ಪುಟ್ಟ ಅವಿಭಕ್ತ ಕುಟುಂಬದ ರಂಜಾನ್ ಸಂಭ್ರಮ

7
ರಂಜಾನ್ ಮಾಸದಲ್ಲಿ ಆ ಮನೆಯ ಮಹಿಳೆಯರ ನಿದ್ರಾ ಸಮಯ ಕೇವಲ ಮೂರೂವರೆ ತಾಸು l ಕಷ್ಟಪಟ್ಟು ದುಡಿಯುತ್ತಾ ಕಟ್ಟುನಿಟ್ಟಿನ ಆಚರಣೆ

ಪುಟ್ಟ ಅವಿಭಕ್ತ ಕುಟುಂಬದ ರಂಜಾನ್ ಸಂಭ್ರಮ

Published:
Updated:
ಪುಟ್ಟ ಅವಿಭಕ್ತ ಕುಟುಂಬದ ರಂಜಾನ್ ಸಂಭ್ರಮ

ಶಿವಮೊಗ್ಗ: ಮಿಳ್ಳಘಟ್ಟ ರಸ್ತೆಯ ಕೆರೆ ಅಂಗಳದ ಆ ಪುಟ್ಟ ಮನೆಯಲ್ಲಿ ಎರಡು ಕುಟುಂಬಗಳ 11 ಸದಸ್ಯರು ಜೀವನ ಸಾಗಿಸುತ್ತಿದ್ದಾರೆ.

ಅವರಲ್ಲಿ ಏಳು ಜನ ಮಕ್ಕಳು. ಎಲ್ಲರೂ ಶಾಲೆ, ಕಾಲೇಜಿಗೆ ಹೋಗುತ್ತಾರೆ. ಮನೆಯ ಯಜಮಾನರಲ್ಲಿ ಒಬ್ಬರು ಪಾರಂಪರಿಕ ಆಯುರ್ವೇದ ವೈದ್ಯ. ಮತ್ತೊಬ್ಬರು ಅನುಪಯುಕ್ತ ವಸ್ತುಗಳ ವ್ಯಾಪಾರಿ. ಮನೆಯೊಡತಿಯರಲ್ಲಿ ಒಬ್ಬರು ಗೃಹಿಣಿ. ಮತ್ತೊಬ್ಬರು ಕುವೆಂಪು ವಿಶ್ವ ವಿದ್ಯಾಲಯದ ದೂರ ಶಿಕ್ಷಣದ ಇತಿಹಾಸ ವಿಭಾಗದಲ್ಲಿ ಸಂಶೋಧನಾ ಮತ್ತು ಬೋಧನಾ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಎಷ್ಟೇ ಬೇಗ ಎದ್ದು ನಿತ್ಯದ ಕೆಲಸ ಕಾರ್ಯಗಳನ್ನು ಮುಗಿಸಿದರೂ, ಶಾಲಾ ವಾಹನ ಬರುವ ವೇಳೆಗೆ ಮಕ್ಕಳು ಸಿದ್ಧವಾಗಿರುವುದಿಲ್ಲ. ಕೆಲಸಕ್ಕೆ ಹೋಗುವ ವೇಳೆಗೆ ಗಡಿಬಿಡಿ ತಪ್ಪಿದ್ದಲ್ಲ. 11 ತಿಂಗಳು ಇಂತಹ ಒತ್ತಡದ ಜೀವನ ನಡೆಸುವ ಈ ಕುಟುಂಬದ ರಂಜಾನ್ ತಿಂಗಳ ಮಾಸ ಮಾತ್ರ ವಿಭಿನ್ನ.

ಕೆಳ ಮಧ್ಯಮ ವರ್ಗದ ಸೈಯದ್ ಮಹಿಬುಲ್ಲಾ ಖಾದ್ರಿ, ಸೈಯದ್ ಇಸಾಕ್ ಖಾದ್ರಿ ಸಹೋದರರು ಪುಟ್ಟ ಮನೆಯಲ್ಲಿ ಒಟ್ಟಿಗೆ ಬದುಕು ನಡೆಸಿದರೂ, ಧಾರ್ಮಿಕ ಶ್ರೀಮಂತಿಕೆಗೆ ಎಂದೂ ಕೊರತೆ ಎದುರಾಗಿಲ್ಲ. ವರ್ಷವಿಡೀ ಕಷ್ಟಪಟ್ಟು ದುಡಿಯುವ ಈ ಕುಟುಂಬ ರಂಜಾನ್ ಮಾಸವನ್ನು ಕಟ್ಟುನಿಟ್ಟಾಗಿ ಆಚರಿಸುತ್ತದೆ.

ರಂಜಾನ್‌ಗೂ ಒಂದು ತಿಂಗಳು ಮೊದಲು ಬರುವ ಷಬ್–ಎ–ಬರಾತ್ (ಹಿರಿಯರನ್ನು ಸ್ಮರಿಸುವ ಹಬ್ಬ) ಮುಗಿದ ತಕ್ಷಣದಿಂದಲೇ ರಂಜಾನ್ ಮಾಸಕ್ಕೆ ಸಿದ್ಧತೆ ಆರಂಭವಾಗಿರುತ್ತದೆ. ರಂಜಾನ್ ಮಾಸದ ಪ್ರತಿ ದಿನವೂ ಮನೆಯ ಒಡತಿಯರಾದ ಹಸೀನಾ ಖಾದ್ರಿ, ರಹಮತ್ ಉನ್ನೀಸಾ ಬೆಳಿಗ್ಗೆ 2.30ಕ್ಕೆ ಏಳುತ್ತಾರೆ. ನಿತ್ಯ ಕರ್ಮಗಳನ್ನು ಮುಗಿಸಿ, ಸ್ನಾನ ಮಾಡಿ ಅಡುಗೆ ಸಿದ್ಧತೆ ನಡೆಸುತ್ತಾರೆ. ಅಷ್ಟರಲ್ಲಿ ಮನೆಯ ಯಜಮಾನರು, ನಂತರ ಮಕ್ಕಳು ಎದ್ದು ಉಪವಾಸ ಹಿಡಿಯಲು ಮಾನಸಿಕವಾಗಿ ಸಿದ್ಧರಾಗಿರುತ್ತಾರೆ.

ಗುರುವಾರ ಬೆಳಿಗ್ಗೆ 4ಕ್ಕೆ ‘ಪ್ರಜಾವಾಣಿ’ ಬಳಗ ಅವರ ಮನೆಗೆ ಭೇಟಿ ನೀಡಿದಾಗ ಆಗಲೇ ರೊಟ್ಟಿ, ಚಪಾತಿ, ಮುದ್ದೆ, ಮಟನ್ ಕೂರ್ಮ, ಮಟನ್ ಕರಿ ಸಿದ್ಧವಾಗಿತ್ತು. ಒಂದಷ್ಟು ಪಾಯಸವೂ ಅಲ್ಲಿತ್ತು. ನೆಲದ ಮೇಲೆ ಹಾಸಿದ್ದ ದಸ್ತರ್ ಖಾನಾ ಮೇಲೆ ಎಲ್ಲವನ್ನೂ ಜೋಡಿಸಿ ಇಡಲಾಗಿತ್ತು. ಇಡೀ ಕುಟುಂಬದ ಎಲ್ಲರೂ ಸುತ್ತಲೂ ಕುಳಿತು ನಿಯತ್ (ಸಂಕಲ್ಪ) ಮಾಡಿ 4.45ರ ಒಳಗೆ ಊಟ ಪೂರೈಸಿದರು.

ಉಪವಾಸ ಹಿಡಿದ ತಕ್ಷಣ ಬೆಳಗಿನ ನಮಾಜ್ ಸಲ್ಲಿಸಿದರು. ಪುರುಷರು ಮಸೀದಿಗೆ ತೆರಳಿದರೆ, ಮಹಿಳೆಯರು ಮನೆಯಲ್ಲೇ ನಮಾಜ್ ಮಾಡಿ, ನಂತರ ಒಂದು ತಾಸು ಕುರಾನ್ ಪಠಿಸಿದರು.

‘ಪ್ರತಿ ದಿನ ಒಂದೊಂದು ಅಧ್ಯಾಯದಂತೆ ತಿಂಗಳಿಗೆ 30 ಅಧ್ಯಾಯ ಓದಿ ಮುಗಿಸುತ್ತೇವೆ. 7 ಗಂಟೆಯ ಒಳಗೆ ಎಲ್ಲ ಧಾರ್ಮಿಕ ಆಚರಣೆ ಪೂರೈಸಿ ನಂತರ ನಿತ್ಯದ ಬದುಕಿಗೆ ಮರಳುತ್ತೇವೆ. ಇಡೀ ದಿನ ಅನ್ನ, ನೀರು, ಉಗುಳು ಸಹ ನುಂಗದಂತೆ ವ್ರತ ಆಚರಿಸಲಾಗುವುದು’ ಎಂದು ಹಸೀನಾ ವಿವರ ನೀಡಿದರು.

ನಿತ್ಯದ ಕಾರ್ಯಗಳಿಗೆ ತೆರಳಿದ್ದ ಎಲ್ಲರೂ ಸಂಜೆ 6.30ರ ಒಳಗೆ ಮನೆ ಸೇರಿದರು. ಮನೆಯಲ್ಲೇ ಇದ್ದವರು ಮಧ್ಯಾಹ್ನ ನಮಾಜ್ ಸಲ್ಲಿಸಿದರೆ, ಬೇಗನೆ ಬಂದವರು ಅವರ ಜತೆಗೂಡಿ ಸಂಜೆ 4.45ರಿಂದ 5.30ರವರೆಗೆ ನಮಾಜ್ ಸಲ್ಲಿಸಿದರು. 6.45ಕ್ಕೆ ಸರಿಯಾಗಿ ಉಪವಾಸ ಬಿಡಲು ಸಿದ್ಧತೆ ಮಾಡಲಾಗಿತ್ತು. ಮೊದಲು ಎಲ್ಲರೂ ಖರ್ಜೂರ, ಉಪ್ಪು ಹಾಗೂ ನೀರು ಸೇವಿಸಿ ಉಪವಾಸ ಅಂತ್ಯಗೊಳಿಸಿದರು. ನಂತರ ವಿವಿಧ ಬಗೆಯ ಹಣ್ಣುಗಳು, ತಂಪುಪಾನೀಯ, ಬಿರಿಯಾನಿ, ಸ್ವೀಲ್, ಶರಬತ್ ಸೇವಿಸಿದರು. ಕೆಲವರು ಹಣ್ಣು, ಹಂಪಲು ತಿಂದರು. ರಾತ್ರಿ 9ರಿಂದ 10.30ರವರೆಗೆ ನಮಾಜ್ ಮುಗಿಸಿದ ನಂತರ ಬುಧವಾರದ ಆಚರಣೆಗಳಿಗೆ ತೆರೆ ಎಳೆದರು. ರಂಜಾನ್ ಮಾಸದಲ್ಲಿ ಆ ಮನೆಯ ಮಹಿಳೆಯರ ನಿತ್ಯದ ನಿದ್ರಾ ಸಮಯ ಕೇವಲ ಮೂರೂವರೆ ತಾಸು.

ರಂಜಾನ್ ಮತ್ತು ರೋಜಾ

ರಂಜಾನ್ ಮಾಸ ಪವಿತ್ರ ಕುರಾನ್ ಅನುಗ್ರಹಿಸಿದ, ಅವತರಿಸಿದ ತಿಂಗಳು. ಈ ತಿಂಗಳಲ್ಲಿ ವಿಶೇಷ ಪ್ರಾರ್ಥನೆ, ಸುದೀರ್ಘ ತರಾವೀಹ್ ನಮಾಜ್, ಪಶ್ಚಾತ್ತಾಪ, ಕುರಾನ್ ಪಠಣ ಮತ್ತು ದಾನ ಧರ್ಮಗಳು ಮಾತ್ರ ನಡೆಯುತ್ತವೆ. ಈ ತಿಂಗಳು ಮುಸ್ಲಿಮರಿಗೆ ಚೇತೋಹಾರಿ ಹಾಗೂ ಪುಣ್ಯದಾಯಕ. ರಂಜಾನ್ ತಿಂಗಳಲ್ಲಿ ಆಚರಿಸುವ ಒಂದು ತಿಂಗಳ ಉಪವಾಸ ವ್ರತ (ರೋಜಾ) ದುರಭ್ಯಾಸಗಳ ದಾಸ್ಯದಿಂದ ಮುಕ್ತಿ ಪಡೆಯುವ ಶಕ್ತಿ ನೀಡುತ್ತದೆ.

ರಂಜಾನ್ ತಿಂಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ದುಡಿಮೆಯ ವಾರ್ಷಿಕ ಆದಾಯದಲ್ಲಿ ಸ್ವಲ್ಪ ಆದಾಯವನ್ನು ದಾನದ ಮೂಲಕ ವಿತರಿಸುವುದಕ್ಕೆ ಜಕಾತ್ ಎನ್ನಲಾಗುತ್ತದೆ. ಸಾಮಾನ್ಯವಾಗಿ ಧನಿಕರು ಬಡವರಿಗೆ ನೀಡುತ್ತಾರೆ. ಅವರು ಹಣ, ಆಹಾರ, ಧಾನ್ಯ, ಬಟ್ಟೆ ರೂಪದಲ್ಲಿ ಜಕಾತ್ ನೀಡುತ್ತಾರೆ.

ಈದ್ -ಉಲ್-ಫಿತ್ರ್

29 ಅಥವಾ 30ನೇ ದಿನಕ್ಕೆ ಉಪವಾಸದ ನಂತರ ಶವ್ವಾಲ್ ತಿಂಗಳ ಚಂದ್ರ ದರ್ಶನ ಮಾಡುವ ಮೂಲಕ ರಂಜಾನ್ ತಿಂಗಳಿಗೆ ವಿದಾಯ ಹೇಳುತ್ತಾರೆ. ಚಂದ್ರದರ್ಶನ ಆಗುತ್ತಿದ್ದಂತೆ ಹಿರಿಯರಿಗೆ ನಮಸ್ಕರಿಸಿ, ಈದ್ ಮುಬಾರಕ್ ತಿಳಿಸುತ್ತಾರೆ. ಆ ದಿನ ಆಗತಾನೆ ಜನಿಸಿದ ಮಗು ಸೇರಿ ಮರಣ ಶಯ್ಯೆಯಲ್ಲಿರುವ ಪ್ರತಿಯೊಬ್ಬ ಮುಸ್ಲಿಮರೂ ತನ್ನ ಫಿತ್ರ್‌ವನ್ನು ಬಡವರಿಗೆ ನೀಡುವ ದಿನ. ಹಾಗಾಗಿ, ಈದ್ ಉಲ್ ಫಿತ್ರ್ ಎಂದು ಕರೆಯುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry