ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ವೈಎಫ್‍ಐ ಕಾರ್ಯಕರ್ತರ ಪ್ರತಿಭಟನೆ

ಗೌರಿ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಲು ಒತ್ತಾಯ
Last Updated 19 ಜೂನ್ 2018, 10:07 IST
ಅಕ್ಷರ ಗಾತ್ರ

ಸಿಂಧನೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಭಾಗಿಯಾಗಿರುವ ಶ್ರೀರಾಮಸೇನೆ ಹಾಗೂ ಇತರೆ ಬಲಪಂಥಿಯ ಸಂಘಟನೆಗಳನ್ನು ನಿಷೇಧಿಸಿ, ಅಪರಾಧಿಗಳಿಗೆ ತಕ್ಷಣ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಆರ್‌ವೈಎಫ್‍ಐ ಕಾರ್ಯಕರ್ತರು ಸೋಮವಾರ ಮಿನಿವಿಧಾನಸೌಧ ಮುಂದೆ ಪ್ರತಿಭಟನೆ ನಡೆಸಿದರು.

’ದೇಶದಾದ್ಯಂತ ಆತಂಕಕ್ಕೆ ಕಾರಣವಾಗಿದ್ದ ಗೌರಿ ಲಂಕೇಶ್ ಅವರ ಹತ್ಯೆಯ ಹುನ್ನಾರ ಎಸ್‍ಐಟಿ ತನಿಖೆಯಲ್ಲಿ ಬಯಲಾಗಿದ್ದು, ಶ್ರೀರಾಮಸೇನೆಯ ಕಾರ್ಯಕರ್ತ ಪರಶುರಾಮ ವಾಗ್ಮೋರೆ ಮತ್ತು ಅವರ ತಂಡ ವ್ಯವಸ್ಥಿತವಾಗಿ ಸಂಚು ರೂಪಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದೆ. ಅಲ್ಲದೇ ವಿಚಾರವಾದಿ ಗಳಾದ ಪ್ರೊ.ಕೆ.ಎಸ್.ಭಗವಾನ್, ನಿಡುಮಾಮಿಡಿ ಚನ್ನಮಲ್ಲ ಸ್ವಾಮೀಜಿ, ಡಾ.ಸಿ.ಎಸ್.ದ್ವಾರಕಾನಾಥ, ಗಿರೀಶ್ ಕಾರ್ನಾಡ್ ಸೇರಿದಂತೆ 16 ಜನರ ಹತ್ಯೆಗೆ ಆರೋಪಿಗಳು ಸಂಚು ರೂಪಿಸಿದ್ದರು ಎಂಬುದು ಬಹಿರಂಗ ಗೊಂಡಿದೆ. ಕೊಲೆ ಆರೋಪಿಗೆ ಶ್ರೀರಾಮಸೇನೆಯ ಕಾರ್ಯಕರ್ತರು ಬೆಂಬಲ ನೀಡುವುದನ್ನು ಗಮನಿಸಿದರೆ ಕೃತ್ಯದಲ್ಲಿ ಶ್ರೀರಾಮಸೇನೆಯ ಕೈವಾಡ ವಿದೆ ಎಂಬುದು ಸ್ಪಷ್ಟವಾಗುತ್ತದೆ’ ಎಂದು ಆರ್‌ವೈಎಫ್‍ಐ ಜಿಲ್ಲಾ ಘಟಕದ ಕಾರ್ಯದರ್ಶಿ ನಾಗರಾಜ ಪೂಜಾರ್ ಆಪಾದಿಸಿದರು.

ಹಿಂದೂ ಧರ್ಮದ ಹೆಸರಿನಲ್ಲಿ ಶೋಷಿತ ಸಮುದಾಯವನ್ನು ಮತ್ತಷ್ಟು ಶೋಷಣೆಗೆ ತಳ್ಳಿ ಸಮಾಜವನ್ನು ಕೊಳ್ಳೆ ಹೊಡೆಯುವ ಶಕ್ತಿಗಳನ್ನು ಕಟುವಾಗಿ ಟೀಕಿಸುತ್ತಿದ್ದ ಕಾರಣಕ್ಕೆ ಮತಾಂಧ ಶಕ್ತಿಗಳು ವ್ಯವಸ್ಥಿತ ಹುನ್ನಾರ ನಡೆಸಿ ಗೌರಿಯನ್ನು ಹತ್ಯೆ ಮಾಡಿಸಿವೆ. ವಿಚಾರವಾದಿಗಳಾದ ಗೋವಿಂದ ಪಾನ್ಸಾರೆ, ನರೇಂದ್ರ ದಾಬೋಲ್ಕರ್ ಹಾಗೂ ಎಂ.ಎಂ.ಕಲಬುರ್ಗಿ ಹತ್ಯೆಯ ಹಿಂದೆ ಗೌರಿಯನ್ನು ಹತ್ಯೆ ನಡೆಸಿದ ತಂಡದ ಕೈವಾಡವಿದ್ದು, ಪಾರದರ್ಶಕ ತನಿಖೆಯ ಮೂಲಕ ಹಿಂದಿನ ಶಕ್ತಿಗಳನ್ನು ಬಯಲುಗೊಳಿಸಿ ಕಠಿಣ ಕಾನೂನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಪೂಜಾರ್ ಆಗ್ರಹಿಸಿದರು.

ತಹಶೀಲ್ದಾರ್ ಉಮಾಕಾಂತಗೆ ಮನವಿ ಪತ್ರ ಸಲ್ಲಿಸಲಾಯಿತು. ತಾಲ್ಲೂಕು ಘಟಕದ ಗೌರವಾಧ್ಯಕ್ಷ ಆರ್.ಎಚ್.ಕಲಮಂಗಿ, ಕಾರ್ಯದರ್ಶಿ ಕಿರಣಕುಮಾರ್, ಖಜಾಂಚಿ ಮಲ್ಲಿಕಾರ್ಜುನ, ಸಹಕಾರ್ಯದರ್ಶಿ ಹುಸೇನಪ್ಪ, ಸದಸ್ಯರಾದ ಅಮೀನಸಾಬ ನದಾಫ್, ಶ್ರೀನಿವಾಸ ಕಲಮಂಗಿ, ಬಸವರಾಜ ಬೆಳಗುರ್ಕಿ, ಶ್ರೀನಿವಾಸ ಬುಕ್ಕನಟ್ಟಿ, ಅಂಬಣ್ಣ, ಹನುಮೇಶ, ಮಂಜು, ಶರಣಪ್ಪ ಗೊರೇಬಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT