ಐದೂ ಬೆರಳಿಗೆ ಕುಂಚ ಕಟ್ಟಿ ಕಲೆ ಅರಳಿಸಿದರು

7

ಐದೂ ಬೆರಳಿಗೆ ಕುಂಚ ಕಟ್ಟಿ ಕಲೆ ಅರಳಿಸಿದರು

Published:
Updated:
ಐದೂ ಬೆರಳಿಗೆ ಕುಂಚ ಕಟ್ಟಿ ಕಲೆ ಅರಳಿಸಿದರು

ಒಂದು ಕುಂಚ ಬಳಸಿ ಚಿತ್ರ ಬಿಡಿಸುವುದು ಸಾಮಾನ್ಯ. ಆದರೆ, ಚಿತ್ರಕಲಾ ಶಿಕ್ಷಕ ಸುಭಾಷ ಕುರಕುಂದಿ ಅವರು ಐದೂ ಬೆರಳುಗಳಿಗೆ ಕುಂಚ ಕಟ್ಟಿಕೊಂಡು ಚಿತ್ರ ಬಿಡಿಸುವ ಕಲೆಗಾರಿಕೆ ಸಿದ್ಧಿಸಿಕೊಂಡು, ಪ್ರಯೋಗಭರಿತ ಬಣ್ಣದ ಚಿತ್ರಗಳನ್ನು ಬಿಡಿಸಿ ಕಲಾರಸಿಕರ ಹುಬ್ಬೇರಿಸಿದ್ದಾರೆ.

ಬ್ಯಾಡಗಿ ತಾಲ್ಲೂಕಿನ ಮಾಸಣಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ 50ರ ಹರೆಯದ ಕುರಕುಂದಿ ಅವರು, ಆರ್ಟ್ ಮಾಸ್ಟರ್‌ನಲ್ಲಿ ಪದವಿ ಪಡೆದಿದ್ದಾರೆ.

ರಜಾ ದಿನ, ಶನಿವಾರ ಹಾಗೂ ಭಾನುವಾರ ತಮ್ಮ ಮನೆಯಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಚಿತ್ರಕಲೆ ತರಬೇತಿ ನೀಡುತ್ತಿದ್ದಾರೆ. ತಮ್ಮಲ್ಲಿರುವ ಕಲೆಯನ್ನು ಸಾವಿರಾರು ವಿದ್ಯಾರ್ಥಿಗಳಿಗೆ ಧಾರೆ ಎರೆಯುವ ಮೂಲಕ ಶಿಷ್ಯ ಪರಂಪರೆಯನ್ನು ಕಟ್ಟುವಲ್ಲಿ ನಿರತರಾಗಿ

ದ್ದಾರೆ. ಬೆಂಗಳೂರಿನ ಲಲಿತ ಕಲಾ ಅಕಾಡೆಮಿಯು ವರ್ಷಕ್ಕೊಮ್ಮೆ ಏರ್ಪಡಿಸುವ ‘ಚಿತ್ರಸಂತೆ’ಯಲ್ಲಿ ಸುಭಾಷ ಬಿಡಿಸಿದ ಬಣ್ಣದ ಚಿತ್ರಗಳು ಪ್ರದರ್ಶನಗೊಂಡಿವೆ. ಕ್ಯಾನವಸ್ ಪೇಪರ್‌ನಲ್ಲಿ ಚಿತ್ರಿಸುವ 2x2.5 ಅಡಿ ಸೈಜಿನ ಚಿತ್ರಗಳು ಕನಿಷ್ಠ ₹32 ಸಾವಿರದಿಂದ ಗರಿಷ್ಠ ₹54 ಸಾವಿರದವರೆಗೆ ಬಿಕರಿಯಾಗಿರುವುದು ಹೆಮ್ಮೆಯ ಸಂಗತಿ.

ಮಾರಾಟದಿಂದ ಬಂದ ಆದಾಯದ ಒಂದು ಭಾಗವನ್ನು ಬಡ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಇವರ ಅದ್ಭುತ ಕಲೆಯನ್ನು ಮೆಚ್ಚಿ ಅನೇಕ ಸಂಘ ಸಂಸ್ಥೆಗಳು ಆಧುನಿಕ ರವಿವರ್ಮ, ಶಹಬ್ಬಾಸ್‌ ಇಂಡಿಯಾ, ನಂದಿ ವಾಹಿನಿ, ವಿದ್ಯಾರತ್ನ ಹಾಗೂ ವಾಲ್ಮೀಕಿ ಚೇತನ ಎಂಬ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. 300ಕ್ಕೂ ಹೆಚ್ಚು ಸನ್ಮಾನಗಳನ್ನು ಸ್ವೀಕರಿಸಿರುವ ಇವರು ಮಂಡ್ಯ, ಮೈಸೂರು, ಬೆಂಗಳೂರು, ಧಾರವಾಡ, ಹಾವೇರಿ ಹಾಗೂ ಇತರ ಕಡೆಗಳಲ್ಲಿ ಐದು ಬೆರಳಿನಿಂದ ಪೇಂಟಿಂಗ್ ಬಿಡಿಸುವ ಪ್ರಾತ್ಯಕ್ಷಿಕೆ ಪ್ರದರ್ಶಿಸಿದ್ದಾರೆ.

5 ರಿಂದ 6ನಿಮಿಷದ ಹಾಡು ಮುಗಿಯುವುದರೊಳಗೆ ಏಕಾಗ್ರತೆಯಿಂದ ಐದು ಬೆರಳುಗಳ ಮೂಲಕ ಚಿತ್ರ ಮುಗಿಸುವ ಕಲೆಗಾರಿಕೆ ಇವರ

ಲ್ಲಿದೆ. ಪ್ರಕೃತಿಯಲ್ಲಿ ಸಲೀಸಾಗಿ ಸಿಗುವ ಹುಣಸೆ ಎಲೆಗಳನ್ನು ಬಳಸಿ, ಸ್ವಾಭಾವಿಕ ಬಣ್ಣಗಳನ್ನು ತಯಾರಿಸಿ ಅದಕ್ಕೆ ಬಳಸಲಾಗುತ್ತದೆ. ಮುಖವಾಡ ತಯಾರಿಕೆಯ ಕಲೆಯನ್ನೂ ಇವರು ರೂಢಿಸಿಕೊಂಡಿದ್ದಾರೆ.

ಸುಭಾಷ ಅವರ ಶಿಷ್ಯರಲ್ಲಿ ಒಬ್ಬರಾದ ಗುಬ್ಬಿ ತಾಲ್ಲೂಕಿನ ಪರಮೇಶ ಎಂಬುವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಭಾವಚಿತ್ರವನ್ನು ಒಂದು ಹಾಡು ಪೂರ್ಣಗೊಳ್ಳುವ ಮೊದಲೇ ಬಿಡಿಸಿ ₹2 ಲಕ್ಷ ಬಹುಮಾನ ಪಡೆದಿದ್ದಾರೆ. ಅನೇಕ ಶಿಷ್ಯಂದಿರು ಆರ್ಕಿಟೆಕ್ಚರ್‌ನಲ್ಲಿ ಪರಿಣತಿ ಪಡೆದಿದ್ದಾರೆ. ಮಾಸಣಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಆರ್ಟ್ ಗ್ಯಾಲರಿ’ ನಿರ್ಮಿಸಿ 30ಕ್ಕೂ ಹೆಚ್ಚು ಚಿತ್ರಗಳನ್ನು ಪ್ರದರ್ಶಿಸುವ ಉದ್ದೇಶವಿದೆ ಎಂದು ಸುಭಾಷ ಕುರಕುಂದಿ ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.

ಪ್ರಮೀಳಾ ಹುನಗುಂದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry