ಕೊನೆಗೂ ಅಂತ್ಯಗೊಂಡ ಮಂಗನ ಕಾಟ

7
ಅಂತ್ಯಸಂಸ್ಕಾರ ನೆರವೇರಿಸಿದ ಗ್ರಾಮಸ್ಥರು

ಕೊನೆಗೂ ಅಂತ್ಯಗೊಂಡ ಮಂಗನ ಕಾಟ

Published:
Updated:

ರೋಣ: ಇಲ್ಲಿಗೆ ಸಮೀಪದ ಬೆಣ್ಣೆಹಳ್ಳದ ದಡದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆ ಹಿಡಿದಿದ್ದು, ನಿರಂತರ ಮೂರು ದಿನಗಳಿಂದ ತಾಲ್ಲೂಕಿನ ಯಾವಗಲ್‌ ಗ್ರಾಮದಲ್ಲಿ ಹುಚ್ಚು ಮಂಗನಿಂದ ಆತಂಕಕ್ಕೆ ಒಳಗಾಗಿದ್ದ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

ಅರಣ್ಯ ಇಲಾಖೆ ರಂಗಣ್ಣವರ ನೇತೃತ್ವದಲ್ಲಿ ಶನಿವಾರ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಮಂಗನನ್ನು ಸೆರೆ ಹಿಡಿದರು. ಗುರುವಾರ ಮತ್ತು ಶುಕ್ರವಾರ ತಲಾ ನಾಲ್ಕು ಹಾಗೂ ಶನಿವಾರ ಬೆಳಿಗ್ಗೆ ಇಬ್ಬರಿಗೆ ಸೇರಿ ಒಟ್ಟು 10 ಜನರಿಗೆ ಮಂಗ ಕಚ್ಚಿತ್ತು. ಮಂಗನಿಂದ ಕಚ್ಚಿಸಿಕೊಂಡ ಯಲ್ಲಪ್ಪ ದೇಸಾಯಿ ಅವರನ್ನು ನರಗುಂದ ಆಸ್ಪತ್ರೆಗೆ ಸೇರಿಸಲಾಗಿತ್ತು.

ಶಾಲೆಗೆ ರಜೆ: ಸರ್ಕಾರಿ ಹೆಣ್ಣುಮಕ್ಕಳ ಶಾಲೆಯಲ್ಲಿ ಶುಕ್ರವಾರ ಮಂಗ ಏಕಾಏಕಿ ನುಗ್ಗಿತ್ತು. ಅದರಿಂದ ತಪ್ಪಿಸಿಕೊಳ್ಳಲು ಓಡಿದ ಅಂಗನವಾಡಿ ಸಹಾಯಕಿಯೊಬ್ಬರು ಬಿದ್ದು ಕೈ ಮುರಿದುಕೊಂಡಿದ್ದ ಹಿನ್ನೆಲೆಯಲ್ಲಿ ಶನಿವಾರ ಶಾಲೆಗೆ ರಜೆ ಘೋಷಿಸಲಾಗಿತ್ತು.

ಪೇಪರ್ ಹಂಚುವ ಹುಡುಗರೂ ಮಂಗನ ಭಯದಿಂದ ಹೊರ ಬರದ ಕಾರಣ ಶನಿವಾರ ಮಧ್ಯಾಹ್ನ 12 ಗಂಟೆಯ ಮೇಲೆ ಪತ್ರಿಕೆಗಳು ಮನೆ ಮನೆಗೆ ತಲುಪಿವೆ. ಬಹಿರ್ದೆಸೆಗೆ ತೆರಳಲು ಕೂಡ ಗ್ರಾಮಸ್ಥರು ಪರದಾಡಿದರು. ಮಂಗನ ಕಾಟದಿಂದ ತಪ್ಪಿಸಿಕೊಳ್ಳಲು ಅದನ್ನು ಬಡಿಗೆಯಿಂದ ಸಾಗಿಸಲು ಮುಂದಾಗಿದ್ದರು. ಇದೇ ವೇಳೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಮಂಗವನ್ನು ಹಿಡಿಯಲು ಯತ್ನಿಸಿತು. ಇದರಿಂದ ಭಯಗೊಂಡ ಮಂಗ ದಿಕ್ಕೆಟ್ಟು ಓಡಿ ಬೆಣ್ಣೆ ಹಳ್ಳದ ದಡದ ಗಿಡದ ಮೇಲೆ ಏರಲು ಹೋಗಿ ಕೆಳಗೆ ಬಿದ್ದು ಮೃತಪಟ್ಟಿತು.

ಅಸು ನೀಗಿದ ಮಂಗವನ್ನು ಅಲ್ಲಿಂದ ತಂದು ಬಜಾರದ ಹನುಮಂತನ ಗುಡಿ ಕಟ್ಟೆಯ ಮೇಲೆ ಕೂಡ್ರಿಸಿ ಪೂಜೆ ಸಲ್ಲಿಸಿ ಗ್ರಾಮಸ್ಥರು ಅಂತ್ಯ ಸಂಸ್ಕಾರ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry