7

18ರಿಂದ ಲಾರಿ ಮುಷ್ಕರ

Published:
Updated:

ಬೆಂಗಳೂರು: ಪೆಟ್ರೊಲ್‌ ಮತ್ತು ಡಿಸೇಲ್‌ ದರ ಏರಿಕೆ ಹಾಗೂ ವಾಹನಗಳ ‘ಥರ್ಡ್‌ ಪಾರ್ಟಿ’ ವಿಮೆ ಕಂತಿನ ದರ ಹೆಚ್ಚಳ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರಕು ಸಾಗಣೆ ವಾಹನಗಳ ಮಾಲೀಕರ ಸಂಘ ಜೂನ್‌ 18ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದೆ.

‘ ಥರ್ಡ್‌ ಪಾರ್ಟಿ’ ವಿಮೆ ಕಂತಿನ ದರವನ್ನು 2002ರಿಂದ ನಿರಂತರವಾಗಿ ಏರಿಕೆ ಮಾಡಲಾಗುತ್ತಿದೆ. ಅದನ್ನು ತಡೆಯುವಂತೆ ಮಾಡಿದ ಮನವಿಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಸಂಘದ ಅಧ್ಯಕ್ಷ ಬಿ.ಚನ್ನಾರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಲಾರಿ ಖರೀದಿಸಲು ಬ್ಯಾಂಕುಗಳಲ್ಲಿ ಮಾಡಿರುವ ಸಾಲ ಮರುಪಾವತಿಸಬೇಕು. ನಿತ್ಯವೂ ರಾಜ್ಯ, ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಲ್ಕ ಭರಿಸಬೇಕು. ಹೀಗೆ ಅನೇಕ ಸಮಸ್ಯೆಗಳನ್ನು ಲಾರಿ ಮಾಲೀಕರು ಅನುಭವಿಸುತ್ತಿದ್ದಾರೆ. ಸರ್ಕಾರ ಅವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಮಾಲೀಕರ ವಿರೋಧಿ ನಿರ್ಧಾರಗಳನ್ನು ಕೈಗೊಳುತ್ತಿದೆ’ ಎಂದು ಅವರು ಹೇಳಿದ್ದಾರೆ.

‘2012 ರಲ್ಲಿ ಡಿಸೇಲ್‌ ಬೆಲೆ ಪ್ರತಿ ಲೀಟರ್‍ಗೆ ₹45.73 ಇತ್ತು. ಈಗ ₹66.37 ಆಗಿದೆ. ಅದೇ ರೀತಿ 2012ರಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‍ಗೆ ₹73.5 ಇತ್ತು. ಈಗ ₹75.06 ಆಗಿದೆ. ಹೀಗೆ ತೈಲ ಬೆಲೆಗಳು ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಏರುತ್ತಲೇ ಇದೆ. ಇದರಿಂದಾಗಿ ಟ್ರಕ್ ಮಾಲೀಕರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ‘ ಎಂದು ಒಕ್ಕೂಟದ ಮುಖ್ಯ ಕಾರ್ಯದರ್ಶಿ ಗೋಪಾಲಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಷ್ಕರದಿಂದ ತೊಂದರೆ:

‘ಬೇಡಿಕೆ ಈಡೇರಿಕೆಗಾಗಿ ಮುಷ್ಕರ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಲಾರಿ ಮಾಲೀಕರ ಒಕ್ಕೂಟದವರು ಸರ್ಕಾರದೊಂದಿಗೆ ಮಾತುಕತೆ ನಡೆಸುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು‘ ಎನ್ನುತ್ತಾರೆ ಎಫ್‌ಕೆಸಿಸಿಐನ ಅಧ್ಯಕ್ಷ ಕೆ.ರವಿ.

‘ರೈಲ್ವೆ, ವೈಮಾನಿಕ ಸರಕು ಸಾಗಣೆಯೊಂದಿಗೆ ರಸ್ತೆ ಸಾರಿಗೆ ಮೇಲೂ ಉದ್ಯಮ ಅವಲಂಬಿತವಾಗಿದೆ. ಮುಷ್ಕರದಿಂದಾಗಿ ಸರಕುಗಳ ಸರಿಯಾದ ಸಮಯಕ್ಕೆ ತಲುಪದೇ ಇದ್ದರೆ ಅದರಿಂದ ಉದ್ಯಮಗಳಿಗೆ ಭಾರಿ ಹೊಡೆತ ಬೀಳಲಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಡಗುಗಳ ಮೂಲಕ ಹೊರದೇಶದಿಂದ ಕಚ್ಚಾ ಸರಕುಗಳು ವಾಣಿಜ್ಯ ಬಂದರುಗಳಿಗೆ ಬಂದಾಗ ಅವುಗಳನ್ನು ಸಾಗಾಟ ಮಾಡಬೇಕು. ಇಲ್ಲದೆ ಇದ್ದರೆ, ಸಂಬಂಧಿಸಿದ ಇಲಾಖೆಯವರು ದಂಡ ವಿಧಿಸುವುದು ಒಂದೆಡೆಯಾದರೆ, ಉತ್ಪಾದನೆ ಮೇಲೂ ಅದರಿಂದ ಪರಿಣಾಮಗಳಾಗುತ್ತವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry