ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020ರಿಂದ ‘ಭಾರತ್‌ ಸ್ಟೇಜ್‌ 6’ ಮಾರಾಟ: ಸುಪ್ರೀಂ ಕೋರ್ಟ್‌ ಆದೇಶ

Last Updated 24 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ’ಭಾರತ್‌ ಸ್ಟೇಜ್‌ 4’ (ಬಿಎಸ್‌ 4) ವಾಹನಗಳನ್ನು 2020ರ ಏಪ್ರಿಲ್‌ 1ರಿಂದ ಮಾರಾಟ ಮಾಡಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್‌ ಬುಧವಾರ ತಿಳಿಸಿದೆ.

ನ್ಯಾಯಮೂರ್ತಿ ಮದನ್‌ ಬಿ. ಲೋಕುರ್‌ ಅವರನ್ನೊಳಗೊಂಡ ಮೂವರು ನ್ಯಾಯಮೂರ್ತಿಗಳ ಪೀಠವು ಈ ಬಗ್ಗೆ ಬುಧವಾರ ಆದೇಶ ಹೊರಡಿಸಿದ್ದು, 2020ರ ಏಪ್ರಿಲ್‌ 1ರಿಂದ ‘ಭಾರತ್‌ ಸ್ಟೇಜ್‌ 6’ (ಬಿಎಸ್‌ 6) ಮಾನದಂಡಗಳಿರುವ ವಾಹನಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಸ್ಪಷ್ಟಪಡಿಸಿದೆ.

ಮಿತಿಮೀರುತ್ತಿರುವ ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ನ್ಯಾಯಾಲಯ ಈ ಮಹತ್ವದ ಆದೇಶ ನೀಡಿದೆ. ‘ಭಾರತ್‌ ಸ್ಟೇಜ್‌–4’ ಮಾನದಂಡಗಳನ್ನು ಪೂರೈಸದ ವಾಹನ ತಯಾರಕರಿಗೆ 2020ರ ಏಪ್ರಿಲ್‌ 1ರ ಬಳಿಕವೂ ಹೆಚ್ಚಿನ ಸಮಯಾವಕಾಶ ನೀಡಬೇಕು ಎನ್ನುವ ಕುರಿತಾದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

ಈ ಮೊದಲು ನಡೆದ ವಿಚಾರಣೆಯಲ್ಲಿ, 2020ರ ಮಾರ್ಚ್‌ 31ರವರೆಗೆ ತಯಾರಿಸಿದ ’ಭಾರತ್‌ ಸ್ಟೇಜ್‌–4’ ಮಾನದಂಡಗಳನ್ನು ಪೂರೈಸದ ನಾಲ್ಕು ಚಕ್ರದ ವಾಹನಗಳನ್ನು 2020ರ ಜೂನ್‌ 30ರವರೆಗೆ ಮಾರಾಟ ಮಾಡಲು ಕಾಲಾವಕಾಶ ನೀಡುವ ಕೇಂದ್ರದ ಪ್ರಸ್ತಾವವನ್ನು ಅಮಿಕಸ್‌ ಕ್ಯೂರಿ ಅಪರಜಿತಾ ಸಿಂಗ್ ವಿರೋಧಿಸಿದ್ದರು. ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಅಪರಜಿತಾ ಸಿಂಗ್‌ ಅವರು ನ್ಯಾಯಾಲಯಕ್ಕೆ ಸಲಹೆ ನೀಡುತ್ತಿದ್ದಾರೆ.

’ಭಾರತ್‌ ಸ್ಟೇಜ್‌–4’ ಮಾನದಂಡಗಳನ್ನು ಪೂರೈಸದ ಭಾರಿ ಸಾರಿಗೆ ವಾಹನಗಳ ಮಾರಾಟಕ್ಕೂ 2020ರ ಸೆಪ್ಟೆಂಬರ್‌ 30ರವರೆಗೆ ಕಾಲಾವಕಾಶ ನೀಡುವ ಕೇಂದ್ರದ ನಿರ್ಧಾರವನ್ನು ಸಹ ಅಪರಜಿತಾ ಸಿಂಗ್‌ ವಿರೋಧಿಸಿದ್ದರು.

ದೇಶದಾದ್ಯಂತ ‘ಭಾರತ್‌ ಸ್ಟೇಜ್‌–4’ರಿಂದ ‘ಭಾರತ್‌ ಸ್ಟೇಜ್‌–6’ಕ್ಕೆ ನೇರವಾಗಿ ಬದಲಾವಣೆಯಾಗುವುದರಿಂದ ಹೆಚ್ಚಿನ ಕಾಲಾವಕಾಶ ನೀಡುವುದು ಅಗತ್ಯವಿದೆ ಎಂದು ಅಟೊಮೊಬೈಲ್‌ ತಯಾರಕರು ಪ್ರತಿಪಾದಿಸಿದ್ದರು.

2020ರ ಏಪ್ರಿಲ್‌1ರ ಬಳಿಕವೂ ‘ಭಾರತ್‌ ಸ್ಟೇಜ್‌–4’ ವಾಹನಗಳನ್ನು ಮಾರಾಟ ಮಾಡಲು ಅವಕಾಶ ನೀಡುವುದು ಸೂಕ್ತ ಎಂದು ಕೇಂದ್ರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರಲ್‌ ಜನರಲ್‌ ಎ.ಎನ್‌.ಎಸ್‌. ನಾಡಕರ್ಣಿ ಸಮರ್ಥಿಸಿಕೊಂಡಿದ್ದರು.

‘ಬಿಎಸ್‌ 5’ ಇಲ್ಲ

ಮೋಟಾರ್‌ ವಾಹನಗಳಿಂದಾಗುವ ವಾಯು ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಮಾನದಂಡಗಳನ್ನು ನಿಗದಿಪಡಿಸಿ ‘ಭಾರತ್‌ ಸ್ಟೇಜ್‌’ ವ್ಯವಸ್ಥೆಯನ್ನು ಜಾರಿಗೊಳಿಸಿದೆ.

’ಭಾರತ್‌ ಸ್ಟೇಜ್‌ 4’ ಮಾನದಂಡಗಳು ದೇಶದಾದ್ಯಂತ 2017ರ ಏಪ್ರಿಲ್‌ನಿಂದ ಜಾರಿಯಾಗಿತ್ತು. ’ಭಾರತ್‌ ಸ್ಟೇಜ್‌–5’ ಮಾನದಂಡಗಳನ್ನು ಕೈಬಿಟ್ಟು ನೇರವಾಗಿ ‘ಭಾರತ್‌ ಸ್ಟೇಜ್‌–6’ ಮಾನದಂಡಗಳನ್ನೇ ಅಳವಡಿಸಿಕೊಳ್ಳುವುದಾಗಿ ಕೇಂದ್ರ ಸರ್ಕಾರ 2016ರಲ್ಲಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT