ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ನಲ್ಲಿ ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದ 58 ಬುದ್ಧಿಮಾಂದ್ಯರ ರಕ್ಷಣೆ

Last Updated 2 ಏಪ್ರಿಲ್ 2021, 12:23 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬ್‌ನ ಗಡಿ ಜಿಲ್ಲೆಗಳಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶದ 58 ಬುದ್ಧಿಮಾಂದ್ಯರು ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪಂಜಾಬ್‌ ಸರ್ಕಾರಕ್ಕೆ ತಾಕೀತು ಮಾಡಿರುವ ಕೇಂದ್ರ ಸರ್ಕಾರ, ಈ ಗಂಭೀರ ಸಮಸ್ಯೆ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸೂಚಿಸಿದೆ.

ಪಂಜಾಬ್‌ನ ಗಡಿ ಜಿಲ್ಲೆಗಳಲ್ಲಿ ಜೀತಾದಾಳಾಗಿ ಕೆಲಸ ಮಾಡುತ್ತಿದ್ದ 58 ಮಂದಿಯನ್ನು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಸಿಬ್ಬಂದಿ ಈಗಾಗಲೇ ರಕ್ಷಿಸಿದ್ದಾರೆ.

ಇವರನ್ನು ಉತ್ತಮ ವೇತನದ ಆಮಿಷವೊಡ್ಡಿ ಪಂಜಾಬಿಗೆ ಕರೆತಂದು ಜೀತದಾಳುಗಳನ್ನಾಗಿ ಮಾಡಲಾಗಿತ್ತು. ಅಲ್ಲದೆ ಅವರ ಮೇಲೆ ದೌರ್ಜ್ಯನ್ಯವೆಸಗಲಾಗಿತ್ತು. ಅವರಿಗೆ ಮಾದಕ ದ್ರವ್ಯಗಳನ್ನು ನೀಡಿ, ಅಮಾನವೀಯ ಪರಿಸ್ಥಿತಿಯಲ್ಲಿ ದುಡಿಯುವಂತೆ ಒತ್ತಡ ಹೇರಲಾಗಿತ್ತು. ಇದು ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಪಂಜಾಬ್‌ನ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ತಿಳಿಸಿದೆ.

2019 ಮತ್ತು 2020ರಲ್ಲಿ ಗುರುದಾಸಪುರ, ಅಮೃತಸರ, ಫಿರೋಜ್‌ಪುರ ಮತ್ತು ಅಬೋಹಾರ್‌ನ ಗಡಿ ಪ್ರದೇಶಗಳಿಂದ ಈ ಕಾರ್ಮಿಕರನ್ನು ರಕ್ಷಿಸಲಾಗಿದೆ. ವಿಚಾರಣೆ ವೇಳೆ ಈ ಕಾರ್ಮಿಕರು ಬುದ್ಧಿಮಾಂದ್ಯರೆಂದು ತಿಳಿದುಬಂದಿದೆ ಎಂದು ಬಿಎಸ್‌ಎಫ್‌, ಸಚಿವಾಲಯಕ್ಕೆ ಮಾಹಿತಿ ನೀಡಿದೆ.

ಈ ಪತ್ರದ ಪ್ರತಿಯನ್ನು ಕೇಂದ್ರ ಕಾರ್ಮಿಕ ಇಲಾಖೆ ಕಾರ್ಯದರ್ಶಿಗೂ ಕಳುಹಿಸಿರುವ ಗೃಹ ಇಲಾಖೆಯು ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸಗಡ, ಜಾರ್ಖಂಡ್‌, ಮಧ್ಯಪ್ರದೇಶ ಮತ್ತು ಒಡಿಶಾ ಸೇರಿದಂತೆ ಎಲ್ಲ ರಾಜ್ಯಗಳ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವಂತೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT