ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ ಕೋಟಾ: ಟ್ರಯಲ್ಸ್‌ನಿಂದ ವಿನಾಯ್ತಿ 

Published 22 ಮೇ 2024, 0:30 IST
Last Updated 22 ಮೇ 2024, 0:30 IST
ಅಕ್ಷರ ಗಾತ್ರ

ನವದೆಹಲಿ: ಆರು ಒಲಿಂಪಿಕ್ ಕೋಟಾ ವಿಜೇತರಿಗೆ ಆಯ್ಕೆ ಟ್ರಯಲ್ಸ್‌ನಿಂದ ವಿನಾಯಿತಿ ನೀಡಲು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಮಂಗಳವಾರ ನಿರ್ಧರಿಸಿದೆ. ಆದರೆ, ಅವರ ಫಾರ್ಮ್ ಮತ್ತು ಫಿಟ್‌ನೆಸ್ ಅನ್ನು ಮುಂಬರುವ ರ್‍ಯಾಂಕಿಂಗ್  ಕ್ರೀಡಾಕೂಟ ಮತ್ತು ಹಂಗೇರಿಯಲ್ಲಿ ತರಬೇತಿ ಶಿಬಿರದಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. 

ಟ್ರಯಲ್ಸ್‌ಗಳನ್ನು ನಡೆಸದಿರುವ ನಿರ್ಧಾರವನ್ನು ವಿಶಿಷ್ಟ ಸಂದರ್ಭಗಳಲ್ಲಿ ತೆಗೆದುಕೊಳ್ಳಲಾಗಿದೆ ಮತ್ತು ಭವಿಷ್ಯದಲ್ಲಿ ಇದನ್ನು ಪೂರ್ವನಿದರ್ಶನವಾಗಿ ಬಳಸಬಾರದು ಎಂದು ಡಬ್ಲ್ಯುಎಫ್ಐ ಹೇಳಿದೆ.

ಯಾವುದೇ ಕುಸ್ತಿಪಟು ಫಿಟ್ನೆಸ್ ಕೊರತೆ ಕಂಡುಬಂದರೆ, ಪ್ರವೇಶಗಳನ್ನು ಕಳುಹಿಸುವ ಗಡುವಾದ ಜುಲೈ 8 ರೊಳಗೆ ಟ್ರಯಲ್ಸ್ ಮೂಲಕ ಬದಲಿ ಆಟಗಾರನನ್ನು ಪರಿಗಣಿಸಲಾಗುವುದು ಎಂದು ಡಬ್ಲ್ಯುಎಫ್ಐ ಸ್ಪಷ್ಟಪಡಿಸಿದೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಆರು ಕೋಟಾಗಳು ದೊರೆತಿದ್ದು, ಅಮನ್ ಸೆಹ್ರಾವತ್ (57 ಕೆಜಿ) ದೇಶದ ಏಕೈಕ ಪುರುಷ ಕುಸ್ತಿಪಟು ಆಗಿದ್ದಾರೆ.

ವಿನೇಶಾ ಫೋಗಾಟ್ (50 ಕೆಜಿ), ಅಂತಿಮ್ ಪಂಘಲ್  (53 ಕೆಜಿ), ಅಂಶು ಮಲಿಕ್ (57 ಕೆಜಿ), ನಿಶಾ ದಹಿಯಾ (68 ಕೆಜಿ) ಮತ್ತು ರೀತಿಕಾ ಹೂಡಾ (76 ಕೆಜಿ) ಅರ್ಹತೆ ಪಡೆದ ಮಹಿಳಾ ಕುಸ್ತಿಪಟುಗಳು.

ಟ್ರಯಲ್ಸ್ ನಡೆಸದಂತೆ ಕುಸ್ತಿಪಟುಗಳು ಮನವಿ ಮಾಡಿದ್ದರು. ಇದು ಗಾಯಗಳಿಗೆ ಕಾರಣವಾಗಬಹುದು ಎಂದು ಮನವರಿಕೆ ಮಾಡಿದರು. ಹಾಗಾಗಿ ಅಧ್ಯಕ್ಷ ಸಂಜಯ್ ಸಿಂಗ್ ನೇತೃತ್ವದ ಆಯ್ಕೆ ಸಮಿತಿಯು ಮನವಿಯನ್ನು ಸ್ವೀಕರಿಸಿತು.

‘ನಾವು ಈ ವಿಷಯದ ಬಗ್ಗೆ ಚರ್ಚಿಸಿದ್ದೇವೆ. ಟ್ರಯಲ್ಸ್‌ನಿಂದ ಗಾಯಗಳಿಗೆ ಕಾರಣವಾಗಬಹುದು ಮತ್ತು ಭಾರತದ ಪದಕದ ಅವಕಾಶಗಳ ಮೇಲೆ ಪರಿಣಾಮ ಬೀರಬಹುದು ಎಂದು ಇಬ್ಬರೂ ಮುಖ್ಯ ತರಬೇತುದಾರರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ನಾವು ಟ್ರಯಲ್ಸ್‌ ನಡೆಸದಿರಲು ನಿರ್ಧರಿಸಿದ್ದೇವೆ‘ ಎಂದು ಸಂಜಯ್ ಸಿಂಗ್ ಸಭೆಯ ನಂತರ ಪಿಟಿಐಗೆ ತಿಳಿಸಿದರು.

ಕೋಟಾ ವಿಜೇತರು ಜೂನ್ 6-9 ರಿಂದ ಬುಡಾಪೆಸ್ಟ್‌ನಲ್ಲಿ ನಡೆಯಲಿರುವ ಯುಡಬ್ಲ್ಯುಡಬ್ಲ್ಯು  ರ್‍ಯಾಂಕಿಂಗ್ ಟೂರ್ನಿಯಲ್ಲಿ  ಸ್ಪರ್ಧಿಸಲಿದ್ದಾರೆ ಮತ್ತು ಜೂನ್ 10-21 ರಿಂದ ಟೂರ್ನಿಯ ಮುಕ್ತಾಯದ ನಂತರ ತರಬೇತಿ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ರವಿ ದಹಿಯಾ (ಪುರುಷರ 57 ಕೆಜಿ) ಮತ್ತು ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತೆ ಸರಿತಾ ಮೋರ್ (ಮಹಿಳೆಯರ 57 ಕೆಜಿ) ಅವರಿಗೆ ಪ್ಯಾರಿಸ್ ಒಲಿಂಪಿಕ್ಸ್‌ ಬಾಗಿಲು ಮುಚ್ಚಿದೆ.

ಇದರರ್ಥ ವಿನೇಶಾ ಫೋಗಾಟ್ ಈಗ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಮಾತ್ರ ಸ್ಪರ್ಧಿಸಬೇಕಾಗಿದೆ. ಟ್ರಯಲ್ಸ್ ನಲ್ಲಿ ಅಂತಿಮ್ ಪಂಘಲ್  ಅವರನ್ನು ಸೋಲಿಸಿದರೆ 53 ಕೆಜಿ ವಿಭಾಗದಲ್ಲೂ ಸ್ಪರ್ಧಿಸುವ ಅವಕಾಶವಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT