ.

ಮಕ್ಕಳ ಜತೆ ಮಗುವಿನಂತೆ ಬೆರೆಯುವ ಅವರದ್ದು ಬಿಂದಾಸ್ ವ್ಯಕ್ತಿತ್ವ. ‘ನೇಹಾ ಹಾಡು ಅವರ ಮುಖದ ತುಂಬಾ ಕಾಣುತ್ತದೆ. ಭಾವವನ್ನು ಅನುಭವಿಸಿ ಹಾಡುವ ಅವರ ತೀವ್ರತೆಯನ್ನು ಯಾರುತಾನೆ ಮೆಚ್ಚಿಕೊಳ್ಳದಿರಲು ಸಾಧ್ಯ’ ಎಂದು ವಾರಗೆಯ ಗಾಯಕ ಅರಿಜಿತ್ ಸಿಂಗ್ ಹೊಗಳಿದ್ದರಲ್ಲೂ ಅರ್ಥವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.