ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

177 ಮಕ್ಕಳಿಗೆ ಕೇವಲ ಒಬ್ಬರೇ ಶಿಕ್ಷಕಿ!

ಪತ್ನಿ ಬದಲು ಪಾಠ ಮಾಡಲು ಬಂದ ಪತಿ; ಗ್ರಾಮಸ್ಥರ ಆಕ್ಷೇಪ
Last Updated 16 ಜೂನ್ 2018, 8:38 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ರಾಯಕೋಡ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 74 ಬಾಲಕಿಯರು ಸೇರಿದಂತೆ 177 ಮಕ್ಕಳಿದ್ದರೂ ಒಬ್ಬರೇ ಶಿಕ್ಷಕಿ ಇದ್ದಾರೆ.

ಇಲ್ಲಿ 10 ಹುದ್ದೆಗಳು ಮಂಜೂರಾಗಿದ್ದರೂ ಕಾರ್ಯನಿರ್ವಹಿಸುತ್ತಿರುವುದು ಕೇವಲ ಒಬ್ಬರು ಮಾತ್ರ. ಅವರು ಮುಖ್ಯಶಿಕ್ಷಕಿ ಜವಾಬ್ದಾರಿಯನ್ನೂ ಹೊಂದಿದ್ದಾರೆ.

‘ಶಿಕ್ಷಕರ ಕೊರತೆಯಿಂದ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೇವಲ ಮಧ್ಯಾಹ್ನ ಬಿಸಿ ಊಟ ಸೇವನೆಗೆ ಶಾಲೆ ತೆರೆದಂತಾಗಿದೆ. ಕಳೆದ ವರ್ಷ ಶಾಲೆಯಲ್ಲಿ 4 ಜನ ಅತಿಥಿ ಶಿಕ್ಷಕರಿದ್ದರು. ಪ್ರಸಕ್ತ ವರ್ಷ ಇನ್ನೂ ಅತಿಥಿ ಶಿಕ್ಷಕರ ನೇಮಕವಾಗಿಲ್ಲ’ ಎಂದು ಪಾಲಕರು ದೂರುತ್ತಿದ್ದಾರೆ.

‘ಶಾಲೆಯ ಮುಖ್ಯಶಿಕ್ಷಕಿಯಾಗಿರುವ ನನ್ನ ಪತ್ನಿ ಗಾಯತ್ರಿ ಅನಾರೋಗ್ಯ ನಿಮಿತ್ತ ಶಾಲೆಗೆ ಬಂದಿಲ್ಲ. ಶಾಲೆ ಮುಚ್ಚುವುದು ಬೇಡ ಎಂದು ನಾನೇ ತರಗತಿಗೆ ಬಂದಿದ್ದೇನೆ. ಶಾಲೆಯಲ್ಲಿ ಕಳೆದ ವರ್ಷ ನಾನು ಅತಿಥಿ ಶಿಕ್ಷಕನಾಗಿ ಕೆಲಸ ಮಾಡಿದ್ದೇನೆ. ಪ್ರಸಕ್ತ ವರ್ಷ ಬರುವುದಿಲ್ಲ ಎಂದು ತಿಳಿಸಿದ್ದೇನೆ. ಶಾಲೆಗೆ ಶಾಶ್ವತವಾಗಿ ಶಿಕ್ಷಕರನ್ನು ನೀಡಿದರೆ ಅನುಕೂಲವಾಗುತ್ತದೆ’ ಎಂದು ಶಿವಾನಂದ ಬೀಳ್ವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಶಾಲೆಯಲ್ಲಿ ಕೇವಲ ಒಬ್ಬರೇ ಶಿಕ್ಷಕಿ ಇರುವುದರಿಂದ ತೊಂದರೆ ಆಗುತ್ತಿದೆ. ಎಲ್ಲಾ ತರಗತಿಗಳನ್ನು ಒಬ್ಬರೇ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಶಾಲೆಗೆ ಎಲ್ಲ ವಿಷಯದ ಶಿಕ್ಷಕರನ್ನು ನೇಮಿಸಿ’ ಎಂದು 6ನೇ ತರಗತಿ ವಿದ್ಯಾರ್ಥಿನಿ ರಕ್ಷಿತಾ ತಿಳಿಸಿದರು.

‘ನಮ್ಮ ಊರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವ್ಯವಸ್ಥೆಯ ಆಗರವಾಗಿದೆ. ಶಾಲೆಯ ಮುಖ್ಯಶಿಕ್ಷಕಿ ಸ್ಪಂದಿಸುವುದಿಲ್ಲ. ಪತ್ನಿಯ ಬದಲಿಗೆ ಪತಿ ಶಾಲೆಗೆ ಬಂದಿದ್ದಾರೆ. ಈ ವಿಷಯವನ್ನು ಬಿಇಒ ಮತ್ತು ಸಿಆರ್‌ಪಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮೋಹನಬಾಬು ಕಲಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

‘ಶಾಲೆಯಲ್ಲಿ ಶಿಕ್ಷಕರ ಕೊರತೆ ನನ್ನ ಗಮನಕ್ಕೆ ಬಂದಿದೆ. ಇಲ್ಲಿಗೆ ಬೇರೆ ಕಡೆಯಿಂದ ಮೂವರು ಶಿಕ್ಷಕರನ್ನು ನಿಯೋಜಿಸುವಂತೆ ಅಧಿಕಾರಿಗಳಿಗೆ  ಸೂಚಿಸಿದ್ದೇನೆ’ ಎಂದು ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT