ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ರಿಲೇ ಚಾಂಪಿಯನ್‌ಷಿಪ್‌ | ಭಾರತದ ಪುರುಷರ, ಮಹಿಳೆಯರ ತಂಡಕ್ಕೆ ಬೆಳ್ಳಿ

Published 21 ಮೇ 2024, 23:30 IST
Last Updated 21 ಮೇ 2024, 23:30 IST
ಅಕ್ಷರ ಗಾತ್ರ

ಬ್ಯಾಂಕಾಕ್: ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತ ಪುರುಷರ ಮತ್ತು ಮಹಿಳೆಯರ 4x400 ಮೀ. ರಿಲೇ ತಂಡಗಳು ಮಂಗಳವಾರ ಏಷ್ಯನ್ ರಿಲೇ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದವು.

ಸುಫಾಚಲಸಾಯ್‌ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಳೆಯ ನಡುವೆ ನಡೆದ ಮಹಿಳೆಯರ ಫೈನಲ್‌ನಲ್ಲಿ ವಿದ್ಯಾ ರಾಮರಾಜ್, ಕರ್ನಾಟಕದ ಎಂ.ಆರ್. ಪೂವಮ್ಮ, ಪ್ರಾಚಿ ಚೌಧರಿ ಮತ್ತು ರೂಪಲ್ ಚೌಧರಿ ಅವರನ್ನು ಒಳಗೊಂಡ ತಂಡವು 3 ನಿಮಿಷ 33.55 ಸೆಕೆಂಡ್‌ಗಳಲ್ಲಿ ಗುರಿ ತಲುಪಿತು. ವಿಯೆಟ್ನಾಂ (3 ನಿ.30.81 ಸೆ) ಮತ್ತು ಜಪಾನ್ (3 ನಿ.35.45ಸೆ) ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕವನ್ನು ಗೆದ್ದುಕೊಂಡಿತು.

ಈ ತಿಂಗಳ ಆರಂಭದಲ್ಲಿ ಬಹಾಮಾಸ್‌ನ ನಾಸೌನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ರಿಲೇ ಕೂಟದಲ್ಲಿ ಭಾರತದ ಮಹಿಳೆಯರ ತಂಡವು 3 ನಿಮಿಷ 29.35 ಸೆಕೆಂಡ್‌ನಲ್ಲು ಗುರಿ ತಲುಪಿ ಒಲಿಂಪಿಕ್ಸ್‌ಗೆ ಟಿಕೆಟ್ ಪಡೆದಿತ್ತು. ವಿದ್ಯಾ ಮತ್ತು ಪ್ರಾಚಿ ಆ ತಂಡದಲ್ಲಿ ಇರಲಿಲ್ಲ. ಅಲ್ಲಿ ಪೂವಮ್ಮ ಮತ್ತು ರೂಪಲ್ ಅವರೊಂದಿಗೆ ಜ್ಯೋತಿಕಾ ಶ್ರೀ ದಂಡಿ ಮತ್ತು ಶುಭಾ ವೆಂಕಟೇಶನ್ ತಂಡದಲ್ಲಿದ್ದರು.

 ಮುಹಮ್ಮದ್ ಅನಾಸ್‌ ಯಾಹ್ಯಾ, ಸಂತೋಷ್ ಕುಮಾರ್, ಮಿಜೋ ಚಾಕೊ ಕುರಿಯನ್ ಮತ್ತು ಅರೋಕ್ಯ ರಾಜೀವ್ ಅವರನ್ನು ಒಳಗೊಂಡ ಪುರುಷರ ತಂಡವು ಕೂದಲೆಳೆಯ ಅಂತರದಲ್ಲಿ ಚಿನ್ನವನ್ನು ತಪ್ಪಿಸಿಕೊಂಡಿತು. ಭಾರತ ತಂಡವು 3 ನಿಮಿಷ 5.76 ಸೆಕೆಂಡ್‌ನಲ್ಲಿ ಗುರಿ ತಲುಪಿದರೆ, ಶ್ರೀಲಂಕಾ (3 ನಿ. 4.48ಸೆ) ಚಿನ್ನವನ್ನು ತನ್ನದಾಗಿಸಿಕೊಂಡಿತು. ವಿಯೆಟ್ನಾಂ ತಂಡ (3 ನಿ. 7.37ಸೆ) ಕಂಚು ಗೆದ್ದಿತು.

ಮೊದಲ ಲೆಗ್‌ನ ನಂತರ ಶ್ರೀಲಂಕಾ ತಂಡವು ಮುನ್ನಡೆಯಲ್ಲಿತ್ತು. ಎರಡನೇ ಲೆಗ್‌ನಲ್ಲಿ ಸಂತೋಷ್ ಭಾರತಕ್ಕೆ ಮುನ್ನಡೆ ಒದಗಿಸಿದರು. ಮೂರನೇ ಲೆಗ್‌ನಲ್ಲಿ ಚಾಕೊ ಮುನ್ನಡೆಯನ್ನು ಕಾಯ್ದುಕೊಂಡರು. ಆದರೆ, ಶ್ರೀಲಂಕಾದ ಆ್ಯಂಕರ್ ಓಟಗಾರ ಹೇವಾ ಕಳಿಂಗ ಕುಮಾರಗೆ ಅಂತಿಮ ಹಂತದಲ್ಲಿ ಅರೋಕ್ಯ ಅವರನ್ನು ಹಿಂದಿಕ್ಕಿದರು.

ಈ ತಿಂಗಳ ಆರಂಭದಲ್ಲಿ ಬಹಾಮಾಸ್‌ನಲ್ಲಿ ಪುರುಷರ ತಂಡವು 3 ನಿಮಿಷ 3.23 ಸೆಕೆಂಡ್‌ನಲ್ಲಿ ಗುರಿ ತಲುಪಿ ಒಲಿಂಪಿಕ್ಸ್ ಕೋಟಾವನ್ನು ಕಾಯ್ದಿರಿಸಿತ್ತು. ಸಂತೋಷ್ ಮತ್ತು ಚಾಕೊ ಆ ತಂಡದ ಭಾಗವಾಗಿರಲಿಲ್ಲ. ಆ ತಂಡದಲ್ಲಿ ಯಾಹ್ಯಾ, ಅರೋಕ್ಯ ಅವರೊಂದಿಗೆ ಮುಹಮ್ಮದ್ ಅಜ್ಮಲ್‌, ಅಮೋಜ್ ಜೇಕಬ್‌ ಇದ್ದರು.

ಸೋಮವಾರ ಭಾರತದ 4x400 ಮೀಟರ್‌ ಮಿಶ್ರ ರಿಲೇ ತಂಡವು ರಾಷ್ಟ್ರೀಯ ದಾಖಲೆಯೊಂದಿಗೆ ಇಲ್ಲಿ ಚಿನ್ನ ಗೆದ್ದಿತ್ತು. ಆ ತಂಡದಲ್ಲಿ ಅಜ್ಮಲ್‌, ಜೇಕಬ್‌, ಜ್ಯೋತಿಕಾ ಮತ್ತು ಶುಭಾ ಸ್ಪರ್ಧಿಸಿದ್ದರು. ಹೀಗಾಗಿ ಅವರು ಮಂಗಳವಾರ ಫೀಲ್ಡ್‌ಗೆ ಇಳಿಯಲಿಲ್ಲ. 

ಬೆಳ್ಳಿ ಪದಕ ಗೆದ್ದ ಭಾರತ ಮಹಿಳೆಯರ 4x400 ಮೀ ರಿಲೇ ತಂಡ (ಎಡದಿಂದ) ವಿದ್ಯಾ ರಾಮರಾಜ್ ಎಂ.ಆರ್. ಪೂವಮ್ಮ ಪ್ರಾಚಿ ಚೌಧರಿ ಮತ್ತು ರೂಪಲ್ ಚೌಧರಿ –ಎಕ್ಸ್‌ ಚಿತ್ರ
ಬೆಳ್ಳಿ ಪದಕ ಗೆದ್ದ ಭಾರತ ಮಹಿಳೆಯರ 4x400 ಮೀ ರಿಲೇ ತಂಡ (ಎಡದಿಂದ) ವಿದ್ಯಾ ರಾಮರಾಜ್ ಎಂ.ಆರ್. ಪೂವಮ್ಮ ಪ್ರಾಚಿ ಚೌಧರಿ ಮತ್ತು ರೂಪಲ್ ಚೌಧರಿ –ಎಕ್ಸ್‌ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT