ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

1993ರ ಮುಂಬೈ ಗಲಭೆ ಪ್ರಕರಣ: 31 ವರ್ಷಗಳ ಬಳಿಕ ಆರೋಪಿ ಸೆರೆ

Published 2 ಜುಲೈ 2024, 10:06 IST
Last Updated 2 ಜುಲೈ 2024, 10:06 IST
ಅಕ್ಷರ ಗಾತ್ರ

ಮುಂಬೈ: 1993ರ ಮುಂಬೈ ಗಲಭೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು 31 ವರ್ಷಗಳ ಬಳಿಕ ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಸಯ್ಯದ್ ನಾದಿರ್ ಶಾ ಅಬ್ಬಾಸ್ ಖಾನ್ (65) ಬಂಧಿತ ಆರೋಪಿ. ರಫಿ ಅಹ್ಮದ್ ಕಿದ್ವಾಯಿ ಮಾರ್ಗ ಠಾಣೆಯ ಅಧಿಕಾರಿಗಳು ಮುಂಬೈನ ಸೆವ್ರಿ ಸಮೀಪ ಆರೋಪಿಯನ್ನು ಸೋಮವಾರ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

1992ರ ಡಿಸೆಂಬರ್‌ನಲ್ಲಿ ಬಾಬರಿ ಮಸೀದಿ ಧ್ವಂಸದ ಬಳಿಕ ಮುಂಬೈನಲ್ಲಿ ಗಲಭೆಗಳು ಭುಗಿಲೆದ್ದಿದ್ದವು. ಈ ಸಂದರ್ಭದಲ್ಲಿ ಈತನ ವಿರುದ್ಧ ಕೊಲೆ ಯತ್ನ ಮತ್ತು ಕಾನೂನುಬಾಹಿರ ಸಭೆ ನಡೆಸಿದ ಆರೋಪದಡಿ ಪ್ರಕರಣ ದಾಖಲಾಗಿತ್ತು.

‍ಪ್ರಕರಣದಲ್ಲಿ ಖಾನ್‌ನನ್ನು ಪೊಲೀಸರು ಬಂಧಿಸಿದರು. ಜಾಮೀನು ಪಡೆದು ಜೈಲಿನಿಂದ ಹೊರಬಂದ ನಂತರ ಆತ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಬಳಿಕ ನ್ಯಾಯಾಲಯ ಖಾನ್‌ನನ್ನು ‌ವಾಂಟೆಡ್ ಆರೋಪಿ ಎಂದು ಘೋಷಿಸಿತ್ತು. ಆತನ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.

ಆರೋಪಿ ಪತ್ತೆಗೆ ಶೋಧ ನಡೆಸಿದ ಪೊಲೀಸರು, ಮುಂಬೈನ ಸೆವ್ರಿಯಲ್ಲಿರುವ ಆತನ ನಿವಾಸಕ್ಕೆ ಹಲವು ಬಾರಿ ಭೇಟಿ ನೀಡಿದ್ದರು. ಆದರೂ ಆರೋಪಿಯ ಸುಳಿವು ಸಿಕ್ಕಿರಲಿಲ್ಲ. ಅಂತಿಮವಾಗಿ ಆತನ ಸಂಬಂಧಿಕರ ಮೊಬೈಲ್ ಫೋನ್ ಪರಿಶೀಲಿಸಿದಾಗ ಆತನ ಇರುವಿಕೆಯ ಬಗ್ಗೆ ಮಾಹಿತಿ ಸಿಕ್ಕಿತ್ತು.

ಜೂನ್ 29ರಂದು ಆತ ತನ್ನ ನಿವಾಸಕ್ಕೆ ಭೇಟಿ ನೀಡಲಿದ್ದಾನೆ ಎಂಬ ಮಾಹಿತಿ ಪಡೆದ ಪೊಲೀಸ್ ಅಧಿಕಾರಿಗಳು ಅಂತಿಮವಾಗಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

1993ರ ಪ್ರಕರಣದಲ್ಲಿ ಖಾನ್‌ನನ್ನು ಪುನಃ ಬಂಧಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT