7

ಹಣಕ್ಕಾಗಿ ವೃದ್ಧೆಯ ಕೊಲೆ

Published:
Updated:
ಹಣಕ್ಕಾಗಿ ವೃದ್ಧೆಯ ಕೊಲೆ

ಬೆಂಗಳೂರು: ಸಾರಾಯಿ ಕುಡಿಯಲು ಹಣ ಕೊಡದೇ ಇದ್ದಿದ್ದಕ್ಕೆ ದೊಡ್ಡಮ್ಮನನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಆಕೆಯ ಮೈಮೇಲಿದ್ದ ಆಭರಣ ಹಾಗೂ ₹15 ಸಾವಿರ ಕದ್ದೊಯ್ದಿದ್ದ ವ್ಯಕ್ತಿಯೊಬ್ಬನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

ಬಾಗಲೂರಿನ ನಿವಾಸಿ ಮುನಿಯಮ್ಮ (78) ಕೊಲೆಯಾಗಿದ್ದಾರೆ. ಈ ಕೃತ್ಯ ಎಸಗಿದ ಆರೋಪದ ಮೇಲೆ ಮುನಿಯಮ್ಮನ ಕಿರಿಯ ತಂಗಿಯ ಮಗ ಗಣೇಶನನ್ನು ಪ್ರಕರಣ ನಡೆದ ಮೂರೇ ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಗುರುವಾರ ರಾತ್ರಿ 11ರ ಸುಮಾರಿಗೆ ಈ ಪ್ರಕರಣ ನಡೆದಿದೆ. ವೃತ್ತಿಯಲ್ಲಿ ಚಾಲಕನಾಗಿದ್ದ ಗಣೇಶ್‌ ಮದ್ಯವ್ಯಸನೀಯಾಗಿದ್ದ. ಕುಡಿಯಲು ಹಣ ಕೊಡುವಂತೆ ದೊಡ್ಡಮ್ಮನ ಬಳಿ ಕೇಳಿದ್ದು, ಹಣ ಕೊಡಲು ನಿರಾಕರಿಸಿದ್ದಕ್ಕೆ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುನಿಯಮ್ಮ ಅವರ ಮಕ್ಕಳು ಬೇರೆಬೇರೆ ಮನೆ ಮಾಡಿಕೊಂಡು ಬಾಗಲೂರಿನಲ್ಲಿ ನೆಲೆಸಿದ್ದಾರೆ. ಒಂಟಿಯಾಗಿದ್ದ ಅವರು ರಾತ್ರಿ ಮಲಗಲು ಸಮೀಪದಲ್ಲಿರುವ ತಂಗಿಯ ಮನೆಗೆ ಹೋಗುತ್ತಿದ್ದರು.

ಗುರುವಾರ ರಾತ್ರಿ 11 ಗಂಟೆಯಾದರೂ ಮಲಗಲು ಮುನಿಯಮ್ಮ ಬರದೇ ಇದ್ದಾಗ ಸಂಶಯಗೊಂಡ ತಂಗಿ ಮುನಿಯಮ್ಮ ಮನೆಗೆ ಹೋಗಿ ಬಾಗಿಲು ಬಡಿದಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರದೇ ಇದ್ದಾಗ ಕಿಟಕಿಯಲ್ಲಿ ಇಣುಕಿದ್ದಾರೆ. ಆಗ ಒಳಗಡೆ ಗಣೇಶ್‌ ಇರುವುದನ್ನು ನೋಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಗಣೇಶ್‌ನನ್ನು ಕರೆದು ಬಾಗಿಲು ತೆರೆಯುವಂತೆ ಅವರು ಹೇಳಿದ್ದಾರೆ. ಬಾಗಿಲು ತೆರೆದ ಮರು ಕ್ಷಣವೇ ಗಣೇಶ್‌ ಅಲ್ಲಿಂದ ಓಡಿಹೋಗಿದ್ದಾನೆ. ಸಂಶಯಗೊಂಡು ಒಳಗೆ ಹೋಗಿ ನೋಡಿದಾಗ ಮುನಿಯಮ್ಮ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರ ಕೊರಳಲ್ಲಿದ್ದ ಚಿನ್ನದ ಸರ, ಬಳೆ ಮತ್ತು ನಗದು ಕಳವಾಗಿತ್ತು. ತಕ್ಷಣವೇ ಮುನಿಯಮ್ಮ ತಂಗಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

‘ಬ್ಯಾಂಕ್‌ಗೆ ಹೋಗಿದ್ದ ಮುನಿಯಮ್ಮ ₹15 ಸಾವಿರ ಡ್ರಾ ಮಾಡಿಕೊಂಡು ಬಂದಿದ್ದರು. ಈ ವಿಚಾರ ತಿಳಿದಿದ್ದ ಗಣೇಶ್‌ ಕುಡಿಯಲು ಹಣ ಕೊಡುವಂತೆ ದೊಡ್ಡಮ್ಮನ ಹಿಂದೆ ಬಿದ್ದಿದ್ದ’ ಎಂದು ಮುನಿಯಮ್ಮ ಅವರ ತಂಗಿ ಪೊಲೀಸರಿಗೆ ತಿಳಿಸಿದ್ದಾರೆ.

‘ದೊಡ್ಡಮ್ಮನ ಬಳಿ ಹಣ ಕೇಳಿದೆ. ಆದಕ್ಕೆ ಅವರು ನಿರಾಕರಿಸಿದ್ದರಿಂದ ಕೊಲೆ ಮಾಡಿದ್ದೇನೆ’ ಎಂದು ಆರೋಪಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry