ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: ಬೆಂಗಳೂರಿಗೆ ರಾಜಸ್ಥಾನದ ‘ರಾಯಲ್ ಚಾಲೆಂಜ್‘

Published 21 ಮೇ 2024, 22:57 IST
Last Updated 21 ಮೇ 2024, 22:57 IST
ಅಕ್ಷರ ಗಾತ್ರ

ಅಹಮದಾಬಾದ್: ಫಫ್ ಡುಪ್ಲೆಸಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಉತ್ಕಟ ಅಭಿಮಾನಿ ಬಳಗದ ನಿರೀಕ್ಷೆಗಳ ಮೂಟೆಯನ್ನು ಹೊತ್ತು ಇಲ್ಲಿಗೆ ಬಂದಿಳಿದಿದೆ. 

ಟೂರ್ನಿಯ ಪ್ರಥಮಾರ್ಧದದಲ್ಲಿ ಸತತ ಸೋಲುಗಳ ಹತಾಶೆಯಿಂದ ಪುಟಿದೆದ್ದು ನಿರಂತರ ಗೆಲುವುಗಳನ್ನು ಸಾಧಿಸಿ ಪ್ಲೇ ಆಫ್‌ ಪ್ರವೇಶಿಸಿರುವ ಬೆಂಗಳೂರು ಬಳಗದಲ್ಲಿ ಈಗ ಚೊಚ್ಚಲ ಪ್ರಶಸ್ತಿ ಜಯದ ಕನಸು ಚಿಗುರೊಡೆದಿದೆ. ಅದಕ್ಕಾಗಿ ಅತಿ ಕಠಿಣವಾದ ಹಾದಿಯನ್ನು ಕ್ರಮಿಸಬೇಕಿದೆ. 

ಈ ದಾರಿಯ ಮೊದಲ ಸವಾಲು ಬುಧವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯ. ಈ ಹಣಾಹಣಿಯಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. 

ಸಂಜು ಬಳಗವು ಟೂರ್ನಿಯ ಆರಂಭದಲ್ಲಿ ಸತತ ಗೆಲುವುಗಳನ್ನು ಸಾಧಿಸಿತ್ತು. ಅಗ್ರಸ್ಥಾನ ಪಡೆಯುವ ಭರವಸೆ ಮೂಡಿಸಿತ್ತು. ಆದರೆ, ಲೀಗ್ ಹಂತದ ತನ್ನ ಕೊನೆಯ ಐದು ಪಂದ್ಯಗಳಲ್ಲಿ ಒಂದು ಮಳೆಗಾಹುತಿಯಾಯಿತು. ಇನ್ನುಳಿದ ನಾಲ್ಕರಲ್ಲಿ ಸೋತಿತು. 

ಆದರೆ ಆರ್‌ಸಿಬಿಯದ್ದು ಇದಕ್ಕೆ ತದ್ವಿರುದ್ಧ. ತನ್ನ ಮೊದಲ ಎಂಟು ಪಂದ್ಯಗಳಲ್ಲಿ ಏಳರಲ್ಲಿ ‍ಪರಾಭವಗೊಂಡಿತ್ತು. ಒಂದರಲ್ಲಿ ಒಂದು ರಾಜಸ್ಥಾನ ಎದುರಿನ ಪಂದ್ಯವೂ  ಆಗಿತ್ತು. ಆ ಹಣಾಹಣಿಯಲ್ಲಿ ಆರ್‌ಸಿಬಿಯ ವಿರಾಟ್ ಕೊಹ್ಲಿ ಮತ್ತು ರಾಜಸ್ಥಾನ ತಂಡದ ಜೋಸ್ ಬಟ್ಲರ್ ಶತಕ ದಾಖಲಿಸಿದ್ದರು. ಆದರೆ ತನ್ನ ಕೊನೆಯ ಆರು ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿ ನಾಲ್ಕರ ಘಟ್ಟಕ್ಕೆ ಆರ್‌ಸಿಬಿ ಬಂದು ನಿಂತಿದೆ. 

ಅದರಲ್ಲೂ ಕೊನೆಯ ಪಂದ್ಯದಲ್ಲಿ ‘ಹಾಲಿ ಚಾಂಪಿಯನ್’ ಚೆನ್ನೈ ಸೂಪರ್ ಕಿಂಗ್ಸ್‌ ಎದುರು ಸಾಧಿಸಿದ ರೋಚಕ ಜಯದಿಂದಾಗಿ ಫಫ್ ಬಳಗದ ಆತ್ಮವಿಶ್ವಾಸ ಉತ್ತುಂಗ ಶಿಖರದಲ್ಲಿದೆ. 

‘ಆರೆಂಜ್ ಕ್ಯಾಪ್‌’ ಧರಿಸಿರುವ ವಿರಾಟ್, ನಾಯಕ ಫಫ್, ರಜತ್ ಪಾಟೀದಾರ್, ದಿನೇಶ್ ಕಾರ್ತಿಕ್, ಕ್ಯಾಮರಾನ್ ಗ್ರೀನ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಉತ್ತಮ ಲಯದಲ್ಲಿದ್ದಾರೆ. ರಾಜಸ್ಥಾನ ಬಳಗದಲ್ಲಿರುವ ಅನುಭವಿ ವೇಗಿ ಟ್ರೆಂಟ್ ಬೌಲ್ಟ್, ಆವೇಶ್ ಖಾನ್ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರನ್ನು ಎದುರಿಸಿ ನಿಲ್ಲುವ ಸವಾಲು ಆರ್‌ಸಿಬಿ ಮುಂದಿದೆ.  

ಬಟ್ಲರ್ ಇಲ್ಲದ್ದರಿಂದ ರಾಯಲ್ಸ್ ಬ್ಯಾಟಿಂಗ್ ತುಸು ಮಂಕಾಗಿದೆ. ನಾಯಕ ಸಂಜು, ರಿಯಾನ್ ಪರಾಗ್, ಯಶಸ್ವಿ ಜೈಸ್ವಾಲ್ ಹಾಗೂ ಧ್ರುವ ಜುರೇಲ್ ಅವರ ಮೇಲೆ ಹೆಚ್ಚು ಒತ್ತಡವಿದೆ. ಪವರ್‌ಪ್ಲೇ ಅವಧಿಯಲ್ಲಿ ಅಮೋಘವಾಗಿ ಬೌಲಿಂಗ್ ಮಾಡುತ್ತಿರುವ ಮೊಹಮ್ಮದ್ ಸಿರಾಜ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ವಪ್ನಿಲ್ ಸಿಂಗ್ ಹಾಗೂ ಯಶ್ ದಯಾಳ್ ಅವರನ್ನು ಎದುರಿಸಿ ನಿಲ್ಲುವ ಸವಾಲೂ ಇವರಿಗೆ ಇದೆ. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಯಪ್

ಮಳೆ ಸುರಿದರೆ ಹೇಗೆ?

ಪ್ಲೇ ಆಫ್ ಹಾಗೂ ಫೈನಲ್ ಪಂದ್ಯಗಳ ಸಂದರ್ಭದಲ್ಲಿ ಮಳೆ ಸುರಿದರೆ ಆಟಕ್ಕೆ ಅಡ್ಡಿಯಾಗದಂತೆ ನಿಯಮಗಳನ್ನು ಐಪಿಎಲ್ ಆಡಳಿತ ಸಮಿತಿ ರೂಪಿಸಿದೆ. ಈ ಪಂದ್ಯಗಳಲ್ಲಿ ಮಳೆ ಬಂದು ಸಮಯ ನಷ್ಟವಾದರೂ ಸಂಪೂರ್ಣ ಓವರ್‌ಗಳನ್ನು ಆಡಿಸಲು 120 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಗಿದೆ.  ಒಂದೊಮ್ಮೆ ಸತತ ಮಳೆ ಸುರಿದು ಪಂದ್ಯ ನಡೆಯದೇ ಹೋದರೆ ಅಥವಾ ಅರ್ಧವಾದರೆ ಮೀಸಲು ದಿನವನ್ನೂ ಇಡಲಾಗಿದೆ. ಅಕಸ್ಮಾತ್ ಆ ಮೀಸಲು ದಿನವೂ ಪಂದ್ಯವಾಗದೇ ಹೋದರೆ ಸೂಪರ್ ಓವರ್ ಆಡಿಸಿ ಫಲಿತಾಂಶ ನಿರ್ಧರಿಸಬಹುದು. ಅದೂ ಸಾಧ್ಯವಾಗದಿದ್ದರೆ ಲೀಗ್ ಹಂತದಲ್ಲಿ ಪಡೆದ ಅಂಕ ಹಾಗೂ ನೆಟ್‌ರನ್‌ ರೇಟ್ ಆಧಾರದಲ್ಲಿ ವಿಜೇತರನ್ನು ನಿರ್ಣಯಿಸಬಹುದು ಎಂದು ಐಪಿಎಲ್ ಮೂಲಗಳು ತಿಳಿಸಿವೆ.  ಅಹಮದಾಬಾದಿನಲ್ಲಿ ಮೇ 13ರಂದು ನಡೆಯಬೇಕಿದ್ದ ಗುಜರಾತ್ ಟೈಟನ್ಸ್‌–ಕೋಲ್ಕತ್ತ ನೈಟ್ ರೈಡರ್ಸ್ ನಡುವಣ ಲೀಗ್ ಪಂದ್ಯವು  ಮಳೆಯಿಂದಾಗಿ ರದ್ದಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT