ನವದೆಹಲಿ: ದೇಶದ ಮೂರು ಚೌಗು ಪ್ರದೇಶಗಳು ಪ್ರತಿಷ್ಠಿತ ‘ರಾಮ್‍ಸಾರ್ ತಾಣ’ (ರಾಮ್‌ಸಾರ್ ಸೈಟ್) ಗೌರವಕ್ಕೆ ಪಾತ್ರವಾಗಿವೆ.
ತಮಿಳುನಾಡಿನ ನಂಜರಾಯನ ಪಕ್ಷಿಧಾಮ ಮತ್ತು ಕಳುವೇಲಿ ಪಕ್ಷಿಧಾಮ ಹಾಗೂ ಮಧ್ಯಪ್ರದೇಶದ ತವಾ ಜಲಾಶಯ ಈ ಗೌರವಕ್ಕೆ ಪಾತ್ರವಾಗಿರುವ ಚೌಗು ಪ್ರದೇಶಗಳು.
ಇದರೊಂದಿಗೆ, ‘ರಾಮ್‌ಸಾರ್ ತಾಣ’ ಗೌರವಕ್ಕೆ ಪಾತ್ರವಾದ ತಾಣಗಳ ಸಂಖ್ಯೆ 85ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಬುಧವಾರ ತಿಳಿಸಿದ್ದಾರೆ.
ಈ 85 ಚೌಗುಪ್ರದೇಶಗಳ ಒಟ್ಟು ವಿಸ್ತೀರ್ಣ 33 ಲಕ್ಷ ಎಕರೆ ಆಗಿದ್ದು, ತಮಿಳುನಾಡಿನಲ್ಲಿ ಗರಿಷ್ಠ 18 ‘ರಾಮ್‌ಸಾರ್ ತಾಣ’ಗಳಿವೆ. 10 ತಾಣಗಳೊಂದಿಗೆ ಉತ್ತರ ಪ್ರದೇಶ ನಂತರದ ಸ್ಥಾನದಲ್ಲಿದೆ.
‘ದೇಶವು ಸ್ವಾತಂತ್ರ್ಯೋತ್ಸವ ಆಚರಿಸುವ ಈ ಸಂದರ್ಭದಲ್ಲಿ ‘ರಾಮ್ ಸಾರ್’ ತಾಣಗಳ ಪಟ್ಟಿಗೆ ದೇಶದ ಮೂರು ಚೌಗುಪ್ರದೇಶಗಳು ಸೇರ್ಪಡೆಯಾಗಿವೆ ಎಂಬ ವಿಷಯ ತಿಳಿದು ಸಂತಸವಾಗಿದೆ’ ಎಂದು ಯಾದವ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.