ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಬಜೆಟ್‌ನಲ್ಲಿ ಪ್ರೌಢ ಶಾಲೆಗಳಿಗೆ ₹50 ಕೋಟಿ ಮಾತ್ರವೇ ಎಂಬುದು ಸುಳ್ಳು

fact check
Published 18 ಫೆಬ್ರುವರಿ 2024, 18:41 IST
Last Updated 18 ಫೆಬ್ರುವರಿ 2024, 18:41 IST
ಅಕ್ಷರ ಗಾತ್ರ

ಸರ್ಕಾರಿ ಪ್ರೌಢ ಶಾಲೆಗಳ ಅಭಿವೃದ್ಧಿಗೆ 50 ಕೋಟಿ ಎಂದು ಬರೆದಿರುವ ಸುದ್ದಿ ವಾಹಿನಿಯೊಂದರ ಸುದ್ದಿ ಪ್ರಸಾರದ ಸ್ಕ್ರೀನ್‌ಶಾಟ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದೇ ಸ್ಕ್ರೀನ್‌ಶಾಟ್‌ನೊಂದಿಗೆ ‘ಮಂದಿರ ಬದಲು ಶಾಲೆ ಕಟ್ಟಿ ಅಂತ ಹೇಳಿದ ಮಹಾನ್‌ ವ್ಯಕ್ತಿಗಳು ಇವಾಗ ಕಾಣೆ ಆಗ್ತಾರೆ, ಯಾಕೆಂದರೆ ವಕ್ಫ್‌ ಬೋರ್ಡ್‌ ಅಭಿವೃದ್ಧಿಗೆ 100 ಕೋಟಿ, ಕ್ರಿಶ್ಚಿಯನ್‌ ಮಿಷನರಿ ಅಭಿವೃದ್ಧಿಗೆ 200 ಕೋಟಿ, ಆದರೆ ಶಾಲೆಗೆ ಮಾತ್ರ 50 ಕೋಟಿ ಸಾಕಲ್ವಾ...?’ ಎಂಬ ಬರಹವೂ ಇದೆ. ಫೆ. 16ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸಿದ್ದರು. ಈ ಬಜೆಟ್‌ನ ಸುದ್ದಿ ಪ್ರಸಾರದ ಸ್ಕ್ರೀನ್‌ಶಾಟ್‌ ಅನ್ನೇ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ, ಈ ಸುದ್ದಿಯನ್ನು ತಪ್ಪು ಅರ್ಥ ಬರುವಂತೆ ಹಂಚಿಕೊಳ್ಳಲಾಗುತ್ತಿದೆ.

ಜಾಲತಾಣಗಳಲ್ಲಿ ಹೇಳಲಾಗಿರುವಂತೆ ಸರ್ಕಾರಿ ಪ್ರೌಢ ಶಾಲೆಗಳ ಒಟ್ಟು ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ಕೇವಲ ₹50 ಕೋಟಿಯನ್ನು ಮೀಸಲಿಟ್ಟಿಲ್ಲ. ಈ ಹಣವನ್ನು ಆ ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್‌ ಲ್ಯಾಬ್‌, ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸಲು ಮೀಸಲಿಡಲಾಗಿದೆ. ಈ ಮಾಹಿತಿಯನ್ನು ಪೋಸ್ಟ್‌ಗಳಲ್ಲಿ ತಪ್ಪಾಗಿ ಬಳಸಿಕೊಳ್ಳಲಾಗಿದೆ. ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ₹600 ಕೋಟಿಯನ್ನು ಹಾಗೂ ಕಟ್ಟಡ ನಿರ್ಮಾಣ, ದುರಸ್ತಿ ಹಾಗೂ ಶೌಚಾಲಯ ನಿರ್ಮಾಣಕ್ಕಾಗಿ ₹850 ಕೋಟಿಯನ್ನು ಮೀಸಲಿಡಲಾಗಿದೆ. ಶಾಲಾ ಕಟ್ಟಡಗಳ ನಿರ್ವಹಣೆಗೆ ₹117 ಕೋಟಿ, ವಿದ್ಯಾರ್ಥಿಗಳ ಪ್ರೋತ್ಸಾಹಧನಕ್ಕೆ ₹471 ಕೋಟಿ, ಶಿಕ್ಷಣ ಗುಣಮಟ್ಟ ಸುಧಾರಣೆಗೆ ₹8 ಕೋಟಿ ಹಾಗೂ ಗುಣಮಟ್ಟದ ಭರವಸೆ ಮತ್ತು ವಿದ್ಯಾರ್ಥಿ ಪ್ರೇರಣೆಗೆ ₹8 ಕೋಟಿ ಮೀಸಲಿಡಲಾಗಿದೆ. ಹೀಗೆ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಮತ್ತು ನಿರ್ವಹಣೆಗೆಂದೇ ₹2,054 ಕೋಟಿಗೂ ಹೆಚ್ಚು ಮೊತ್ತವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಹೀಗಾಗಿ, ಪ್ರೌಢಶಾಲೆಗಳ ಅಭಿವೃದ್ಧಿಗೆ ₹50 ಕೋಟಿಯನ್ನು ಮಾತ್ರವೇ ಮೀಸಲಿಡಲಾಗಿದೆ ಎಂಬುದು ಸುಳ್ಳು ಸುದ್ದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT