ಕಪ್ಪತಗುಡ್ಡದತ್ತ ಕುರಿಗಳ ಪ್ರಯಾಣ..!

7
ಧಾರಾಕಾರ ಮಳೆಯಿಂದಾಗಿ ಗುಡ್ಡದಲ್ಲಿ ಹುಲುಸಾಗಿ ಬೆಳೆದಿರುವ ಹಸಿರು ಹುಲ್ಲು

ಕಪ್ಪತಗುಡ್ಡದತ್ತ ಕುರಿಗಳ ಪ್ರಯಾಣ..!

Published:
Updated:
ಕಪ್ಪತಗುಡ್ಡದತ್ತ ಕುರಿಗಳ ಪ್ರಯಾಣ..!

ಲಕ್ಷ್ಮೇಶ್ವರ: ಪ್ರತಿವರ್ಷ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ತಾಲ್ಲೂಕಿನಾದ್ಯಂತ ಅಲ್ಲಲ್ಲಿ ಬೀಡು ಬಿಟ್ಟ ಕುರಿಗಾರರು ಕುರಿಗಳನ್ನು ಹೊಡೆದುಕೊಂಡು ಕಪ್ಪತಗುಡ್ಡದತ್ತ ಪ್ರಯಾಣ ಬೆಳೆಸುತ್ತಾರೆ. ಜೂನ್‌ ತಿಂಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುವ ದೃಶ್ಯ.

ಬೇಸಿಗೆಯಲ್ಲಿ ಮಹಾರಾಷ್ಟ್ರದ ಗಡಹಿಂಗ್ಲಜ್, ಸೊಲ್ಲಾಪುರ, ನಿಪ್ಪಾಣಿ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಗೋಕಾಕ ಸೇರಿದಂತೆ ಹಲವು ಊರುಗಳಿಂದ ಕುರಿಗಾರರು ಕುರಿ ಹಿಂಡುಗಳೊಂದಿಗೆ ಗದಗ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಅವುಗಳನ್ನು ಮೇಯಿಸಿಕೊಂಡು ಬರುವುದು ವಾಡಿಕೆ. ಬೇಸಿಗೆಯಲ್ಲಿ ಈ ಭಾಗದ ಹೊಲಗಳಲ್ಲಿ ಯಾವುದೇ ಬೆಳೆ ಇರುವುದಿಲ್ಲ.

ಹೀಗಾಗಿ ಕುರಿಗಾರರು ತಮ್ಮ ಕುರಿಗಳನ್ನು ರೈತರ ಹೊಲಗಳಲ್ಲಿ ತರಬುತ್ತಾರೆ. ಆದರೆ, ಮುಂಗಾರು ಮಳೆ ಆರಂಭ ಆಗುತ್ತಿದ್ದಂತೆ ಈ ಭಾಗದಲ್ಲಿ ಕೃಷಿ ಚಟುವಟಿಕೆಗಳು ಜೋರಾಗುತ್ತವೆ. ಆಗ ಕುರಿಗಳ ಪ್ರಯಾಣ ಕಪ್ಪತಗುಡ್ಡದತ್ತ ಸಾಗುತ್ತದೆ.

ಜೂನ್‌ ಮೊದಲ ವಾರದಲ್ಲೇ ಕಪ್ಪತಗುಡ್ಡದಲ್ಲಿ ಹಸಿರು ಮೂಡಿರುತ್ತದೆ. ಬೇಸಿಗೆಯಲ್ಲಿ ಒಣಗಿ ನಿಲ್ಲುವ ಬಾಧೆ ಹುಲ್ಲು ಮುಂಗಾರಿನಲ್ಲಿ ಮತ್ತೆ ಚಿಗುರಿರುತ್ತದೆ. ಕುರಿಗಳಿಗೆ ಇದು ಸಮೃದ್ಧ ಆಹಾರ. ಹೀಗಾಗಿ ಮಳೆಗಾಲದಲ್ಲಿ ಎಲ್ಲಿ ನೋಡಿದರೂ, ಕಪ್ಪತಗುಡ್ಡ ಶ್ರೇಣಿಯಲ್ಲಿ ಕುರಿಗಳ ಹಿಂಡು ಸಂಚರಿಸುವುದನ್ನು ಕಾಣಬಹುದು.

ಕಪ್ಪತ್ತಗುಡ್ಡ ಉತ್ತರ ಕರ್ನಾಟಕ ಭಾಗದ ಪಶ್ಚಿಮ ಘಟ್ಟ ಎಂದೇ ಹೆಸರುವಾಸಿ. ಇಲ್ಲಿ ವಿವಿಧ ಬಗೆಯ ಹುಲ್ಲು ಸಹಜವಾಗಿ ಬೆಳೆಯುತ್ತದೆ. ಇಲ್ಲಿ ಬೆಳೆಯುವ ಹಸಿರು ಹುಲ್ಲು ಕುರಿಗಳಿಗೆ ಪೌಷ್ಟಿಕ ಆಹಾರ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖನಿಜಾಂಶ ಇರುತ್ತದೆ. ಈ ಹುಲ್ಲನ್ನು ತಿನ್ನುವ ಕುರಿಗಳು ಆರೋಗ್ಯವಾಗಿ ಇರುತ್ತವೆ. ಯಾವುದೇ ಕಾಯಿಲೆಗಳು ಬರುವುದಿಲ್ಲ ಎನ್ನುತ್ತಾರೆ ಕುರಿಗಾರರು. ಗುಡ್ಡದ ತಪ್ಪಲಿನಲ್ಲಿ ಅಲ್ಲಲ್ಲಿ ಅನೇಕ ಹೊಂಡಗಳು, ಸಣ್ಣ ಕೆರೆಗಳು, ನೀರಿನ ತೊರೆಗಳು ಇದ್ದು ಅವು ಕುರಿಗಳಿಗೆ ಮತ್ತು ಕುರಿಗಾರರ ನೀರಿನ ದಾಹ ನೀಗಿಸುತ್ತವೆ.

ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ಜಿಂಕೆ, ಕೃಷ್ಣಮೃಗ, ಕಾಡುಕುರಿ, ಮೊಲ ಸೇರಿದಂತೆ ಹಲವು ಕಾಡುಪ್ರಾಣಿಗಳಿದ್ದು, ಅವುಗಳಿಗೂ ಈ ಹುಲ್ಲು ವರದಾನವಾಗಿದೆ.

ಜೀವ ವೈವಿಧ್ಯಕ್ಕೆ ಧಕ್ಕೆ: ಮಳೆಗಾಲದಲ್ಲಿ ಲಕ್ಷಾಂತರ ಕುರಿಗಳು ಇಲ್ಲಿಗೆ ಬರುತ್ತವೆ. ಇದರೊಂದಿಗೆ ಸ್ಥಳೀಯ ದನ– ಕರುಗಳೂ ಮೇಯಲು ಗುಡ್ಡಕ್ಕೆ ಲಗ್ಗೆ ಇಡುತ್ತವೆ. ಕಾರಣ ಈ ಸಮಯದಲ್ಲಿ ಗುಡ್ಡದಲ್ಲಿ ಜನರ ಗಲಾಟೆ ಹೆಚ್ಚಾಗುತ್ತದೆ. ಕುರಿಗಳೇ ಗುಡ್ಡದ ಹುಲ್ಲನ್ನು ತಿನ್ನುವುದರಿಂದ ಇಲ್ಲಿನ ಕಾಡು ಪ್ರಾಣಿಗಳಿಗೆ ಆಹಾರ ಇಲ್ಲದಂತಾಗುತ್ತದೆ. ಜತೆಗೆ ಹಲವು ಅಮೂಲ್ಯ ಔಷಧೀಯ ಸಸ್ಯಗಳನ್ನೂ ತಿಂದು ಹಾಕುತ್ತವೆ. ಜನ ಸಂಚಾರ ಹೆಚ್ಚಿದಾಗ, ಪ್ರಾಣಿಗಳು ನಾಡಿಗೆ ಬರುತ್ತವೆ.‘ಈ ಸಂಘರ್ಷ ತಪ್ಪಿಸಲು ಇತ್ತೀಚೆಗೆ ಕಪ್ಪತಗುಡ್ಡಕ್ಕೆ ಕುರಿಗಳನ್ನು ಮೇಯಿಸಲು ತರುವುದನ್ನು ನಿಷೇಧಿಸಿದ್ದೇವೆ’ ಎಂದು ತಾಲ್ಲೂಕು ವಲಯ ಅರಣ್ಯಾಧಿಕಾರಿ ವೀರೇಶ ಹೇಳಿದರು.

‘ನಾವು ಬಾಳ ವರ್ಷದಿಂದ ಕುರೀನ ಕಪ್ಪತ್ತಗುಡ್ಡಕ್ಕೆ ಹೊಡಕೊಂಡು ಬರ್ತೇವ್ರೀ. ಆದರ ಈಗ, ಅಧಿಕಾರಿಗಳು ನಮ್ಗ ಒಳಗ ಬಿಡವಲ್ರು. ಹಿಂಗಾಗಿ ತ್ರಾಸ್ ಆಗೇತಿ’ ಎಂದು ನಿಪ್ಪಾಣಿಯಿಂದ ಇಲ್ಲಿಗೆ ಕುರಿಗಳನ್ನು ಹೊಡೆದುಕೊಂಡು ಬಂದಿದ್ದ ಮಾರುತೆಪ್ಪ ಕುರುಬರ ನೋವು ತೋಡಿಕೊಂಡರು.

ನಾಗರಾಜ ಎಸ್. ಹಣಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry