ಹೆಚ್ಚುವರಿ ಶಿಕ್ಷಕರು ಬೇರೆ ಶಾಲೆಗೆ

7
ಶಿಕ್ಷಕರ ಕೊರತೆ ನೀಗಿಸಲು ಶಿಕ್ಷಣ ಇಲಾಖೆಯ ಹೊಸ ಕ್ರಮ; ಗುಣಮಟ್ಟ ಕುಸಿತದ ಆತಂಕ

ಹೆಚ್ಚುವರಿ ಶಿಕ್ಷಕರು ಬೇರೆ ಶಾಲೆಗೆ

Published:
Updated:

ಮುಂಡಗೋಡ: ತಾಲ್ಲೂಕಿನಲ್ಲಿ 111 ಪ್ರಾಥಮಿಕ ಶಾಲಾ ಶಿಕ್ಷಕರ ಕೊರತೆಯಿದ್ದು, ಕೆಲವು ಶಾಲೆಗಳಲ್ಲಿರುವ ಹೆಚ್ಚುವರಿ ಶಿಕ್ಷಕರನ್ನು ಅಗತ್ಯವಿರುವ ಕಡೆ ನಿಯೋಜನೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಒಟ್ಟು 13 ಶಾಲೆಗಳಿಂದ ತಲಾ ಒಬ್ಬರಂತೆ ಶಿಕ್ಷಕರನ್ನು ಹೆಚ್ಚು ಅಗತ್ಯವಿರುವ ಶಾಲೆಗಳಿಗೆ ನಿಯೋಜನೆ ಮಾಡಲಾಗುತ್ತಿದೆ.

ಶಿಕ್ಷಕರಿಲ್ಲದೇ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂಬ ಆರೋಪ ಶಾಸಕರ ಅಧ್ಯಕ್ಷತೆಯ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.

ಪಾಳಾ, ಹಳ್ಳದಮನೆ, ಕೂರ್ಲಿ, ಬೆಕ್ಕೋಡ, ಹರಗನಹಳ್ಳಿ, ಮರಗಡಿ ದಡ್ಡಿ, ನಂದಿಪುರ, ಹಿರೇಹಳ್ಳಿ, ಸನವಳ್ಳಿ, ಪಟ್ಟಣದ ಬಸವನಗರ, ಕೆಜಿಎಸ್‌, ಪ್ರಾಥಮಿಕ ಶಾಲೆ ನಂ.2, ಪ್ರಾಥಮಿಕ ಶಾಲೆ ನಂ.3 ಸೇರಿದಂತೆ, ಇನ್ನಿತರ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚುವರಿ ಶಿಕ್ಷಕರನ್ನು ಅಗತ್ಯವಿರುವೆಡೆ  ನಿಯೋಜನೆ ಮಾಡಲು ಇಲ್ಲಿಯ ಶಿಕ್ಷಣ ಇಲಾಖೆ ಪಟ್ಟಿ ತಯಾರಿಸಿದೆ. ಅಲ್ಲದೆ, ಶಾಲಾಭಿವೃದ್ದಿ ಸಮಿತಿಯ ಮನವೊಲಿಸಲು ಮುಂದಾಗಿದೆ.

‘ತಾಲ್ಲೂಕಿನ ಯಾವ ಶಾಲೆಯಲ್ಲಿಯೂ ಹೆಚ್ಚುವರಿ ಶಿಕ್ಷಕರಿಲ್ಲ. ಆದರೆ, ಒಬ್ಬರು ಅಥವಾ ಇಬ್ಬರು ಶಿಕ್ಷಕರನ್ನು ತಾತ್ಕಾಲಿಕವಾಗಿ ಬೇರೆ ಶಾಲೆಗೆ ನಿಯೋಜಿಸಿದರೆ, ಅಂತಹ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ತೊಂದರೆಯಾಗುವುದಿಲ್ಲ ಎಂದು ಕಂಡುಬಂದ ಕಡೆ ಶಿಕ್ಷಕರನ್ನು ಬೇರೆಡೆ ನಿಯೋಜನೆ ಮಾಡಲಾಗುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಂ. ಬಸವರಾಜಪ್ಪ ಹೇಳಿದರು.

‘ತಾಲ್ಲೂಕಿನಲ್ಲಿ ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರ ನೇಮಕವಾಗಬೇಕು. ಆದರೆ ಸದ್ಯಕ್ಕೆ ನೇಮಕಾತಿ ಕುರಿತು ಯಾವುದೇ ಆದೇಶ ಬಾರದಿರುವುದರಿಂದ ಇದ್ದ ಶಿಕ್ಷಕರನ್ನೇ ಬಳಸಿಕೊಂಡು ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಕಡಿಮೆ ಮಕ್ಕಳ ಶಾಲೆಗಳು:

25 ಮಕ್ಕಳಿಗಿಂತ ಹಾಗೂ 50 ಮಕ್ಕಳಿಗಿಂತ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಗಳನ್ನು ಗುರುತಿಸಿ, ವರದಿ ನೀಡಲು ಸರ್ಕಾರ ಸೂಚಿಸಿದೆ. ಅದರಂತೆ ತಾಲ್ಲೂಕಿನ 78 ಕಿರಿಯ ಪ್ರಾಥಮಿಕ ಶಾಲೆಗಳ ಪೈಕಿ 29 ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 25ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ.

59 ಹಿರಿಯ ಪ್ರಾಥಮಿಕ ಶಾಲೆಗಳ ಪೈಕಿ 6 ಶಾಲೆಗಳಲ್ಲಿ 50ಕ್ಕಿಂತ ಕಡಿಮೆ ಸಂಖ್ಯೆಯ ಮಕ್ಕಳಿದ್ದಾರೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಶಿಕ್ಷಕರ ಕೊರತೆ ನೀಗಿಸಲು ಇಂತಹ ಶಾಲೆಗಳನ್ನು ಸನಿಹದ ಶಾಲೆಗಳೊಂದಿಗೆ ವಿಲೀನ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

‘ಕಳೆದ ಸಾಲಿನ ಶೈಕ್ಷಣಿಕ ಫಲಿತಾಂಶ ಕುಸಿಯಲು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಕಾರಣ ಎಂಬ ಬಿಇಒ ಅವರ ಹೇಳಿಕೆಯನ್ನು ಹಲವು ಪಾಲಕರು ವಿರೋಧಿಸಿದ್ದಾರೆ. ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಹೇಳಿಕೆ ನೀಡಿರುವುದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವಾಗಿದೆ. ಶಿಕ್ಷಣದ ಸಮಸ್ಯೆಗೆ ನಿಖರವಾದ ಪರಿಹಾರವನ್ನು ಕಂಡುಹಿಡಿಯುವ ಬದಲು ಸಮಂಜಸವಲ್ಲದ ಹೇಳಿಕೆ ನೀಡುವುದು ತರವಲ್ಲ’ ಎಂದು ಪಾಲಕ ಪರುಶುರಾಮ ರಾಣಿಗೇರ ಹೇಳಿದರು.

ಶಾಲಾಭಿವೃದ್ದಿ ಸಮಿತಿಯವರ ಸಹಕಾರದಿಂದ ತಾಲ್ಲೂಕಿನಲ್ಲಿ ತಲೆದೋರಿರುವ  ಶಿಕ್ಷಕರ ಕೊರತೆಯನ್ನು ತಾತ್ಕಾಲಿಕವಾಗಿ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ

ಬಿ.ಎಂ.ಬಸವರಾಜಪ್ಪ, ಬಿಇಒ

– ಶಾಂತೇಶ ಬೆನಕನಕೊಪ್ಪ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry