ಕೃಷಿ ಕಾಲೇಜು ಖಾಸಗೀಕರಣಕ್ಕೆ ವಿರೋಧ

7
ರಸ್ತೆ ತಡೆದು ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ, ಮಾನವ ಸರಪಳಿ ನಿರ್ಮಿಸಿ ಸರ್ಕಾರದ ಧೋರಣೆಗೆ ಆಕ್ರೋಶ

ಕೃಷಿ ಕಾಲೇಜು ಖಾಸಗೀಕರಣಕ್ಕೆ ವಿರೋಧ

Published:
Updated:
ಕೃಷಿ ಕಾಲೇಜು ಖಾಸಗೀಕರಣಕ್ಕೆ ವಿರೋಧ

ಚಿಂತಾಮಣಿ: ಖಾಸಗಿ ಕೃಷಿ ಕಾಲೇಜುಗಳಿಗೆ ಮಾನ್ಯತೆ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸರ್ಕಾರದ ಧೋರಣೆ ವಿರೋಧಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು. ತಾಲ್ಲೂಕು ಕಚೇರಿ ಮುಂದಿನ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಾಂಕೇತಿಕವಾಗಿ ಸ್ವಲ್ಪ ಕಾಲ ರಸ್ತೆ ತಡೆ ನಡೆಸಿದರು. ನಂತರ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದರು.

ಎಬಿವಿಪಿ ವಲಯ ಸಂಚಾಲಕ ಮಂಜುನಾಥರೆಡ್ಡಿ ಮಾತನಾಡಿ, ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳು ಸಂಬಂಧಿಸಿದ ಕೋರ್ಸ್‌ಗಳನ್ನು ಆರಂಭಿಸಲು ನೀತಿ ನಿಯಮಗಳ ಪಾಲನೆ ಮಾಡಬೇಕಾಗುತ್ತದೆ. ಆದರೆ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಕಾಲೇಜುಗಳು ಯಾವುದೇ ನಿಯಮ ಪಾಲನೆ ಮಾಡದೆ ರಾಜಕಾರಣಿಗಳ ಬೆಂಬಲದಿಂದ ನಿರ್ವಹಣೆ ಮಾಡುತ್ತಿವೆ. ಶಿಕ್ಷಣವನ್ನು ಮಾರಾಟದ ವಸ್ತುವನ್ನಾಗಿ ಮಾಡಲಾಗುತ್ತಿದೆ ಎಂದು ಆಪಾದಿಸಿದರು.

ರಾಜ್ಯ ಸರ್ಕಾರವು ಖಾಸಗಿ ಕೃಷಿ ಕಾಲೇಜು ಆರಂಭಿಸಲು ಅನುಮತಿ ಮತ್ತು ಮಾನ್ಯತೆ ನೀಡಲು ಕೃಷಿ ವಿಶ್ವವಿದ್ಯಾಲಯಗಳಿಗೆ ಆದೇಶ ನೀಡಿದೆ. ಅನುಮತಿ ಪಡೆದಿರುವ ದೊಡ್ಡಬಳ್ಳಾಪುರದ ರೈ ಶಿಕ್ಷಣ ಸಂಸ್ಥೆ ಸರ್ಕಾರ ನಿಗಿಪಡಿಸಿರುವ ಯಾವುದೇ ಮಾನದಂಡ ಅಳವಡಿಸಿಕೊಳ್ಳದಿರುವುದು ಆತಂಕದ ಸಂಗತಿ ಎಂದು ಟೀಕಿಸಿದರು.

ಖಾಸಗಿ ಕೃಷಿ ಕಾಲೇಜುಗಳು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಅರ್ಹತಾ ಪರೀಕ್ಷೆಗಿಂತ ಡೊನೇಷನ್‌ ಅನ್ನು ಮಾತ್ರ ಮಾನದಂಡವನ್ನಾಗಿ ಮಾಡಿಕೊಂಡಿವೆ. ಶಾಲಾ ಕಾಲೇಜುಗಳಲ್ಲಿ ಡೊನೇಷನ್‌ ತಡೆಯಲು ವಿಫಲವಾಗಿರುವ ಸರ್ಕಾರ, ಖಾಸಗಿ ಕೃಷಿ ಕಾಲೇಜುಗಳಿಗೆ ಅನುಮತಿ ನೀಡುತ್ತಿರುವುದು ಸರಿಯಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ತಹಶೀಲ್ದಾರ್‌ ವಿಶ್ವನಾಥ್‌ ಅವರಿಗೆ ಮನವಿ ಸಲ್ಲಿಸಿದರು. ವಿದ್ಯಾರ್ಥಿ ಮುಖಂಡರಾದ ಸುರೇಶ್‌, ರಾಗಿಣಿ, ಭವ್ಯಾ, ಸುಪ್ರೀತಾ, ದೇವಿಕಾ, ಝಾನ್ಸಿ, ಪ್ರಿಯಾ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !