ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಭಾಗದ ಶೇ 75 ರಷ್ಟು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ: ಕೇಂದ್ರ ಸಚಿವ

Published 7 ಮಾರ್ಚ್ 2024, 10:19 IST
Last Updated 7 ಮಾರ್ಚ್ 2024, 10:19 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಗ್ರಾಮೀಣ ಪ್ರದೇಶದ ಶೇ 75 ರಷ್ಟು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಗುರುವಾರ ತಿಳಿಸಿದ್ದಾರೆ.

ಈ ಕುರಿತು ಎಕ್ಸ್‌/ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಇದೊಂದು ಮೈಲುಗಲ್ಲು ಎಂದಿದ್ದಾರೆ. ಹಾಗೆಯೇ, ಗುರಿ ಸಾಧನೆಯತ್ತ ಶ್ರಮಿಸಿರುವ ಎಲ್ಲ ರಾಜ್ಯಗಳನ್ನು ಅಭಿನಂದಿಸಿದ್ದಾರೆ.

'ಹರ್‌ ಘರ್‌ ಜಲ್‌ (ಪ್ರತಿ ಮನೆಗೂ ನೀರು) ಸಂಪರ್ಕ ಕಲ್ಪಿಸುವ ಪಯಣದಲ್ಲಿ ನಾವು ಶೇ 75 ರಷ್ಟು ಗುರಿ ಸಾಧಿಸಿದ್ದೇವೆ. ಇದೊಂದು ದೊಡ್ಡ ಮೈಲುಗಲ್ಲು. ಪ್ರತಿ ಮನೆಗೂ ಶುದ್ಧ ನಲ್ಲಿ ನೀರಿನ ಸಂಪರ್ಕ ಕಲ್ಪಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ, ಗುರಿ ಸಾಧನೆಗಾಗಿ ಎಡೆಬಿಡದೆ ಕೆಲಸ ಮಾಡುತ್ತಿರುವ ಎಲ್ಲ ರಾಜ್ಯಗಳು ಹಾಗೂ ಜಲ ಜೀವನ್‌ ಮಿಷನ್‌ ಯೋಜನೆಯ ತಂಡಕ್ಕೆ ಅಭಿನಂದನೆಗಳು. ನಾವು ಸದೃಢ ಮತ್ತು ಆರೋಗ್ಯಕರ ಭಾರತವನ್ನು ನಿರ್ಮಿಸುತ್ತಿದ್ದೇವೆ' ಎಂದು ಬರೆದುಕೊಂಡಿದ್ದಾರೆ.

ಅಧಿಕೃತ ಅಂಕಿ–ಅಂಶಗಳ ಪ್ರಕಾರ, ಗ್ರಾಮೀಣ ಭಾಗದ ಒಟ್ಟು 19.27 ಕೋಟಿ (19,27,94,822) ಮನೆಗಳ ಪೈಕಿ, 14.46 ಕೋಟಿ (14,46,57,889) ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಕೇಂದ್ರಾಡಳಿತ ಪ್ರದೇಶಗಳೂ ಸೇರಿದಂತೆ 11 ರಾಜ್ಯಗಳ ಗ್ರಾಮೀಣ ಪ್ರದೇಶದಲ್ಲಿ ಶೇ 100 ರಷ್ಟು ಗುರಿ ಸಾಧನೆ ಮಾಡಲಾಗಿದೆ ಎನ್ನಲಾಗಿದೆ.

ಒಟ್ಟು 15 ರಾಜ್ಯಗಳು ಮತ್ತು ಕೇಂದ್ರಾಡಳಿತ ‍ಪ್ರದೇಶಗಳಲ್ಲಿ ಶೇ 75ರಿಂದ 100ರಷ್ಟು, ಆರು ರಾಜ್ಯಗಳಲ್ಲಿ ಶೇ 50ರಿಂದ 75ರಷ್ಟು ಗುರಿ ಸಾಧಿಸಲಾಗಿದೆ. ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ಶೇ 50ಕ್ಕಿಂತ ಕಡಿಮೆ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂಬುದು ಅಂಕಿ–ಅಂಶಗಳಿಂದ ತಿಳಿದುಬಂದಿದೆ.

ಕೇಂದ್ರ ಸರ್ಕಾರವು ಜಲ ಜೀವನ್‌ ಮಿಷನ್‌ ಯೋಜನೆಗೆ 2019ರಲ್ಲಿ ಚಾಲನೆ ನೀಡಿದೆ. ಈ ಯೋಜನೆಯು, 2024ರ ಹೊತ್ತಿಗೆ ದೇಶದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಗುರಿಯನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT