ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ವಿವಿಧ ಮಾದರಿ

ಮಾಜಾಳಿಯ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪ್ರದರ್ಶನ
Last Updated 16 ಜೂನ್ 2018, 9:25 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಮಾಜಾಳಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಸಿದ್ಧಪಡಿಸಿರುವ ಹಲವು ಮಾದರಿಗಳು ಆಸಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು.

ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿರುವ ರೋಗಿಗಳ ಶುಶ್ರೂಷೆ ವಿಧಾನ, ರೈತರಿಗೆ ಅನುಕೂಲವಾಗುವಂತೆ ಕುಳಿತಲ್ಲೇ ನೀರಿನ ವ್ಯವಸ್ಥೆ ನಿಭಾಯಿಸುವುದು, ಮಣ್ಣೇ ಇಲ್ಲದೆ ನೀರಿನ ಮೂಲಕ ಪೌಷ್ಟಿಕಾಂಶ ಒದಗಿಸಿ ಬೆಳೆ ಬೆಳೆಯುವ ಪದ್ಧತಿಯ ಮಾದರಿಗಳು ಕುತೂಹಲಕಾರಿಯಾಗಿದ್ದವು.

ದ್ವಿಗುಣ ವಿದ್ಯುತ್ ಉತ್ಪಾದಿಸುವ ಯಂತ್ರ:  ಗುರುತ್ವಾಕರ್ಷಣ ಬಲದಿಂದ ದ್ವಿಗುಣ ವಿದ್ಯುತ್ ಉತ್ಪಾದಿಸಬಲ್ಲ ಜನರೇಟರ್ ಅನ್ನು ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದಾರೆ. ವಿದ್ಯಾರ್ಥಿಗಳಾದ ಈರಣ್ಣ, ರಂಗನಾಥ, ಪರಸಪ್ಪ, ಕುಮಾರಸ್ವಾಮಿ ಯಂತ್ರವನ್ನು ತಯಾರಿಸಿದ್ದಾರೆ.

ಹೇಗೆ ಕೆಲಸ ಮಾಡುತ್ತದೆ?:  ಜನರೇಟರ್ ಪ್ರಾರಂಭಕ್ಕೆ ಬ್ಯಾಟರಿ ಮೂಲಕ ಸ್ವಲ್ಪ ವಿದ್ಯುತ್ ಪೂರೈಸಬೇಕು. ನಂತರ ಗುರುತ್ವಾಕರ್ಷಣ ಬಲದಿಂದ ಜನರೇಟರ್‌ನ ಚಕ್ರ ತನ್ನಿಂದ ತಾನೇ ಸುತ್ತಿ ವಿದ್ಯುತ್ ಉತ್ಪಾದನೆಯಾಗುತ್ತದೆ.

ಒಂದು ಸುತ್ತು ವಿದ್ಯುತ್ ಬಲದಿಂದ ಚಕ್ರ ತಿರುಗಿದರೆ ಅದಕ್ಕೆ ಅಳವಡಿಸಿದ ಇನ್ನೊಂದು ಚಕ್ರ ಗುರುತ್ವಾಕರ್ಷಣ ಬಲದಿಂದ ಮೂರು ಸುತ್ತು ತಿರುಗುತ್ತದೆ. ಇದರಿಂದ 12 ವ್ಯಾಟ್ ವಿದ್ಯುತ್ನಿಂದ 24 ವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಮನೆಯ ಯಾವುದೇ ಪ್ರದೇಶದಲ್ಲಿ ಇಡಬಹುದಾದ ಸರಳ ಜನರೇಟರ್ ಇದಾಗಿದೆ. ಪದೇ ಪದೆ ವಿದ್ಯುತ್ ಕೈ ಕೊಡುವ ಈ ಮಳೆಗಾಲದ ಸಮಯದಲ್ಲಿ ಇದು ಹೆಚ್ಚು ಅನುಕೂಲ
ವಾಗಲಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥ ಶ್ರೀವ್ಯಾಸ್, ಮೆಕ್ಯಾನಿಕಲ್ ವಿಭಾಗದ ಉಪನ್ಯಾಸಕ ಮಿತೇಶಕುಮಾರ್ ಮಾರ್ಗದರ್ಶನ ನೀಡಿದ್ದರು.

‘ಟೋಟಲ್ ಸ್ಟೇಷನ್ ಸರ್ವೆ’ ಯಶಸ್ವಿ

‘ಟೋಟಲ್ ಸ್ಟೇಷನ್‌ ಸರ್ವೆ’ ಸಾಧನವನ್ನು ಬಳಸಿಕೊಂಡು ಭೌಗೋಳಿಕ ಮಾಹಿತಿ ವ್ಯವಸ್ಥೆಯ (ಜಿಐಎಸ್‌) ಮೂಲಕ ಡಿಜಿಟಲ್ ಮ್ಯಾಪಿಂಗ್ ಮಾಡುವ ವಿಧಾನವನ್ನು ಕಾಲೇಜಿನ ಸಿವಿಲ್ ಎಂಜಿನಿಯರಿಂಗ್‌ನ ವಿದ್ಯಾರ್ಥಿಗಳು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದಾರೆ.

ವಿದ್ಯಾರ್ಥಿಗಳಾದ ಝರ್ಗಾಂ ಅಲ್ ತಮೀಮ್ ಪಟೇಲ್, ಶ್ವೇತಾ ಡಿ.ಸಾಗರ್, ಸ್ಮಿತಾ ಡಿ.ಸಾಗರ್ ಹಾಗೂ ರವಿ ಹರಿಕಂತ್ರ ಈ ಪ್ರಾಜೆಕ್ಟ್‌ ಸಿದ್ಧಪಡಿಸಿದ್ದಾರೆ. ಇದರ ಮೂಲಕ ಕಾಲೇಜಿನ ಸ್ಥಳದ ಸರ್ವೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಸಿವಿಲ್ ಎಂಜಿನಿಯರಿಂಗ್ ಕೋರ್ಸ್ ಹಾಗೂ ಯೋಜನಾ ತಂಡದ ಸದಸ್ಯ ವಿವೇಕ ಸಿಂಗ್ ಇದನ್ನು ಪರಿಶೀಲನೆ ಮಾಡಿದ್ದಾರೆ.

‘ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಿಎಸ್‌ಆರ್‌ ಅನುದಾನದಲ್ಲಿ ಈ ಸಾಧನವನ್ನು ಕಾಲೇಜಿಗೆ ದೇಣಿಗೆಯಾಗಿ ನೀಡಲಾಗಿತ್ತು. ಸಚಿವ ಆರ್.ವಿ.ದೇಶಪಾಂಡೆ ಅವರ ಸಹಕಾರದಲ್ಲಿ ಈ ಸಾಧನ ಇಲ್ಲಿಗೆ ತರಲಾಗಿತ್ತು. ಅದನ್ನು ವಿದ್ಯಾರ್ಥಿಗಳು ಬಳಸಿಕೊಂಡು ಸರ್ವೆ ಮಾಡಿದ್ದಾರೆ. ರಾಜ್ಯದ ಯಾವುದೇ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಈವರೆಗೆ ಇದನ್ನು ಮಾಡಿಲ್ಲ’ ಎಂದು ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಶಾಂತಲಾ ತಿಳಿಸಿದರು.

ಏನಿದರ ಉಪಯೋಗ?: ‘ಬಹಳ ವಿಸ್ತೀರ್ಣವುಳ್ಳ ಪ್ರದೇಶವನ್ನು ಸ್ಕೇಲ್, ಅಳತೆ ಟೇಪ್ ಹಾಗೂ ಇನ್ನಿತರ ಸಾಧನಗಳನ್ನು ಬಳಸಿ ಸರ್ವೆ ಮಾಡಲು ಸಮಯ ಹಿಡಿಯುತ್ತದೆ. ಆದರೆ, ಈ ಸಾಧನದ ಮೂಲಕ ಬಹುಬೇಗ ಅಳತೆ ಮಾಡಬಹುದು. ಸಾಧನದಲ್ಲಿ ಸಿದ್ಧವಾಗುವ ನಕ್ಷೆಯನ್ನು ನಾವು ಪಡೆದುಕೊಳ್ಳಬಹುದು’ ಎಂದು ಝರ್ಗಾಂ ಅಲ್ ತಮೀಮ್ ಪಟೇಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT