ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಖ್ ವಿರೋಧಿ ದಂಗೆ: ಟೈಟ್ಲರ್ ಗುಂಪನ್ನು ಪ್ರಚೋದಿಸಿದ್ದಕ್ಕೆ ಸಾಕ್ಷಿ ಇದೆ– ಸಿಬಿಐ

Published 9 ಜನವರಿ 2024, 16:20 IST
Last Updated 9 ಜನವರಿ 2024, 16:20 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿಯ ಪುಲ್ ಬಂಗಾಶ್ ಪ್ರದೇಶದಲ್ಲಿ ಮೂವರ ಹತ್ಯೆಗೆ ಕಾರಣವಾದ 1984ರ ಸಿಖ್ ವಿರೋಧಿ ದಂಗೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಅವರು, ಉದ್ರಿಕ್ತ ಗುಂಪನ್ನು ಪ್ರಚೋದಿಸಿದ್ದನ್ನು ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ ಎಂದು ಸಿಬಿಐ ಮಂಗಳವಾರ ದೆಹಲಿ ನ್ಯಾಯಾಲಯಕ್ಕೆ ಹೇಳಿದೆ.

ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಕೇಶ್ ಸೈಲ್ ಅವರಿಗೆ ಸಿಬಿಐ ಈ ಮಾಹಿತಿ ನೀಡಿದ್ದು, ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಟೈಟ್ಲರ್ ವಿರುದ್ಧ ಆರೋಪಗಳನ್ನು ಹೊರಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದೆ.

ಟೈಟ್ಲರ್ ವಿರುದ್ಧ ಆರೋಪ ಹೊರಿಸಲು ಸಾಕಷ್ಟು ಪುರಾವೆಗಳಿವೆ. 1984ರ ಗಲಭೆಯಲ್ಲಿ ಅವರು ಗುಂಪನ್ನು ಪ್ರಚೋದಿಸಿದ್ದನ್ನು ನೋಡಿದ ಪ್ರತ್ಯಕ್ಷದರ್ಶಿಗಳು ಇದ್ದಾರೆ ಎಂದು ಸಿಬಿಐ, ನ್ಯಾಯಾಲಯಕ್ಕೆ ತಿಳಿಸಿದೆ.

ಟೈಟ್ಲರ್ ವಿರುದ್ಧದ ಆರೋಪಗಳನ್ನು ಹೊರಿಸುವ ಕುರಿತು ಸಿಬಿಐ ತನ್ನ ವಾದವನ್ನು ಮುಕ್ತಾಯಗೊಳಿಸಿದೆ.

ಟೈಟ್ಲರ್ ಪರ ವಕೀಲರು ವಾದ ಮಂಡಿಸಲು ಸಮಯ ಕೋರಿದ್ದರಿಂದ ನ್ಯಾಯಾಧೀಶರು ಜನವರಿ 22ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದರು.

ಸೆಪ್ಟೆಂಬರ್ 11, 2023ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪ್ರಕರಣವನ್ನು ಮುಂದಿನ ವಿಚಾರಣೆಗಾಗಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ಈ ಪ್ರಕರಣದಲ್ಲಿ ಆರೋಪ ಸಾಬೀತಾದರೆ ಮರಣ ದಂಡನೆ ಶಿಕ್ಷೆ ವಿಧಿಸಬಹುದಾಗಿದೆ.

ಈ ಹಿಂದೆ ಸೆಷನ್ಸ್ ನ್ಯಾಯಾಲಯವು ಟೈಟ್ಲರ್‌ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಮಂಜೂರು ಮಾಡುವ ಸಂದರ್ಭ , ಸಾಕ್ಷ್ಯ ನಾಶ ಮಾಡಬಾರದು, ನ್ಯಾಯಾಲಯದ ಅನುಮತಿ ಪಡೆಯದೇ ವಿದೇಶಗಳಿಗೆ ತೆರಳಬಾರದು ಎಂಬ ಷರತ್ತು ವಿಧಿಸಿತ್ತು.

1984ರ ನವೆಂಬರ್ 1ರಂದು ಪುಲ್ ಬಂಗಾಶ್ ಪ್ರದೇಶದ ಗುರುದ್ವಾರಕ್ಕೆ ಉದ್ರಿಕ್ತರು ಬೆಂಕಿ ಹಚ್ಚಿದ ಪರಿಣಾಮ ಮೂವರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT