ನವದೆಹಲಿ: ದೇಶದಲ್ಲಿ 2014ರಿಂದೀಚೆಗೆ ಸ್ವಚ್ಛತಾ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ 453 ಮಂದಿ ಪೌರ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ತಿಳಿಸಿದೆ.
ಈ ಕುರಿತು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದು, ದೇಶದಲ್ಲಿ 766 ಜಿಲ್ಲೆಗಳ ಪೈಕಿ 732 ಜಿಲ್ಲೆಗಳು ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಪದ್ಧತಿಯಿಂದ ಮುಕ್ತಗೊಂಡಿವೆ ಎಂದು ತಿಳಿಸಿದ್ದಾರೆ.
ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಪದ್ಧತಿ ನಿರ್ಮೂಲನೆಗೆ ಮತ್ತಷ್ಟು ಬೆಂಬಲ ನೀಡಲು ‘ಸ್ವಚ್ಛ ಭಾರತ್ ಮಿಷನ್’ ಯೋಜನೆಯಡಿಯಲ್ಲಿ ₹371 ಕೋಟಿ ಅನುದಾನ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಹೇಳಿದ್ದಾರೆ.
ಮ್ಯಾನ್‌ಹೋಲ್, ಒಳಚರಂಡಿ ಸ್ವಚ್ಛತಾ ಕಾರ್ಯಗಳಿಗೆ ಬೇಕಾದ ಸುಧಾರಿತ ಯಂತ್ರೋಪಕರಣಗಳನ್ನು ಖರೀದಿಸಲು ಅನುದಾನ ಮೀಸಲಿಡಲಾಗಿದೆ. ಹೆಚ್ಚಾಗಿ ಯಂತ್ರೋಪಕರಣಗಳನ್ನು ಬಳಸುವ ಮೂಲಕ ಪೌರ ಕಾರ್ಮಿಕರ ಮೇಲಿನ ಅವಲಂಬನೆ ಕಡಿಮೆ ಮಾಡಲಾಗುತ್ತದೆ ಎಂದಿದ್ದಾರೆ.
ಹಲವು ರಾಜ್ಯಗಳಲ್ಲಿ 5,000ಕ್ಕೂ ಹೆಚ್ಚು ಸೆಪ್ಟಿಕ್ ಟ್ಯಾಂಕ್ ವಾಹನಗಳು, 1,100 ಹೈಡ್ರೊವಾಕ್ ಯಂತ್ರಗಳು ಹಾಗೂ 1,000ಕ್ಕೂ ಮ್ಯಾನ್‌ಹೋಲ್ ಡಿಸಿಲ್ಟಿಂಗ್ ಯಂತ್ರಗಳನ್ನು ಸ್ವಚ್ಛತಾ ಕಾರ್ಯಗಳಿಗೆ ಬಳಸಲಾಗುತ್ತಿದೆ. ಕಾರ್ಮಿಕರಿಗೆ ಸುರಕ್ಷತಾ ಸಾಧನಗಳನ್ನು ಒದಗಿಸುವುದರ ಜತೆಗೆ ಜಾಗೃತಿ ಮೂಡಿಸಲು ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳನ್ನು ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.