ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಸಿ. ಸುಧಾಕರ್ ಅವರಿಗೆ ವೈದ್ಯಕೀಯ ಖಾತೆ?

ಮೊದಲ ಬಾರಿಗೆ ಸಚಿವರಾದ ಚಿಂತಾಮಣಿ ಶಾಸಕ ಸುಧಾಕರ್
Published 28 ಮೇ 2023, 7:13 IST
Last Updated 28 ಮೇ 2023, 7:13 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮೊದಲ ಬಾರಿಗೆ ಸಚಿವರಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆಯ ಜವಾಬ್ದಾರಿ ನೀಡಲಾಗಿದೆ. ಈ ಹಿಂದೆ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಸಹ ಈ ಖಾತೆಯನ್ನು ನಿರ್ವಹಿಸಿದ್ದರು.

ಶುಕ್ರವಾರ ರಾತ್ರಿ ಸಚಿವ ಸಂಪುಟ ವಿಸ್ತರಣೆಯ ಮಾಹಿತಿ ಹೊರ ಬೀಳುತ್ತಿದ್ದಂತೆ ಚಿಂತಾಮಣಿ ಕ್ಷೇತ್ರ ಹಾಗೂ ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ಹರ್ಷ ವ್ಯಕ್ತವಾಗಿತ್ತು. ನವದೆಹಲಿಯಿಂದ ಬಂದ ಸುಧಾಕರ್ ಅವರನ್ನು ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಸ್ವಾಗತಿಸಿದರು.

ಕೋಲಾರದಿಂದ ಬೇರ್ಪಟ್ಟು ಚಿಕ್ಕಬಳ್ಳಾಪುರ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ಸಚಿವರಾಗುತ್ತಿರುವ ಮೂರನೇ ಶಾಸಕರು ಡಾ.ಎಂ.ಸಿ.ಸುಧಾಕರ್. ವೈದ್ಯ ಪದವಿ ಪಡೆದುಕೊಂಡಿರುವ ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆಯೇ ದೊರೆತಿದೆ.

ದೊರೆಯುವುದೇ ಜಿಲ್ಲಾ ಉಸ್ತುವಾರಿ: ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಡಾ.ಎಂ.ಸಿ.ಸುಧಾಕರ್ ಅವರಿಗೆ ಜವಾಬ್ದಾರಿ ವಹಿಸುವ ಸಾಧ್ಯತೆಗಳು ಇವೆ. ಪಕ್ಷ ಸಂಘಟನೆ, ಜೆಡಿಎಸ್ ಮತ್ತು ಬಿಜೆಪಿಯನ್ನು ಎದುರಿಸಲು ಸುಧಾಕರ್ ಸಮರ್ಥವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ಕೊಡುವ ಅವಕಾಶಗಳು ಹೆಚ್ಚಿವೆ. 

ಡಾ.ಎಂ.ಸಿ.ಸುಧಾಕರ್ ನಿಷ್ಠುರವಾದಿ ಮತ್ತು ಸ್ವಾಭಿಮಾನಿ ಎಂದೇ ಜಿಲ್ಲೆಯಲ್ಲಿ ಜನಜನಿತ. ಬೇರೆ ರಾಜ್ಯ ಅಥವಾ ವಿದೇಶಗಳಿಗೆ ಪ್ರವಾಸ ತೆರಳಿದ ಸಂದರ್ಭದಲ್ಲಿ ಅವರು ಅಭಿವೃದ್ಧಿಯ ವಿಚಾರವಾಗಿ ಅಲ್ಲಿ ಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸುವ ದೂರದೃಷ್ಟಿಯುಳ್ಳ ನಾಯಕ. 

ಹಣ ಹಂಚದೆಯೇ ಚುನಾವಣೆ ನಡೆಸುವೆ. ಸ್ವಾಭಿಮಾನಕ್ಕೆ ಧಕ್ಕೆಯಾದ ಕಾರಣ ಕಾಂಗ್ರೆಸ್ ಟಿಕೆಟ್ ಬೇಡ ಎಂದವರು ಸುಧಾಕರ್. ಈ ಕಾರಣದಿಂದ 2013 ಮತ್ತು 2018ರ ಚುನಾವಣೆಯಲ್ಲಿ ಅವರು ಸೋಲು ಅನುಭವಿಸಬೇಕಾಯಿತು. ಈ ಬಾರಿ ಕಾಂಗ್ರೆಸ್‌ ಸೇರಿದ್ದರಿಂದ ಅವರಿಗೆ ಪಕ್ಷದ ಬಲ ಸಹ ದೊರೆಯಿತು. ಚಿಂತಾಮಣಿ ರಾಜಕಾರಣದಲ್ಲಿ ಅವರ ಕುಟುಂಬದ ಪ್ರಭಾವ ದಟ್ಟವಾಗಿದೆ. 

ತಂದೆಯ ನಂತರ ಮಗನಿಗೆ ಸಚಿವ ಸ್ಥಾನ: ಸುಧಾಕರ್ ಅವರ ತಾತ ಎಂ.ಸಿ.ಆಂಜನೇಯರೆಡ್ಡಿ, ಅವರ ತಂದೆ ಚೌಡರೆಡ್ಡಿ ಚಿಂತಾಮಣಿ ಕ್ಷೇತ್ರದ ಶಾಸಕರಾಗಿದ್ದರು.  1989ರಲ್ಲಿ ಚೌಡರೆಡ್ಡಿ ಅವರು ವೀರಪ್ಪ ಮೊಯಿಲಿ ಅವರ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದರು. ನಂತರ ನಗರಾಭಿವೃದ್ಧಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.

ಖಾತೆ ಸಮರ್ಥವಾಗಿ ನಿರ್ವಹಿಸುವೆ’ ‘ನನಗೆ ಸಚಿವ ಸ್ಥಾನ ದೊರೆತಿರುವುದು ಬಹಳ ಸಂತೋಷವಾಗುತ್ತಿದೆ. 10 ವರ್ಷ ನನಗೆ ರಾಜಕೀಯ ಹಿನ್ನಡೆ ಆಗಿತ್ತು. ಚಿಂತಾಮಣಿ ಕ್ಷೇತ್ರದ ಜನರು ನನ್ನ ಮೇಲೆ ಹೆಚ್ಚು ವಿಶ್ವಾಸವಿಟ್ಟು ದೊಡ್ಡ ಅಂತರದಿಂದ ಗೆಲ್ಲಿಸಿದರು’ ಎಂದು ನೂತನ ಸಚಿವ ಡಾ.ಎಂ.ಸಿ.ಸುಧಾಕರ್ ‘ಪ್ರಜಾವಾಣಿ’ಗೆ ತಿಳಿಸಿದರು.  ಸಚಿವರಾಗಿ ಆಯ್ಕೆಯಾದ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ‘ಪಕ್ಷ ನನ್ನ ಗುರುತಿಸಿ ಅವಕಾಶ ಮಾಡಿಕೊಟ್ಟಿದೆ. ಕೊಟ್ಟ ಖಾತೆಯನ್ನು ಸಮರ್ಥವಾಗಿ ನಿರ್ವಹಿಸುವೆ. ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿಯೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಕಾರ್ಯಗಳನ್ನು ಮಾಡಲಾಗುವುದು ಎಂದು ಹೇಳಿದರು. ‘ನನಗೆ ಅಭಿವೃದ್ಧಿ ವಿಚಾರವಾಗಿ ದೂರದೃಷ್ಟಿ ಮತ್ತು ಮುನ್ನೋಟಗಳು ಇವೆ. ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲು ಹಾಗೂ ಯೋಜನೆಗಳನ್ನು ಜಾರಿಗೊಳಿಸಲು ದೂರದೃಷ್ಟಿ ಇರಬೇಕು. ಆ ರೀತಿಯಲ್ಲಿ ಕೆಲಸ ಮಾಡುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT