ಕನ್ನಡ ಬಳಕೆ ಸಂಪೂರ್ಣವಾಗಲಿ; ಸೂಚನೆ

7
ಆಡಳಿತ ತರಬೇತಿ ಸಂಸ್ಥೆಯಲ್ಲಿ ಸಭೆ ನಡೆಸಿದ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ

ಕನ್ನಡ ಬಳಕೆ ಸಂಪೂರ್ಣವಾಗಲಿ; ಸೂಚನೆ

Published:
Updated:

ಮೈಸೂರು: ಆಡಳಿತ ತರಬೇತಿ ಸಂಸ್ಥೆ (ಎಟಿಐ)ಯಲ್ಲಿ ಸಂಪೂರ್ಣವಾಗಿ ಕನ್ನಡದಲ್ಲೇ ತರಬೇತಿ ನೀಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಸೂಚನೆ ನೀಡಿದರು.

ಸಂಸ್ಥೆಗೆ ಶುಕ್ರವಾರ ಭೇಟಿ ನೀಡಿದ ಅವರು, ಸಂಸ್ಥೆಯಲ್ಲಿ ಎಲ್ಲ ಶ್ರೇಣಿಯ ನೌಕರರು ತರಬೇತಿ ಪಡೆಯುತ್ತಾರೆ. ಈ ಹಂತದಲ್ಲೇ ಅವರಿಗೆ ಕನ್ನಡದಲ್ಲಿ ತರಬೇತಿ ನೀಡಬೇಕು. ಸಂ‍ಪೂರ್ಣ ಇಂಗ್ಲಿಷ್‌ಮಯವಾಗಿರುವುದನ್ನು ಬದಲಿಸಿ ಕನ್ನಡದಲ್ಲಿ ಪಾಠ ಪ್ರವಚನ, ಪಠ್ಯ ಸಾಮಗ್ರಿ ರೂಪಿಸಬೇಕು ಎಂದು ಕಟ್ಟುನಿಟ್ಟಾಗಿ ತಿಳಿಸಿದರು.

ಅಲ್ಲದೇ, ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಕನ್ನಡ ಇಲ್ಲದೆ ಇರುವ ಬಗ್ಗೆ ಪ್ರೊ.ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಟಿಐ ಮಹಾನಿರ್ದೇಶಕ ಡಾ.ಸಂದೀಪ್‌ ದವೆ, ‘ಕನ್ನಡದಲ್ಲಿ ವೆಬ್‌ಸೈಟ್‌ ರಚಿಸಲು ಕ್ರಮ ತೆಗೆದುಕೊಂಡಿದ್ದೇವೆ. 20 ದಿನಗಳಲ್ಲಿ ಕನ್ನಡದಲ್ಲಿ ಮಾಹಿತಿ ಲಭ್ಯವಿರುತ್ತದೆ. ಸಿಬ್ಬಂದಿ ಕೊರತೆ ಹಾಗೂ ತಾಂತ್ರಿಕ ಅಡಚಣೆಗಳಿಂದ ಕನ್ನಡದಲ್ಲಿ ಮಾಹಿತಿ ನೀಡಲು ಸಾಧ್ಯವಾಗಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು.

ರಾಜ್ಯದೊಳಗಿನ ಪತ್ರವ್ಯವಹಾರ ಕನ್ನಡದಲ್ಲೇ ಆಗಬೇಕು ಎಂದು 2002ರಲ್ಲೇ ಆದೇಶವಾಗಿದೆ. ಆದರೆ, ಇದನ್ನು ಪಾಲಿಸುತ್ತಿಲ್ಲ. ಜತೆಗೆ, ತರಬೇತಿ ಸಂದರ್ಭದಲ್ಲಿ ನೀಡುವ ಪೂರಕ ಮಾಹಿತಿ ಪುಸ್ತಕಗಳೆಲ್ಲವೂ ಇಂಗ್ಲಿಷಿನಲ್ಲಿವೆ. ಸಂಪನ್ಮೂಲ ವ್ಯಕ್ತಿಗಳು ಕನ್ನಡದಲ್ಲಿ ಪಾಠ ಮಾಡುವುದಿಲ್ಲ ಎಂಬ ದೂರನ್ನು ಸಂಸ್ಥೆಯ ಶಿಬಿರಾರ್ಥಿಗಳೇ ನೀಡಿದ್ದಾರೆ. ಈ ಕುರಿತು ಕ್ರಮ ತೆಗೆದುಕೊಳ್ಳಬೇಕು ಪ್ರೊ.ಸಿದ್ದರಾಮಯ್ಯ ತಿಳಿಸಿದರು.

ಇದಕ್ಕೆ ಉತ್ತರಿಸಿದ ಸಂಸ್ಥೆ ಉಪ ನಿರ್ದೇಶಕಿ ಎಚ್.ಎಸ್.ಯಶಸ್ವಿನಿ, ‘ನಮ್ಮಲ್ಲಿ ಕಾಯಂ ಸಿಬ್ಬಂದಿಯಿಲ್ಲ. ಹಾಗಾಗಿ ಸಂಪನ್ಮೂಲ ವ್ಯಕ್ತಿಗಳೇ ಬೋಧನೆ ಮಾಡುತ್ತಿದ್ದಾರೆ. ಇನ್ನು ಮುಂದೆ ಸಂಪನ್ಮೂಲ ವ್ಯಕ್ತಿಗಳು ಕನ್ನಡದಲ್ಲೇ ಕಾರ್ಯನಿರ್ವಹಿಸುವಂತೆ ಸೂಚಿಸುತ್ತೇವೆ’ ಎಂದು ತಿಳಿಸಿದರು.

ಸಂಸ್ಥೆ ಜಂಟಿ ನಿರ್ದೇಶಕಿ ವಿ.ಭಾಗ್ಯಲಕ್ಷ್ಮಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಜೆ.ಹರೀಶ್, ಬೋಧಕ ಬಿ.ಆರ್.ಮುರಳೀಧರರಾವ್ ಮಾಹಿತಿ ನೀಡಿದರು.

ನಂತರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ತಂಡವು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿ ಕನ್ನಡ ಅನುಷ್ಠಾನ ಪರಿಶೀಲನೆ ನಡೆಸಿತು.

ತಂಡದಲ್ಲಿ ಕನ್ನಡ ಗಣಕ ಪರಿಷತ್ತಿನ ಜಿ.ಎನ್.ನರಸಿಂಹಮೂರ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳೀಧರ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ, ಪ್ರಾಧಿಕಾರದ ಸದಸ್ಯ ಪ್ರಭಾಕರ ಪಟೇಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ, ಕನ್ನಡ ಜಾಗೃತಿ ಸಮಿತಿ ಸದಸ್ಯ ಅಬು ಅಹಮದ್, ಎಂ.ಬಿ.ವಿಶ್ವನಾಥ್, ಕಲಾವಿದ ರಾಜಶೇಖರ ಕದಂಬ, ಶಾರದಾ ಸಂಪತ್, ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್ ಇದ್ದರು.

ಪ್ರತಿ ತಿಂಗಳೂ ಸಭೆ ನಡೆಯಲಿ

ಆಡಳಿತ ತರಬೇತಿ ಸಂಸ್ಥೆಯಲ್ಲಿ (ಎಟಿಐ) ಕನ್ನಡ ಅನುಷ್ಠಾನ ಸಮಿತಿಯನ್ನು ರಚಿಸಿ, ಸಂಪೂರ್ಣವಾಗಿ ಕನ್ನಡ ಜಾರಿಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರೊ.ಸಿದ್ದರಾಮಯ್ಯ ಸೂಚಿಸಿದರು. ಕನ್ನಡ ಜಾರಿ ಪರಿಶೀಲನೆಗಾಗಿ ಅನುಷ್ಠಾನ ಸಮಿತಿ ಪ್ರತಿ ತಿಂಗಳೂ ಸಭೆ ನಡೆಸಿ ಪ್ರಾಧಿಕಾರಕ್ಕೆ ವರದಿ ನೀಡಬೇಕು ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry